ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ದಿನ ₹5.61 ಕೋಟಿ ದಂಡ ಸಂಗ್ರಹ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ l ಶೇ 50ರಷ್ಟು ರಿಯಾಯಿತಿ l 2 ಲಕ್ಷ ಪ್ರಕರಣ ಇತ್ಯರ್ಥ
Last Updated 4 ಫೆಬ್ರುವರಿ 2023, 0:10 IST
ಅಕ್ಷರ ಗಾತ್ರ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿ ಇರುವ ದಂಡ ಪಾವತಿಸಲು ಜನರು ಮುಗಿಬಿದ್ದಿದ್ದು, ಶುಕ್ರವಾರ ಒಂದೇ ದಿನದಲ್ಲಿ ₹ 5.61 ಕೋಟಿ ದಂಡ ಸಂಗ್ರಹವಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿ ಮೇಲೆ ಶೇ 50ರಷ್ಟು ರಿಯಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಸಂಚಾರ ಪೊಲೀಸ್ ಠಾಣೆಗಳು, ಸಂಚಾರ ನಿರ್ವಹಣಾ ಕೇಂದ್ರ (ಟಿಎಂಸಿ) ಹಾಗೂ ಕರ್ನಾಟಕ ಒನ್‌- ಬೆಂಗಳೂರು ಒನ್ ಕೇಂದ್ರಗಳಿಗೆ ಬೆಳಿಗ್ಗೆಯಿಂದಲೇ ಆಗಮಿಸಿದ ಜನರು, ದಂಡ ಪಾವತಿಸಿ ರಶೀದಿ ಪಡೆದರು.

ಸಂಚಾರ ಠಾಣೆಯಲ್ಲಿದ್ದ ಎಎಸ್‌ಐ, ಪಿಎಸ್‌ಐ ಹಾಗೂ ಇನ್‌ಸ್ಪೆಕ್ಟರ್‌ಗಳು ಶುಕ್ರವಾರ ಇಡೀ ದಿನ ದಂಡ ಕಟ್ಟಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು. ಕೆಲ ಠಾಣೆಗಳಲ್ಲಿ ಸರದಿಯಲ್ಲಿ ನಿಂತು ಜನರು ದಂಡ ಪಾವತಿಸಿದರು.

ಪೇಟಿಎಂ ಆ್ಯಪ್‌ನಲ್ಲೂ ದಂಡ ಪಾವತಿಗೆ ಅವಕಾಶವಿದ್ದು, ಮೊಬೈಲ್ ಮೂಲಕವೇ ಹೆಚ್ಚು ಜನರು ದಂಡ ಕಟ್ಟಿದ್ದಾರೆ.

‘ಶೇ 50ರಷ್ಟು ರಿಯಾಯಿತಿ ಆದೇಶಕ್ಕೆ ಜನರು ಉತ್ತಮವಾಗಿ ಸ್ಪಂದಿಸು ತ್ತಿದ್ದಾರೆ. ಬಾಕಿ ಉಳಿಸಿಕೊಂಡಿದ್ದ ದಂಡವನ್ನು ಉತ್ಸಾಹದಿಂದ ಪಾವತಿಸುತ್ತಿದ್ದಾರೆ. ಶುಕ್ರವಾರ ಒಂದೇ ದಿನದಲ್ಲಿ ₹ 5.61 ಕೋಟಿ ಸಂಗ್ರಹವಾಗಿದ್ದು, 2 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ಸಾಮಾನ್ಯ ದಿನಗಳಲ್ಲಿ ದಂಡ ಸಂಗ್ರಹ ಮೊತ್ತ ಗರಿಷ್ಠ ₹ 10 ಲಕ್ಷದಿಂದ ₹ 15 ಲಕ್ಷ ಇರುತ್ತಿತ್ತು‘ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾನಮತ್ತ ಚಾಲನೆ ಹೊರತುಪಡಿಸಿ ಉಳಿದೆಲ್ಲ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ರಿಯಾಯಿತಿ ದೊರಕಲಿದೆ. ಸಂಚಾರ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಿ ರಶೀದಿ ಪಡೆಯಬಹುದಾಗಿದೆ. ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳು ಹಾಗೂ ಪೇಟಿಎಂ ಮೂಲಕ ದಂಡ ತುಂಬಬಹುದು. ಮಾಹಿತಿಗೆ 080-22942883 ಅಥವಾ 080-22943381 ಸಂಪರ್ಕಿಸಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT