ಬೆಂಗಳೂರು: ದಾಖಲೆ ಇಲ್ಲದೇ ಆಟೊದಲ್ಲಿ ಸಾಗಿಸುತ್ತಿದ್ದ ₹ 1 ಕೋಟಿ ಹಣವನ್ನು ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಗುರುವಾರ ಜಪ್ತಿ ಮಾಡಿದ್ದಾರೆ.
ಎಸ್.ಜೆ.ಪಾರ್ಕ್ ಠಾಣೆ ವ್ಯಾಪ್ತಿಯ ಕಾಳಿಂಗರಾವ್ ಬಸ್ ತಂಗುದಾಣ ಬಳಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಚುನಾವಣಾಧಿಕಾರಿಗಳ ತಂಡ ಹಾಗೂ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ.
‘ಜಯನಗರದಿಂದ ವಿಜಯನಗರದ ಕಡೆಗೆ ₹ 1 ಕೋಟಿ ಹಣವನ್ನು ಆಟೊದಲ್ಲಿ ಕೊಂಡೊಯ್ಯ
ಲಾಗುತ್ತಿತ್ತು. ಪ್ರವೀಣ್ ಹಾಗೂ ಸುರೇಶ್ ಎಂಬುವವರು
ಆಟೊದಲ್ಲಿದ್ದರು. ಚೆಕ್‌ಪೋಸ್ಟ್ ಬಳಿಯೇ ಆಟೊ ಕೆಟ್ಟು ನಿಂತಿತ್ತು. ಚಾಲಕ ರಸ್ತೆಯಲ್ಲಿಯೇ ಆಟೊ ದುರಸ್ತಿ ಮಾಡಲು ಮುಂದಾಗಿದ್ದ’ ಎಂದು ಪೊಲೀಸ್ ಅಧಿಕಾರಿ
ಯೊಬ್ಬರು ಹೇಳಿದರು.
‘ಈ ಬಗ್ಗೆ ವಿಚಾರಿಸಲು ಸಿಬ್ಬಂದಿ, ಆಟೊ ಬಳಿ ಹೋಗಿದ್ದರು. ಆಟೊದಲ್ಲಿ ಬ್ಯಾಗ್‌ಗಳನ್ನು ನೋಡಿದ್ದರು. ಅನುಮಾನಗೊಂಡ ಸಿಬ್ಬಂದಿ, ಚಾಲಕನನ್ನು ವಿಚಾರಿಸಿದ್ದರು. ಉತ್ತರಿಸಲು ಚಾಲಕ ತಡವರಿಸಿದ್ದ. ಮತ್ತಷ್ಟು ಅನುಮಾನ ಬಂದು ಬ್ಯಾಗ್ ಬಿಚ್ಚಿಸಿ ನೋಡಿದಾಗ ಹಣ ಪತ್ತೆಯಾಯಿತು’ ಎಂದು ತಿಳಿಸಿದರು.
‘₹500 ಮುಖಬೆಲೆಯ ನೋಟುಗಳಿವೆ. ಆಟೊದಲ್ಲಿದ್ದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದ್ದು, ಅವರು ಯಾವುದೇ ದಾಖಲೆ ನೀಡಿಲ್ಲ. ಆಟೊದಲ್ಲಿದ್ದ ಹಣ ಸಂಸ್ಥೆಯೊಂದಕ್ಕೆ ಸೇರಿದ್ದೆಂಬ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ’ ಎಂದರು.
₹ 1.25 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ: ನಗರತ್‌ಪೇಟೆಯಲ್ಲಿ ದಾಖಲೆ
ಇಲ್ಲದೇ ಸಾಗಿಸುತ್ತಿದ್ದ ₹ 1.25
ಕೋಟಿ ಮೌಲ್ಯದ 2 ಕೆ.ಜಿ 500 ಗ್ರಾಂ ತೂಕದ ಚಿನ್ನಾಭರಣವನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
‘ಏಪ್ರಿಲ್ 11ರಂದು ರಾತ್ರಿ ವ್ಯಕ್ತಿಯೊಬ್ಬ ಚಿನ್ನಾಭರಣದ ಬ್ಯಾಗ್ ತೆಗೆದುಕೊಂಡು ಹೊರಟಿದ್ದ. ಆತನನ್ನು ಪರಿಶೀಲಿಸಿದಾಗ ಚಿನ್ನಾಭರಣ ಸಿಕ್ಕಿವೆ. ಆತ ಆಭರಣ ವ್ಯಾಪಾರಿಯೊಬ್ಬರ ಸಹಾಯಕನೆಂದು ಗೊತ್ತಾಗಿದ್ದು, ಯಾವುದೇ ದಾಖಲೆ ನೀಡಿಲ್ಲ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.