ಗ್ರಾಮಗಳ ಅಭಿವೃದ್ಧಿಗೆ ನೆರವು ನೀಡಿ

7
ಕಲಾಂ ಅವರ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಮನವಿ

ಗ್ರಾಮಗಳ ಅಭಿವೃದ್ಧಿಗೆ ನೆರವು ನೀಡಿ

Published:
Updated:
Deccan Herald

ಬೆಂಗಳೂರು: ‘ಉನ್ನತ ಶಿಕ್ಷಣ ಪಡೆದವರು ಹಾಗೂ ಹೊಸ ಸಂಶೋಧನೆಗಳನ್ನು ಕೈಗೊಂಡವರು ಬದುಕು ಕೊಟ್ಟ ಗ್ರಾಮಗಳನ್ನು ಮರೆಯಬೇಡಿ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ನಿಮ್ಮ ಜ್ಞಾನದ ಬಳಕೆಯಾಗಲಿ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಇಂಟರ್‌ ನ್ಯಾಷನಲ್ ಸ್ಕೂಲ್‌ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ಕಾಲೇಜಿನಲ್ಲಿ ಬೆಂಗಳೂರು ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಎಪಿಜೆ ಅಬ್ದುಲ್ ಕಲಾಂ ಅವರ ನೆನಪಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುತ್ತಿದೆ. ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಇದರ ಲಾಭ ಪಡೆದು ಕೃಷಿ ಮತ್ತು ಆಹಾರ ಕ್ಷೇತ್ರದ ಉನ್ನತಿಗೆ ಶ್ರಮಿಸಬೇಕಿದೆ. ಯುವಶಕ್ತಿಯ ಸಬಲೀಕರಣಕ್ಕೆ ಸರ್ಕಾರ ಒತ್ತು ನೀಡಲಿದ್ದು, ಉದ್ಯೋಗಾವಕಾಶಗಳ ಸೃಷ್ಟಿಗೆ ಗಂಭೀರ ಪ್ರಯತ್ನ ನಡೆದಿದೆ’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಆರ್.ಶೆಟ್ಟಿ ‘ವಿದ್ಯೆಯಿಂದ ವಿವೇಕ ಹೆಚ್ಚಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪಶ್ಚಿಮದ ಮಾದರಿಯ ಬಳಕೆಯಾಗಬೇಕು. ಆದರೆ ನೆಲಮೂಲದ ಶಿಕ್ಷಣದ ಮಾದರಿಗಳನ್ನೂ ಉಳಿಸಿಕೊಳ್ಳಬೇಕು’ ಎಂದರು.

ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಕೊಠಾರಿ, ‘28 ವರ್ಷಗಳ ಹಿಂದೆ ಪ್ರಾರಂಭವಾದ ಶಿಕ್ಷಣ ಸಂಸ್ಥೆ ಪ್ರತಿವರ್ಷವೂ ಹೊಸ ಕೋರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಹೊಸದಾಗಿ ಸ್ನಾತಕೊತ್ತರ ವಿಭಾಗದಲ್ಲಿ ಕ್ರೀಡಾ ಮ್ಯಾನೇಜ್‌ಮೆಂಟ್‌ ಕೋರ್ಸ್ ತೆರೆಯಲಾಗಿದೆ. ಅಶ್ವಿನಿ ನಾಚಪ್ಪ, ಸೋಮದೇವ್ ದೇವವರ್ಮನ್‌ ಸೇರಿದಂತೆ ಪ್ರಸಿದ್ಧ ಕ್ರೀಡಾಪಟುಗಳು ಬೋಧನೆ ಮಾಡಲಿದ್ದಾರೆ’ ಎಂದರು.

ಶಿಕ್ಷಣ ಕ್ಷೇತ್ರದ ಅನೇಕ ಸಾಧಕರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !