ಶರೀಫ್‌ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

7
ಆರ್‌ಎಸ್‌ಎಸ್ ಸ್ವಯಂ ಸೇವಕ ರುದ್ರೇಶ್ ಕೊಲೆ ಪ್ರಕರಣ

ಶರೀಫ್‌ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Published:
Updated:

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಲ್ಲಿ ನನ್ನ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಪ್ರಕರಣದ ಐದನೇ ಆರೋಪಿ ಅಸೀಮ್ ಶರೀಫ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದೆ.

ಪ್ರಕರಣದಿಂದ ಕೈಬಿಡುವಂತೆ ಕೋರಿ ಅಸೀಂ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಈ ಮೊದಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯದ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಅಸೀಂ ಶರೀಫ್ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಕರಣದ ವಾದ-ಪ್ರತಿವಾದಗಳನ್ನು ಆಲಿಕೆ  ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರರಾವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಆದೇಶ ಕಾಯ್ದಿರಿಸಿತು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಆರೋಪಿ ಪರ ವಕೀಲರು, ‘ಕೊಲೆ ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದ ಸ್ಥಳದಲ್ಲಿ ಆರೋಪಿ ಇರಲಿಲ್ಲ. ಅರ್ಜಿದಾರರಿಗೆ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆ ನಂಟಿದೆ ಎಂದರೂ, ಅದು ನಿಷೇಧಿತ ಸಂಘಟನೆಯಲ್ಲ’  ಎಂದರು.

‘ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಅರ್ಜಿದಾರರನ್ನು ಅನಗತ್ಯವಾಗಿ ಸಿಲುಕಿಸಲಾಗಿದೆ. ಆದ್ದರಿಂದ ಅವರ ವಿರುದ್ಧದ ಆರೋಪಗಳನ್ನು ಕೈಬಿಡಬೇಕು’ ಎಂದು ಮನವಿ ಮಾಡಿದರು.

ಎನ್‌ಐಎ ಪರ ವಕೀಲ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ‘ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದು, ಎನ್‌ಐಎ ಕಾಯ್ದೆ–2008ರ ಕಲಂ 21ರ ಪ್ರಕಾರ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅವಕಾಶವಿಲ್ಲ’ ಎಂದರು.

‘ಪ್ರಕರಣದ ಆರೋಪಿಗಳು ಹತ್ಯೆ ನಡೆಯುವ ಮುನ್ನ ಹಾಗೂ ಹತ್ಯೆ ನಡೆದ ಬಳಿಕ ಅರ್ಜಿದಾರನ ಜತೆ ಸಂಪರ್ಕದಲ್ಲಿದ್ದಾರೆ’ ಎಂದೂ ನ್ಯಾಯಪೀಠಕ್ಕೆ ವಿವರಿಸಿದರು.

ಅಸೀಮ್ ಶರೀಫ್ ನಗರದ ಬೆನ್ಸನ್‌ ಟೌನ್‌ ನಿವಾಸಿ. ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ.
ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಕೊಲೆ ಮಾಡಿದ್ದರು.

ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರು ನಡೆದಿತ್ತು. ಈ ಪ್ರಕರಣದ ಆರನೇ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ.

‘ಸಿಮಿ ಜೊತೆ ಸಂಪರ್ಕವಿದೆ’

‘ಆರೋಪಿ ಅಸೀಂ ಷರೀಫ್‌ಗೆ ನಿಷೇಧಿತ ಇಂಡಿಯನ್ ಮುಜಾಹಿದ್ದೀನ್ ಮತ್ತು ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ) ಸಂಘಟನೆ ಸದಸ್ಯ ಸೈಯ್ಯದ್ ಇಸ್ಮಾಯಿಲ್‌ ಅಫಾಕ್ ಜತೆ ಸಂಪರ್ಕವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ’ ಎಂದು ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್ ಪ್ರತಿಪಾದಿಸಿದರು.

‘ಅರ್ಜಿದಾರ ಪ್ರಕರಣದ ಇತರ ಆರೋಪಿಗಳೊಡನೆ ಸೇರಿ ಜಯಮಹಲ್‌ನ ಅಕ್ಸಾ ಹಾಗೂ ಶಿವಾಜಿ ನಗರದ ಛೋಟಾ ಚಾರ್ಮಿನಾರ್ ಮಸೀದಿಗಳಲ್ಲಿ ಸಂಚು ರೂಪಿಸಿದ್ದಾರೆ. ಪ್ರಕರಣದಲ್ಲಿ ಇವರ ಪಾತ್ರವೂ ಇದೆ ಎಂಬುದು ಇದರಿಂದ ಸಾಬೀತಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು’ ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !