ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಸಮೀಪವೇ ಆರ್‌ಟಿಒ ಕ್ಲರ್ಕ್ ಸುಲಿಗೆ

Last Updated 30 ಏಪ್ರಿಲ್ 2022, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಕಚೇರಿಯ ಕ್ಲರ್ಕ್ ಮಂಜುನಾಥ್ ಅವರನ್ನು ಅಡ್ಡಗಟ್ಟಿ ₹ 5 ಲಕ್ಷ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಮೈಸೂರು ರಸ್ತೆಯ ಬಾಪೂಜಿನಗರ ನಿವಾಸಿ ಸಚಿನ್ (23) ಹಾಗೂ ಜಯಂತ್ (20) ಬಂಧಿತರು. ಏಪ್ರಿಲ್ 21ರಂದು ಆರೋಪಿಗಳು ಕೃತ್ಯ ಎಸಗಿದ್ದರು. ಕ್ಲರ್ಕ್ ನೀಡಿದ್ದ ದೂರು ಆಧರಿಸಿ ಅವರಿಬ್ಬರನ್ನು ಬಂಧಿಸಲಾಗಿದೆ. ₹ 2.52 ಲಕ್ಷ ನಗದು ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಸಚಿನ್, ರಾಜಾಜಿನಗರ ಆರ್‌ಟಿಒ ಕಚೇರಿ ಬಳಿಯ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಹಣಕಾಸು ವಿಚಾರವಾಗಿ ಮಾಲೀಕನ ಜೊತೆ ಜಗಳ ಮಾಡಿದ್ದರಿಂದ, ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಕೆಲಸ ನಂಬಿ ಸಾಲ ಮಾಡಿಕೊಂಡಿದ್ದ ಸಚಿನ್, ಸಂಕಷ್ಟದಲ್ಲಿ ಸಿಲುಕಿದ್ದ’ ಎಂದೂ ತಿಳಿಸಿದರು.

‘ಆರ್‌ಟಿಒ ಕಚೇರಿಯಲ್ಲಿ ಸಂಗ್ರಹವಾಗುತ್ತಿದ್ದ ಹಣವನ್ನು ಕ್ಲರ್ಕ್‌ ಮಂಜುನಾಥ್ ಅವರು ಬ್ಯಾಂಕ್‌ಗೆ ತುಂಬಲು ಹೋಗುತ್ತಿದ್ದರು. ಈ ಸಂಗತಿ ತಿಳಿದಿದ್ದ ಸಚಿನ್, ಮಂಜುನಾಥ್‌ ಅವರನ್ನು ಅಡ್ಡಗಟ್ಟಿ ಸುಲಿಗೆ ಮಾಡಲು ಸಂಚು ರೂಪಿಸಿದ್ದ. ಪಕ್ಕದ ಮನೆಯ ಸ್ನೇಹಿತ ಜಯಂತ್ ಸಹಾಯ ಪಡೆದಿದ್ದ’ ಎಂದೂ ತಿಳಿಸಿದರು.

ಠಾಣೆ ಸಮೀಪದಲ್ಲೇ ಸುಲಿಗೆ: ‘ಪೊಲೀಸ್‌ ಠಾಣೆ ಸಮೀಪದಲ್ಲೇ ಆರ್‌ಟಿಒ ಕಚೇರಿ ಇದೆ. ಅಲ್ಲಿ ಸಂಗ್ರಹವಾಗಿದ್ದ ₹ 5 ಲಕ್ಷ ಹಣವನ್ನು ತೆಗೆದುಕೊಂಡು ಕ್ಲರ್ಕ್ ಮಂಜುನಾಥ್ ಬ್ಯಾಂಕಿಗೆ ಹೊರಟಿದ್ದರು. ಹೆಲ್ಮೆಟ್‌ ಧರಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು, ಠಾಣೆ ಸಮೀಪದ ರಸ್ತೆಯಲ್ಲೇ ಅವರನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು’ ಎಂದೂ ಹೇಳಿದರು.

‘ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಹಾಗೂ ಕೆಲ ತಾಂತ್ರಿಕ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಸಾಲ ತೀರಿಸಲು ಹಣವಿಲ್ಲದಿದ್ದರಿಂದ ಸುಲಿಗೆ ಮಾಡಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT