ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 25 ಸಾವಿರ ಕೋಟಿ ಬಿಲ್ ಬಾಕಿ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿಕೆ

ಬಾಕಿ ಪಾವತಿಗೆ ಆಗ್ರಹಿಸಿ ಪ್ರತಿಭಟನೆ
Last Updated 18 ಜನವರಿ 2023, 23:24 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ ಹಾಗೂ ಪ್ಯಾಕೇಜ್‌ ಪದ್ಧತಿ ರದ್ದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಗುತ್ತಿಗೆದಾರ ಸಂಘದ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಗುತ್ತಿಗೆದಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಜಿಎಸ್‌ಟಿ ಗೊಂದಲ ಪರಿಹರಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ ಬೇಡಿಕೆ ಈಡೇರಿಸಿಲ್ಲ. ಕೆಲವು ಕಾಮಗಾರಿಗಳ ಮೇಲೆ ಪ್ರಸ್ತುತ ಚಾಲ್ತಿಯಲ್ಲಿದ್ದ ಶೇಕಡ 12 ಜಿಎಸ್‌ಟಿ ದರವನ್ನು ಶೇ 18ಕ್ಕೆ ಹೆಚ್ಚಿಸಲಾಗಿದೆ. ಹಳೆಯ ಕಾಮಗಾರಿಗೆ ಶೇ 12ರಷ್ಟು ಮಾತ್ರ ಜಿಎಸ್‌ಟಿ ಕಡಿತ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು ₹ 25 ಸಾವಿರ ಕೋಟಿಗೂ ಹೆಚ್ಚು ಮೊತ್ತ ಬಿಡುಗಡೆಯಾಗಬೇಕಾಗಿದ್ದು, ತಕ್ಷಣವೇ ಬಿಡುಗಡೆ ಮಾಡಬೇಕು’ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆಗ್ರಹಿಸಿದರು.

‘ಲೋಕೋಪಯೋಗಿ, ಜಲ ಸಂಪನ್ಮೂಲ ಇಲಾಖೆ ಮತ್ತು ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆದಿವೆ. ಲೋಕೋಪಯೋಗಿ ಇಲಾಖೆಯಲ್ಲಿ ₹ 4 ಸಾವಿರ ಕೋಟಿ, ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ₹ 8 ಸಾವಿರ ಕೋಟಿ ಮತ್ತು ಬಿಬಿಎಂಪಿ ₹ 3 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿವೆ. ಮೂರು ವರ್ಷದಿಂದ ಯಾವುದೇ ಇಲಾಖೆಯಿಂದಲೂ ಹಣ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಅವರು ದೂರಿದರು.

‘ಪ್ಯಾಕೇಜ್ ಪದ್ಧತಿ ಕೈಬಿಡಿ’: ‘ಪ್ಯಾಕೇಜ್ ಪದ್ಧತಿಯಿಂದ ಸ್ಥಳೀಯ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಸಾಧ್ಯ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಪದ್ಧತಿಯಿಂದ ನೆರೆ ರಾಜ್ಯದ ಗುತ್ತಿಗೆದಾರರಿಗೆ ಹೆಚ್ಚು ಪ್ರಯೋಜನ ಆಗುತ್ತಿದೆ. ಪ್ರತಿ ಕಾಮಗಾರಿಗೂ ಪ್ರತ್ಯೇಕ ಟೆಂಡರ್‌ ಕರೆದರೆ ರಾಜ್ಯದ ಗುತ್ತಿಗೆದಾರರಿಗೆ ನೆರವಾಗಲಿದೆ’ ಎಂದು ಹೇಳಿದರು.

‘ಸಂಘವು ಯಾವುದೇ ಪಕ್ಷ ಅಥವಾ ಸರ್ಕಾರ ವಿರುದ್ಧ ಆಪಾದನೆ ಮಾಡುತ್ತಿಲ್ಲ. ವ್ಯವಸ್ಥೆ ಸರಿಯಾಗಬೇಕೆಂದು ಪ್ರಶ್ನಿಸುತ್ತಿದ್ದೇವೆ. ಪ್ರತಿ ಬಾರಿ ಸರ್ಕಾರದ ನೇತೃತ್ವ ಬದಲಾದಾಗಲೂ ಭಷ್ಟಾಚಾರ ಹೆಚ್ಚುತ್ತಿದೆ ಎನ್ನುವುದು ಆತಂಕಕ್ಕೆ ಕಾರಣವಾಗಿದೆ’ ಎಂದು ಅವರು ಹೇಳಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಕಾರ್ಯಾಧ್ಯಕ್ಷ ಮಂಜುನಾಥ್‌ ಸೇರಿದಂತೆ ಹಲವರು ಇದ್ದರು.

‘ನ್ಯಾಯಾಲಯಕ್ಕೆ ದಾಖಲೆ ಸಲ್ಲಿಕೆ’
‘ಶೇಕಡ 40ರಷ್ಟು ಕಮಿಷನ್‌ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ವಕೀಲರ ಮೂಲಕ ದಾಖಲೆ ಸಲ್ಲಿಸಿದ್ದೇವೆ’ ಎಂದು ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದರು.

‘ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಕಾನೂನು ಹೋರಾಟ ಮುಂದುವರಿಯಲಿದೆ. ಕಮಿಷನ್‌ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸಮಿತಿ ರಚಿಸಲಿ. ಇಲ್ಲವೇ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಲಿ’ ಎಂದು ಹೇಳಿದರು.

‘ಶೇ 10ರಷ್ಟಿದ್ದ ಕಮಿಷನ್‌ ಈಗ ಶೇ 40ಕ್ಕೆ ಏರಿಕೆಯಾಗಿದೆ. ಕಾಮಗಾರಿಯ ಒಟ್ಟು ಮೊತ್ತದ ಶೇ 30ರಿಂದ 40ರಷ್ಟು ಹಣ ವಿವಿಧ ರೂಪಗಳಲ್ಲಿ ಸೋರಿಕೆಯಾಗುತ್ತಿದೆ. ಗುತ್ತಿಗೆ ಪಡೆಯುವುದರಿಂದ ಬಿಲ್ ಮಂಜೂರಾತಿ ತನಕ ಹಣ ಸೋರಿಕೆ ಸಾಮಾನ್ಯವಾಗಿದೆ. ಉಳಿದ ಹಣದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಈ ರೀತಿಯ ವ್ಯವಸ್ಥೆಯಿಂದ ಗುಣಮಟ್ಟದ ಕಾಮಗಾರಿ ನಡೆಸುವುದಾದರೂ ಹೇಗೆ’ ಎಂದು ಕೆಂಪಣ್ಣ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT