ಸದಾನಂದ ‘ಗೌಡ’ ಹೇಳಿಕೆ: ನೆಟ್ಟಿಗರ ಆಕ್ರೋಶ

ಶುಕ್ರವಾರ, ಜೂಲೈ 19, 2019
22 °C

ಸದಾನಂದ ‘ಗೌಡ’ ಹೇಳಿಕೆ: ನೆಟ್ಟಿಗರ ಆಕ್ರೋಶ

Published:
Updated:

ಬೆಂಗಳೂರು: ‘ಗೌಡ’ ಎಂದು ಉಪನಾಮ ಸೇರಿಸಿಕೊಂಡ ಕಾರಣಕ್ಕೆ ಶಾಸಕನಾಗಿ ಗೆಲುವು ಸಾಧಿಸಿದೆ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವನೂ ಆದೆ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

‘ನೀವು ಸದಾನಂದಗೌಡ ಎಂಬ ಕಾರಣಕ್ಕೆ ಮತ ಹಾಕಿದ್ದಲ್ಲ. ನರೇಂದ್ರ ಮೋದಿಯವರ ಆಡಳಿತ ನೋಡಿ ಮತ ಹಾಕಿದ್ದೇವೆ. ಬಿಜೆಪಿ ತತ್ವ ಸಿದ್ಧಾಂತವನ್ನು ಒಪ್ಪಿ ಮತವನ್ನು ಬೆಂಬಲಿಸಿದ್ದೇವೆಯೇ ಹೊರತು ನೀವು ಗೌಡ ಎಂಬ ಕಾರಣಕ್ಕಾಗಿ ಅಲ್ಲ. ಉತ್ತರ ಪ್ರದೇಶ, ಬಿಹಾರ ರಾಜ್ಯಗಳಲ್ಲಿ ಜಾತಿ ರಾಜಕಾರಣಕ್ಕೆ ಮೋದಿ ಅಂತ್ಯ ಹಾಡಿದರು. ಆದರೆ, ಇಲ್ಲಿ ನೀವು ಮಾಡುತ್ತಿರುವುದೇನು’ ಎಂದು ಪ್ರಶ್ನಿಸಿದ್ದು, ಫೇಸ್‌ಬುಕ್‌, ಟ್ವಿಟ್ಟರ್‌ ಖಾತೆಗಳಲ್ಲಿ ಭಾರಿ ಟ್ರೋಲ್‌ ಆಗಿದೆ.

ಇದಕ್ಕೆ ಟ್ವಿಟ್ಟರ್‌ ಖಾತೆಯ ಮೂಲಕ ಪ್ರತಿಕ್ರಿಯಿಸಿರುವ ಸದಾನಂದಗೌಡ ‘ನನ್ನ ಬಿಜೆಪಿ ಪಕ್ಷ, ನನ್ನ ಹೆತ್ತ ತಾಯಿ ಸಮಾನ. ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ ಎಲ್ಲವನ್ನೂ ಕೊಟ್ಟಿದೆ. ನನ್ನ ಪಕ್ಷವು ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ ಪ್ರಾತಿನಿಧ್ಯವನ್ನು ನನ್ನ ಮೂಲಕ ಕೊಟ್ಟಿದೆ ಅನ್ನುವ ಮಾತನ್ನು ನಾನು ಹೆಮ್ಮೆಯಿಂದ ಕೇಳಿಕೊಂಡದ್ದನ್ನು ಬೇರೆ ರೀತಿ ಅರ್ಥೈಸಲಾಗಿದೆ’ ಎಂದಿದ್ದಾರೆ.

‘ಜಾತ್ಯತೀತವಾಗಿ, ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು ಮತ್ತು ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ’ ಎಂದೂ ಸದಾನಂದಗೌಡ ನೆಟ್ಟಿಗರ ಆಕ್ರೋಶ ತಣಿಸುವ ಕೆಲಸ ಮಾಡಿದ್ದಾರೆ.

‘ನೀವು ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ. ಕೆಲವೊಂದು ಹೇಳಿಕೆಗಳನ್ನು ಕೊಡುವ ಮುನ್ನ ಅದರ ಒಳಿತು ಕೆಡಕುಗಳನ್ನು ಯೋಚಿಸಿ ಹೇಳಿಕೆ ಕೊಡುವುದು ಒಳ್ಳೆಯದು. ಈ ತರಹದ ಹೇಳಿಕೆಗಳು ನಿಮ್ಮ ಜಾತಿಯನ್ನು ಗುರುತಿಸುವವರಿಗೆ ಇಷ್ಟವಾಗುತ್ತವೆಯೇ ಹೊರತು‌ ನಿಮ್ಮ ಕೆಲಸಗಳನ್ನು ಗುರುತಿಸುವವರಿಗಲ್ಲ’ ಎಂದು ಎಂ.ಜೆ ಎಂಬುವವರು ಟ್ವೀಟ್‌ ಮಾಡಿದ್ದಾರೆ.

‘ನಮಗೆ ಬಿಜೆಪಿ ತಾಯಿ, ಭಾರತ ಮಾತೆ ಇದ್ದಂತೆ. ಪಕ್ಷ ನಮಗೆ ಯಾವುದೇ ರೀತಿಯ ಅಧಿಕಾರ ಹಾಗೂ ಸ್ಥಾನಮಾನ ಕೊಟ್ಟಿಲ್ಲವಾದರೂ ಪಕ್ಷಕ್ಕೆ ಯಾವತ್ತಿಗೂ ನಿಷ್ಠೆ ಇದೆ’ ಎಂದು ಪಂಚಾಕ್ಷರಯ್ಯ ಹೇಳಿದ್ದಾರೆ. 

‘ನೀವು ಜಾತಿ ಹೆಸರಿನ ರಾಜಕೀಯ ಮಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮಾನ ಕಳೆಯಬೇಡಿ. ನಮೋ ಅವರು ತಮ್ಮ ಜಾತಿ, ಅಡ್ಡ ಹೆಸರಿನ ಬಗ್ಗೆ ಎಂದಾದರೂ ಮಾತನಾಡಿದ್ದಾರಾ’ ಎಂದು ರಾಜ್‌ ಎಂಬುವವರು ಪ್ರಶ್ನಿಸಿದ್ದಾರೆ. ‘ನಿಮ್ಮ ಗೌಡ್ಕಿ ನೋಡಿ ಮತ ಹಾಕಿಲ್ಲ. ನಮಗೆ ಮೋದಿ ತರಹದ ಚೌಕಿದಾರ ಬೇಕು ಎನ್ನುವ ಕಾರಣಕ್ಕೆ ಮತ ಹಾಕಿದ್ದು’ ಎಂದು ಗುರುರಾಜ್‌ ಪ್ರತಿಕ್ರಿಯಿಸಿದ್ದಾರೆ.

‘ನಿಮಗೊಂದು ಸವಾಲು... ಬರಿ ಗೌಡ ಎಂಬ ಜಾತಿಯಿಂದ ಮಂತ್ರಿ ಆಗಿಲ್ಲ. ಹಿಂದೂಗಳಿಂದ ಮಂತ್ರಿ ಆದೆ ಎನ್ನಿ ನೋಡೋಣ’ ಎಂದು ಸಾನ್ವಿ ಎಂಬುವವರು ಸವಾಲು ಹಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !