ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆ ಅಭಿವೃದ್ಧಿಗೆ ₹1,500 ಕೋಟಿ: ಸಚಿವ ಮಾಧುಸ್ವಾಮಿ

ಹಳೆ ರಾಜಕಾಲುವೆಗಳಿಗೆ ಕಾಂಕ್ರೀಟ್‌ ಗೋಡೆ
Last Updated 15 ಮಾರ್ಚ್ 2022, 21:55 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೃಹತ್‌ ಮಳೆ ನೀರುಗಾಲುವೆ, ರಾಜಕಾಲುವೆಗಳ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ ಯೋಜನೆಯಡಿ ₹1,500 ಕೋಟಿ ಮೀಸಲಿಡಲಾಗಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಅವರ ಪ್ರಶ್ನೆಗೆ ಉತ್ತರಿಸಿ, ಬಿಬಿಎಂಪಿ ವತಿಯಿಂದ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಕ್ರಿಯಾ ಯೋಜನೆ ಪಟ್ಟಿ ತಯಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮುಖ್ಯಮಂತ್ರಿಯವರ ಪರವಾಗಿ ಉತ್ತರ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ ₹1,060.85 ಕೋಟಿ ಅನುದಾನವನ್ನು ಮುಖ್ಯಮಂತ್ರಿಯವರ ನವ ನಗರೋತ್ಥಾನ ಯೋಜನೆಯಡಿ ಒದಗಿಸಲಾಗಿದೆ. ಈ ಅನುದಾನದಡಿ ಒಟ್ಟು 112.83 ಕಿ.ಮೀ ಉದ್ದದ ಪ್ರಥಮ ಮತ್ತು ದ್ವಿತೀಯ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ನಗರದಲ್ಲಿ ಸುಮಾರು 800 ಕಿ.ಮೀಗಳಷ್ಟು ಉದ್ದದ ಮಳೆನೀರುಗಾಲುವೆ ಹಾಳಾಗಿವೆ. ಇವು ಅತ್ಯಂತ ಹಳೆಯದಾಗಿದ್ದು, ಇವುಗಳಿಗೆ ಕಾಂಕ್ರೀಟ್‌ ಗೋಡೆ ಕಟ್ಟಿ ಸರಿಪಡಿಸಲಾಗುತ್ತಿದೆ. ಇದರಿಂದ ಮಳೆ ನೀರಿನಿಂದ ಆಗುತ್ತಿದ್ದ ಹಾನಿಯನ್ನು ತಡೆಯಬಹುದಾಗಿದೆ. ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ ಎಂದರು.

ಬೃಹತ್‌ ಮಳೆನೀರುಗಾಲುವೆ ವಿಭಾಗದ ವ್ಯಾಪ್ತಿಯಲ್ಲಿ ಒಟ್ಟು 859.90 ಕಿ.ಮೀ ಉದ್ದದ ಪ್ರಥಮ ಮತ್ತು ದ್ವಿತೀಯ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕಾಲುವೆಗಳ ಅಭಿವೃದ್ಧಿಯನ್ನು ಅನುದಾನದ ಲಭ್ಯತೆಯ ಆಧಾರದ ಮೇರೆಗೆ ಅವಶ್ಯಕತೆಗೆ ಅನುಗುಣವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಧುಸ್ವಾಮಿ ಹೇಳಿದರು.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಜಕಾಲುವೆ ಸುಸ್ಥಿತಿಗೆ ತರಲು ಕಳೆದ ಮೂರು ವರ್ಷಗಳಲ್ಲಿ ₹6 ಕೋಟಿ ಅನುದಾನ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಯಡಿ ಒದಗಿಸಲಾಗಿರುತ್ತದೆ. ಇದರಡಿ 6 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಶೇ 80 ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

90 ದಿನಗಳಲ್ಲಿ ಪಾವತಿಗೆ ಅವಕಾಶ
ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಆನ್‌ಲೈನ್‌ ಮೂಲಕ ಜಲಧಾರೆ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದವರಿಗೆ ಪ್ರೊರೇಟಾ ಶುಲ್ಕವನ್ನು ಪಾವತಿಸಲು ಬೇಡಿಕೆ ಪತ್ರ ದಿನಾಂಕದಿಂದ 90 ದಿನಗಳ ಅವಧಿಯಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಈ ಅವಧಿಯೊಳಗೆ ಶುಲ್ಕಪಾವತಿಸದೇ ಇರುವ ಅರ್ಜಿದಾರರು ಆನ್‌ಲೈನ್‌ ಮೂಲಕ ಮರು ಅರ್ಜಿ ಸಲ್ಲಿಸಲು ಜಲಧಾರೆ ತಂತ್ರಾಂಶದಲ್ಲಿ ಅವಕಾಶವಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT