ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಒರೆಗೆ ಹಚ್ಚಿದ ‘ಪ್ರಕಲ್ಪ–18’

Last Updated 10 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಮಾದರಿಗಳ ಪ್ರದರ್ಶನ ‘ಪ್ರಕಲ್ಪ–18’ ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ತಾಂತ್ರಿಕ ಸಾಮರ್ಥ್ಯ ಅನಾವರಣಗೊಳಿಸಿತು.

ಕಂಪ್ಯೂಟರ್‌ ಸೈನ್ಸ್‌, ಇನ್‌ಫಾರ್ಮೆಶನ್‌ ಸೈನ್ಸ್‌, ಮೆಕ್ಯಾನಿಕಲ್‌ ಎಂಜಿನಿಯರಿಂಗ್‌, ಎಂ.ಟೆಕ್‌ ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಎಲೆಕ್ಟ್ರಾನಿಕ್‌ ಸಾಧನ, ತಂತ್ರಜ್ಞಾನಗಳ ಮಾದರಿಗಳು ಹಾಗೂ ಆರ್ಕಿಟೆಕ್ಟ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ರೂಪಿಸಿದ್ದ ವಿನ್ಯಾಸಗಳು ಗಮನ ಸೆಳೆದವು.

ಬೆಂಕಿ ಮತ್ತು ಬಿಳಿ ನೊರೆ ಕಾರುವ ಬೆಳ್ಳಂದೂರು ಕೆರೆ ಮಾದರಿ, ಕೃಷಿ ಕೆಲಸ ನಿವರ್ಹಿಸುವ, ಗಾಜು ಸ್ವಚ್ಛಗೊಳಿಸುವ ರೋಬೊಟ್‌ಗಳು, ಆಂಧ್ರಪ್ರದೇಶದ ಲೇಪಾಕ್ಷಿ ದೇವಸ್ಥಾನದ ಮಾದರಿ, ಕಸ ವಿಲೇವಾರಿ ಸುಲಭಗೊಳಿಸುವ ಸೆನ್ಸರ್‌ ವ್ಯವಸ್ಥೆ ನೋಡುಗರ ಮೆಚ್ಚುಗೆಗೆ ಪಾತ್ರವಾದವು. ವಿದ್ಯುತ್‌ ಮತ್ತು ಪೆಟ್ರೋಲ್‌ ಚಾಲಿತ ಎರಡೂ ಮಾದರಿಯ ಹೈಬ್ರಿಡ್‌ ವಾಹನ, ಗುಡ್ಡಗಾಡುಗಳಲ್ಲಿ ಚಲಿಸುವ ಬಗ್ಗಿ (ಎಟಿವಿ) ವಾಹನಗಳು, ಬ್ಯಾಟರಿ ಚಾಲಿತ ವಿಮಾನ ಮತ್ತು ಡ್ರೋನ್ ಮಾದರಿಗಳು ಇಲ್ಲಿದ್ದವು.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಬಗ್ಗಿ ವಾಹನವನ್ನು ಕೃತಕ ದಿಣ್ಣೆಯಲ್ಲಿ 5 ಅಡಿ ದೂರದವರೆಗೂ ಹಾರಿಸಿ, ನೋಡುಗರು ಹುಬ್ಬೇರುವಂತೆ ಮಾಡಿದರು.

‘ಹೈಬ್ರಿಡ್‌ ವಾಹನದಲ್ಲಿ 300 ಸಿ.ಸಿಯ ಪೆಟ್ರೋಲ್‌ ಎಂಜಿನ್‌ ಮತ್ತು 2 ಕೆ.ವಿ ಸಾಮರ್ಥ್ಯದ ವಿದ್ಯುತ್‌ ಚಾಲಿತ ಮೋಟರ್‌ ಇದೆ. ಗರಿಷ್ಠ ವೇಗ 65 ಕಿ.ಮೀ. ಇದೆ. ನೊಯಿಡಾದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ 12ನೇ ಸ್ಥಾನ ಪಡೆದಿದೆ’ ಎಂದು ವಿದ್ಯಾರ್ಥಿ ಅನಿರುದ್ಧ್ ತಿಳಿಸಿದರು.

‘ಬಗ್ಗಿ ವಾಹನವನ್ನು ನಿರಂತರ ನಾಲ್ಕು ಗಂಟೆ ಚಾಲನೆ ಮಾಡಿ, ವಾಹನದ ದಕ್ಷತೆ ಸಾಬೀತುಪಡಿಸಿದ್ದೇವೆ. ಚಾಲಕನ ಸುರಕ್ಷತೆಗೆ ಹೆಚ್ಚು ಒತ್ತುಕೊಟ್ಟಿರುವುದು ಇದರ ವಿಶೇಷ’ ಎಂದು ಮತ್ತೊಬ್ಬ ವಿದ್ಯಾರ್ಥಿ ಹಿಮಾಂಶು ತಿಳಿಸಿದರು.

ನಗದು ಪುರಸ್ಕಾರ: ಅತ್ಯುತ್ತಮ ಮಾದರಿಗಳಿಗೆ ಕ್ರಮವಾಗಿ ಪ್ರಥಮ ₹15,000, ದ್ವಿತೀಯ ₹10,000, ತೃತೀಯ ಮತ್ತು ಸಮಗ್ರ ₹5,000 ನಗದು ಬಹುಮಾನ ನೀಡಲಾಯಿತು. ವರ್ಷದ ಶೈಕ್ಷಣಿಕ ಸಾಧನೆಯನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದ ಬಿಬಿಎ ವಿಭಾಗದ ಮಳಿಗೆಗೆ
₹20,000 ನಗದು ಬಹುಮಾನ ಸಿಕ್ಕಿತು.

ಬಹುಮಾನಿತ ಮಾದರಿಗಳು: ಕೃಷಿ ರೋಬೊಟ್‌, ಲೇಪಾಕ್ಷಿ ದೇವಸ್ಥಾನ ಮಾದರಿ (ಪ್ರಥಮ), ಗಾಜು ಸ್ವಚ್ಛಗೊಳಿಸುವ ರೋಬೊಟ್‌, ತರಗತಿ ಕೊಠಡಿ ಪೀಠೋಪಕರಣ ವಿನ್ಯಾಸ (ದ್ವಿತೀಯ), ಜತ್ರೋಪ ಬೀಜ ಮತ್ತು ಸಿದ್ಧ ಉಡುಪು ತ್ಯಾಜ್ಯ, ರೋಬೊಟ್‌ ನಿಯಂತ್ರಿತ ವ್ಹೀಲ್‌ಚೇರ್‌ (ತೃತೀಯ), ಬೆಳ್ಳಂದೂರು ಕೆರೆ ಮಾದರಿ, ಮಣ್ಣು ಮತ್ತು ಅಂತರ್ಜಲ ವಿಷವಾಗದಂತೆ ಕಸ ನೆಲಭರ್ತಿ, ಬೆಳಕಿನ ಮೂಲದಿಂದ ಶಕ್ತಿ ಉತ್ಪಾದನೆ ಮಾದರಿಗಳಿಗೆ (ಸಮಗ್ರ) ಬಹುಮಾನ ಲಭಿಸಿತು.

ಅಂಕಿ ಅಂಶ

22

ಮಾದರಿಗಳ ಪ್ರದರ್ಶನಕ್ಕೆ ತೆರೆದಿದ್ದ ಮಳಿಗೆಗಳು

50

ಮಾದರಿ ಸಿದ್ಧಪಡಿಸಿದ ವಿದ್ಯಾರ್ಥಿಗಳ ತಂಡಗಳು

60

ಪ್ರದರ್ಶನಗೊಂಡ ಮಾದರಿಗಳು

* ನಮ್ಮ ವಿದ್ಯಾರ್ಥಿಗಳ ತಾಂತ್ರಿಕ ಆವಿಷ್ಕಾರಗಳು ಜಾಗತಿಕಮಟ್ಟದಲ್ಲಿ ಗುರುತಿಸುವಂತಿವೆ. ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ

–ಡಾ.ಎಂ.ಆರ್‌.ದೊರೆಸ್ವಾಮಿ, ಪಿಇಎಸ್‌ ವಿಶ್ವವಿದ್ಯಾಲಯದ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT