ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್ ರುದ್ರೇಶ್ ಕೊಲೆ ಪ್ರಕರಣ: ಆರೋಪಿ ಅಸೀಂ ಶರೀಫ್ ಅರ್ಜಿ ವಜಾ

Last Updated 22 ನವೆಂಬರ್ 2018, 11:09 IST
ಅಕ್ಷರ ಗಾತ್ರ

ಬೆಂಗಳೂರು: "ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಆರೋಪದಿಂದ ನನಗೆ ಮುಕ್ತಿ ನೀಡಬೇಕು’ ಎಂದು ಕೋರಿ ಅಸೀಂ ಶರೀಫ್‌ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಸುಧೀಂದ್ರ ರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಧಾರವಾಡ ನ್ಯಾಯಪೀಠದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ಪ್ರಕಟಿಸಿತು.

"ಶಿವಾಜಿ ನಗರದ ಕಾಮರಾಜ ರಸ್ತೆಯ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಆಸಾಮಿಗಳು ಕೊಲೆ ಮಾಡಿದ್ದರು" ಎಂದು ಆರೋಪಿಸಲಾಗಿದೆ.

ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆಗೆ ನಡೆದಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರಕರಣದಿಂದ ಮುಕ್ತಿ ಕೋರಿ ಆರೋಪಿ ಶರೀಫ್‌ ವಿಶೇಷ ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಸೆಷನ್ಸ್‌ ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ.

ಆಕ್ಷೇಪಣೆ ಏನಿತ್ತು?:
’ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್‌ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ. ಸುಮ್ಮನೇ ಇದಕ್ಕೆ ಭಯೋತ್ಪಾದಕರಬಣ್ಣ ಕಟ್ಟಲಾಗಿದೆ’ ಎಂದು ಅಸೀಂ ಆಕ್ಷೇಪಿಸಿದ್ದರು.

ಈ ಮೊದಲು ಅಸೀಂ ಶರೀಫ್‌ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಹಿಂದೆ ಸರಿದಿದ್ದರು.

‘ಈಗಾಗಲೇ ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಆದೇಶ ಮಾಡಿದ್ದೇನೆ. ಆದ್ದರಿಂದ ಈಗಿನ ಪ್ರಕರಣದ ಆದೇಶ ಹಿಂದಿನ ಆದೇಶಕ್ಕೆ ವೈರುದ್ಧ್ಯ ಎನಿಸಬಾರದು ಎಂಬ ಕಾರಣದಿಂದ ಹಿಂದೆ ಸರಿಯುತ್ತಿದ್ದೇನೆ’ ಎಂದು ಕುನ್ಹ ಕಾರಣ ನೀಡಿದ್ದರು.

ಪ್ರಕರಣದ ಇತರ ಆರೋಪಿಗಳೆಂದರೆ ಇರ್ಫಾನ್‌ ಪಾಷ, ವಸೀಂ ಅಹಮದ್‌, ಮೊಹಮದ್‌ ಸಾದಿಕ್‌, ಮೊಹಮದ್‌ ಮುಜೀಬುಲ್ಲಾ.

**

ಆರೋಪಿಗಳು ಪಿಎಫ್ಐ ಕಾರ್ಯಕರ್ತರು

ಎನ್‌ಐಎ ಪರ ವಾದ ಮಂಡಿಸಿದ್ದ ವಕೀಲ ಪಿ.ಪ್ರಸನ್ನಕುಮಾರ್ ಅವರ ವಾದದ ಅಂಶಗಳನ್ನು ನ್ಯಾಯಪೀಠ ಅಂಗೀಕರಿಸಿ ಅಸೀಂ ಶರೀಫ್ ಅರ್ಜಿಯನ್ನು ವಜಾ ಮಾಡಿದೆ.

* ಹತ್ಯೆಗೊಳಗಾದ ರುದ್ರೇಶ್ ಮತ್ತು ಆರೋಪಿಗಳ ನಡುವೆ ಯಾವುದೇ ದ್ವೇಷ ಅಥವಾ ವೈಮನಸ್ಯ ಇಲ್ಲವೇ ಪರಿಚಯ ಇರಲಿಲ್ಲ.

* ಎಲ್ಲ ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸಕ್ರಿಯ ಕಾರ್ಯಕರ್ತರು.

* ರುದ್ರೇಶ್ ಹತ್ಯೆಯಾದ ದಿನ ಆರ್‌ಎಸ್‌ಎಸ್ ಪಥ ಸಂಚಲನ ಇತ್ತು. ಈ ದಿನದಂದು ಯಾರಾದಾರೂ ಒಬ್ಬ ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಹತ್ಯೆ ಮಾಡಲೇಬೇಕು ಎಂದು ಆರೋಪಿಗಳು ಸಂಚು ರೂಪಿಸಿದ್ದರು.

* ಹೀಗಾಗಿ ರುದ್ರೇಶ್ ಆರ್‌ಎಸ್‌ಎಸ್ ಕಾರ್ಯಕರ್ತ ಎಂಬ ಒಂದೇ ಒಂದು ಕಾರಣಕ್ಕೆ ಹತ್ಯೆ ಮಾಡಲಾಗಿದೆ.

* ಈ ಕೃತ್ಯದ ಆರೋಪಿಯಾದ ಅಸೀಂ ಶರೀಫ ಪಿಎಫ್ಐ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂಬುದು ಗಮನಾರ್ಹ.

* ಆರೋಪಿಗಳ ದುಷ್ಕೃತ್ಯ "ಅಕ್ರಮ ಕೂಟ ಕಾಯ್ದೆ–1967ರ" ಪ್ರಕಾರ ಭಯೋತ್ಪಾದನಾ ಕೃತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT