ಹೆಣ್ಣನ್ನು ಅರ್ಥೈಸಿಕೊಳ್ಳಲು ಸನ್ಯಾಸಿಗೆ ಹೆಚ್ಚು ಅನುಕೂಲವಿದೆ:ಲಕ್ಷ್ಮೀಶ ತೋಳ್ಪಾಡಿ

7

ಹೆಣ್ಣನ್ನು ಅರ್ಥೈಸಿಕೊಳ್ಳಲು ಸನ್ಯಾಸಿಗೆ ಹೆಚ್ಚು ಅನುಕೂಲವಿದೆ:ಲಕ್ಷ್ಮೀಶ ತೋಳ್ಪಾಡಿ

Published:
Updated:

ಬೆಂಗಳೂರು: ‘ಸನ್ಯಾಸಿಗಳಿಗೆ ಯಾವಾಗಲೂ ವಿರಹ ಕಾಡುತ್ತಿರುತ್ತದೆ’ ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟರು.

ಪ್ರಕೃತಿ ಪ್ರಕಾಶನ ಪ್ರಕಟಿಸಿರುವ ‘ನೆನಪೇ ಸಂಗೀತ: ವಿದ್ಯಾಭೂಷಣರ ಜೀವನ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹೆಣ್ಣನ್ನು ಅರ್ಥಮಾಡಿಕೊಳ್ಳಲು ಸನ್ಯಾಸಿಗಳಿಗೆ ಇರುವಷ್ಟು ಅನುಕೂಲ ಬೇರೆ ಯಾರಿಗೂ ಇಲ್ಲ. ಗೃಹಸ್ಥರಿಗೂ ಇಲ್ಲ. ದೇಹವು ಮಿಲನವನ್ನು ಬಯಸಿದರೆ, ಮನಸ್ಸಿಗೆ ವಿರಹಬೇಕು. ವಿರಹದಲ್ಲಿ ಮಾತ್ರ ಮನಸ್ಸು ಸೃಜನಶೀಲತೆಯ ಒಳಗನ್ನು ಬಿಟ್ಟುಕೊಡುತ್ತದೆ’ ಎಂದರು.

‘ಸಂಗೀತ ಮತ್ತು ವಿರಹಕ್ಕೆ ಹತ್ತಿರದ ಸಂಬಂಧವಿದೆ. ಹಾಡುಗಾರ ವಿರಹಿಯಾಗಿದಷ್ಟು, ಆತ ಶೋತೃಗಳಿಗೆ ವಿಲಕ್ಷಣವಾಗಿ ಕಾಣುತ್ತಾನೆ. ಸುಬ್ರಹ್ಮಣ್ಯ ಮಠದಲ್ಲಿ ವಿದ್ಯಾಭೂಷಣ ಇದ್ದಾಗ, ಉಪ್ಪರಿಗೆಯ ಕೋಣೆಯ ಕಿಟಕಿ ಹತ್ತಿರ ಕುಳಿತು ಹಾಡುತ್ತಿದ್ದ. ಎಂದೆಂದಿಗೂ ಸಿಗಲಾರದ ಪ್ರಿಯೆಯನ್ನು ಕರೆಯುತ್ತಿದ್ದಾನೆ ಎನಿಸುತ್ತಿತ್ತು. ಸ್ವರ, ಸುತ್ತಲಿನ ಕಾಡುಪರಿಸರ ಮತ್ತು ಸನ್ಯಾಸ ಆತನಲ್ಲಿ ಬೇಕಾದಷ್ಟು ವಿರಹವನ್ನು ತುಂಬಿತ್ತು’ ಎಂದು ತಿಳಿಸಿದರು.

‘ಒಳ್ಳೆಯ ಸನ್ಯಾಸಿಗಳು, ಒಳ್ಳೆಯ ಗೃಹಸ್ಥರಾಗುತ್ತಾರೆ ಎಂಬುದಕ್ಕೆ ವಿದ್ಯಾಭೂಷಣ ಸೂಕ್ತ ಉದಾಹರಣೆ. ಸನ್ಯಾಸ ಜೀವನದಲ್ಲಿ ಇದ್ದಾಗ ಆತನಿಗೆ ಸಿಕ್ಕ ಜನರ ಪ್ರೀತಿ ಇಂದಿಗೂ ಮುಂದುವರೆದಿದೆ’ ಎಂದರು. 

‘ಕೆಳಗಿನವರು ಸೇರಿದಂತೆ ಮೇಲಿನವರು ಸಹ ಬಿಡುಗಡೆಯಾದರೆ ಮಾತ್ರ ಸಮಾಜವು ಬಿಡುಗಡೆಯಾಗುತ್ತದೆ. ಇಂದಿನ ಮಠಾಧೀಶರಿಗೆ ಜನಪ್ರಿಯತೆ ಇದೆ. ಅವರಿಗೆ ಬೇಕಾದಷ್ಟು ಇದೆ. ಆದರೆ, ಅವರಲ್ಲಿ ಸಮಾಜಕ್ಕೆ ಬೇಕಾಗುವಂತಹದ್ದು ಇಲ್ಲ’ ಎಂಬ ಮಾತನ್ನೇಳಿದರು.

‘ಮತ–ಧರ್ಮಗಳನ್ನು ನಿಂತ ನೀರು ಎಂದು ಭಾವಿಸಲಾಗುತ್ತದೆ. ಆ ನಿಂತ ನೀರಲ್ಲಿಯೇ ಅಲ್ಲವೇ, ಸುಂದರ ತಾವರೆ ಅರಳುವುದು. ವ್ಯವಸ್ಥೆ ಕೆಟ್ಟದ್ದಾಗಿದ್ದರೂ, ಮನುಷ್ಯ ಜೀವನ ಸಾರ್ಥಕತೆಗೆ ಅವಕಾಶಗಳು ಇದ್ದೇ ಇರುತ್ತವೆ. ಕೆಟ್ಟ ವಾತಾವರಣವನ್ನು ಬಿಟ್ಟು ಬರುವುದು ಒಂದು ಕಷ್ಟವಾದರೆ, ಚನ್ನಾಗಿರುವ ವ್ಯವಸ್ಥೆಯಿಂದ ಹೊರಬರುವುದು ಇನ್ನೂ ಮಾನಸಿಕ ಕಷ್ಟದ ನಿರ್ಧಾರ. ವಿದ್ಯಾಭೂಷಣ ಮಠ ಬಿಟ್ಟರೂ, ದೇವಸ್ಥಾನವೊಂದನ್ನು ಕಟ್ಟಿಸಿದ. ಮಠವನ್ನು ಭೂಷಣ ಬಿಟ್ಟರೂ, ಮಠವು ಭೂಷಣನನ್ನು ಬಿಡಲಿಲ್ಲ. ಇದು ಆತನ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದು ಶ್ಲಾಘಿಸಿದರು.

‘ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಆಚರಣೆಯೊಂದು ನಡೆಯುತ್ತದೆ. ಸನ್ಯಾಸಿ ಆದವರು ಕೈಗೆ ಬಟ್ಟೆಯನ್ನು ಸುತ್ತಿಕೊಂಡು, ಹುತ್ತದೊಳಗೆ ಕೈಹಾಕಿ, ಮಣ್ಣನ್ನು ತೆಗೆದು, ಪ್ರಸಾದವಾಗಿ ನೀಡುತ್ತಾರೆ. ಹಾವಿಗೆ ಗಾಯವಾಗಬಾರದು ಎಂದು ಬಟ್ಟೆ ಸುತ್ತಿಕೊಳ್ಳುತ್ತಾರಂತೆ. ಆ ಆಚರಣೆಯಲ್ಲಿ ಹಾವಿನ ಸ್ಪರ್ಶ ಎಂದಾದರೂ ಆಗಿದೆಯೇ ಎಂದು ಭೂಷಣನನ್ನು ಹಲವಾರು ಬಾರಿ ಕೇಳಿದ್ದೇನೆ. ಉತ್ತರಕ್ಕೆ ಒತ್ತಾಯಿಸಿದ್ದೇನೆ. ಪ್ರತಿಬಾರಿಯು ‘ಅದನ್ನು ನೀನು ಕೇಳಲುಬಾರದು, ನಾನು ಹೇಳಲುಬಾರದು’ ಎಂಬ ಉತ್ತರವೇ ಬಂದಿದೆ’ ಎಂದಾಗ ನಗುವ ಸರದಿ ಸಭಿಕರದ್ದಾಗಿತ್ತು.

‘ಮಠದ ತೆಂಗಿನ ತೋಟವೊಂದನ್ನು ಸೂಫಿ ಬ್ಯಾರಿ ಎಂಬಾತ ನೋಡಿಕೊಳ್ಳುತ್ತಿದ್ದ. 1991–92ರಲ್ಲಿ ಅಯೋಧ್ಯ ಕಾವು ಏರಿದಾಗ, ಬಿಹಾರಿ ಮೇಲೆ ಹಲ್ಲೆ ಮಾಡಲು ಕೆಲವರು ಬಂದಿದ್ದರು. ಆಗ ಭೂಷಣ, ಆತನನ್ನು ಮಠದಲ್ಲಿ ಬಚ್ಚಿಟ್ಟಿದ್ದರು. ಆತ ಜೀವಭಯದಿಂದ ಮಠದಲ್ಲಿಯೇ ರಾತ್ರಿಪೂರ್ತಿ ಕುರಾನ್‌ ಪಠಣ ಮಾಡಿದ್ದ’ ಎಂದು ಪ್ರಸಂಗವೊಂದನ್ನು ಹೇಳಿದರು.

ಲೇಖಕ ಜಯಂತ ಕಾಯ್ಕಿಣಿ, ‘ನೆನಪು ಎಂಬುದು ಇಂದಿನ ಬೆಳಕಲ್ಲಿ ಅರಳಿದ ಹೂ. ವಿದ್ಯಾಭೂಷಣರ ಈ ನೆನಪುಗಳ ಪುಸ್ತಕದಲ್ಲಿ ಮೊದಲ ಮತ್ತು ಕೊನೆಯ ಅಧ್ಯಾಯಗಳು ಸೊಗಸಾಗಿವೆ. ಪೂರ್ವಾಶ್ರಮ ಸಂಬಂಧಗಳು ಇದ್ದರೂ, ಇಲ್ಲದಂತಹ ಯಾತನೆಗಳನ್ನು ಸಹಿಸುವ ಪ್ರಸಂಗವಿದೆ. ಪತಿಯಾಗುವ ಮುನ್ನ ಭೂಷಣರು ರಮಾರೊಂದಿಗೆ ಟ್ರಂಕ್‌ ಕಾಲ್‌ಗಳಲ್ಲಿ ತಾಸುಗಟ್ಟಲೇ ಮಾತನಾಡುತ್ತಿದ್ದರಂತೆ. ಎದುರಿಗೆ ಸಿಕ್ಕಾಗ ಮಂದಸ್ಮಿತ ಮಾತ್ರ ಅವರ ಸಂಭಾಷಣೆಯಾಗುತ್ತಿತ್ತಂತೆ ಎಂಬ ವಿವರವು ಪುಸ್ತಕದಲ್ಲಿದೆ’ ಎಂದು ಕುತೂಹಲ ಮೂಡಿಸಿದರು.

‘ಭೂಷಣರಿಗೆ ಭಕ್ತರೊಬ್ಬರು ಕೇಸರಿ ಬಣ್ಣದ ಕಾರನ್ನು ಉಡುಗೊರೆಯಾಗಿ ನೀಡಿದ್ದರಂತೆ. ಚಾಲನೆ ವೇಳೆ ಆ ಬಣ್ಣ ನೋಡಿ–ನೋಡಿ ಅವರಿಗೆ ತಲೆನೋವು ಬಂತಂತೆ. ಅದಕ್ಕೆ ಆಕಾಶನೀಲಿ ಬಳಿಸಿದ ಬಳಿಕ ತಲೆನೋವು ಹೋಯಿತಂತೆ’ ಎಂದು ಪುಸಕ್ತದಲ್ಲಿನ ಪ್ರಸಂಗವೊಂದನ್ನು ಉಲ್ಲೇಖಿಸಿದರು.

‘ಎಳೆಮಕ್ಕಳಿಗೆ ಮಠದಲ್ಲಿ ಸನ್ಯಾಸ ಕೊಡಿಸುವುದನ್ನು ಕಂಡು ಮಾಸ್ತಿ ‘ಅಯ್ಯೋ ಪಾಪ’ ಎಂದು ಉದ್ಗರಿಸಿದ್ದರಂತೆ. ಆ ಮಾತು ಭೂಷಣರನ್ನು ಬಹಳ ಕಾಡಿತಂತೆ. ‘ನಾನು ಸರಳವಾಗಿ ಬದುಕುತ್ತೇನೆ. ಅದಕ್ಕಿಂದ ದೊಡ್ಡ ಅಧ್ಯಾತ್ಮ ಮತ್ತೊಂದಿಲ್ಲವೆಂದು’ ಭೂಷಣರು ಭಾವಿಸಿದಂತಿದೆ’ ಎಂದರು.

ಸಂಗೀತಗಾರ ವಿದ್ಯಾಭೂಷಣ, ‘ನನಗೆ ಅಪ್ಪನೆಂದರೆ ಭಯ ಇತ್ತು, ಸನ್ಯಾಸ ಕೊಡಿಸಿದರು ಎಂದು ಅವರ ಮೇಲೆ ಸಿಟ್ಟಿತ್ತು, ಅವರ ಜೀವನದ ಪಾಡನ್ನು ಕಂಡಾಗ ವಿಷಾದವಾಗುತ್ತಿತ್ತು, ಅವರು ತೀರಿಕೊಂಡಾಗ ಪಶ್ಚಾತಾಪವಾಗಿತ್ತು’ ಎಂಬ ಭಾವ ಹಂಚಿಕೊಂಡರು.

‘ಚಾತುರ್ಮಾಸದಲ್ಲಿ ಪೇಜಾವರ ಶ್ರೀಗಳೊಂದಿಗೆ ವಾಚನ ಪ್ರವಚನಗಳನ್ನು ಮಾಡುತ್ತಿದೆ. ಮಾಸಾಂತ್ಯದಲ್ಲಿ ಪ್ರತಿ ಸಂಜೆ ಸಂಗೀತ ಕಚೇರಿ ನಡೆಸಿಕೊಡುತ್ತಿದ್ದೆ. ಹಾಗೆ ಒಂದೂವರೆ ತಿಂಗಳು ಹಾಡುತ್ತ ಭಾಗವತ ಮುಗಿಸಿದ್ದೆ. ಒಮ್ಮೆ ಹೈದರಾಬಾದ್‌ ಆಕಾಶವಾಣಿಯಲ್ಲಿ ಹಾಡಿದಾಗ, ₹ 25 ಸಂಭಾವನೆ ಕೊಟ್ಟರು. ಪೀಠಾಧಿಪತಿಯ ಸ್ಥಾನಕ್ಕಿಂತ ಆ ದುಡಿಮೆಯ ಹಣ ನನಗೆ ಹೆಚ್ಚು ಸಂತಸ ತಂದುಕೊಟ್ಟಿತು’ ಎಂದು ಸ್ವಲ್ಪ ಭಾವುಕರಾದರು.

‘ನಾನು ಸನ್ಯಾಸಿಯಾಗಿದ್ದೆ, ನಂತರ ಸಂಗೀತಗಾರನಾದೆ. ಈಗ ಆತ್ಮಕಥನ ಬರೆದು ಸಾಹಿತಿಯಾಗಿಬಿಟ್ಟೆನೆಂದು ಸಂತೋಷವಾಗುತ್ತಿದೆ’ ಎಂದು ಚಟಾಕಿ ಹಾರಿಸಿದರು.

‘ಭೂಷಣರು ಮಠದಲ್ಲಿ ಇದ್ದಾಗ, ನನ್ನನ್ನು ಹಲವಾರು ಬಾರಿ ಊಟಕ್ಕೆ ಕರೆದಿದ್ದರು. ನಾನು ಅಷ್ಟೇ ಪ್ರೀತಿಯಿಂದ ಹೋಗಿಬಂದಿದ್ದೇನೆ. ನಾನು ಹಜ್‌ ಕುರಿತು ಬರೆದು ಕವಿತೆಯೊಂದನ್ನು ವೇದಿಕೆ ಮೇಲೆ ಹಾಡಲು ಭೂಷಣರು ಬಯಸಿದ್ದರು. ಕಾರಣಾಂತರಗಳಿಂದ ಅದು ನೆರವೇರಲಿಲ್ಲ. ಅವರ ಆತ್ಮಕಥನ ಸಂಗೀತದ ರಿಯಾಜ್‌(ತಾಲೀಮು) ನಂತಿದೆ’ ಎಂದರು ಲೇಖಕ ಅಬ್ದುಲ್ ರಶೀದ್.

ವಿದ್ಯಾಭೂಷಣರ ಮಗಳು ಮೇಧಾಳ ಹಾಡಿನೊಂದಿಗೆ ಕಾರ್ಯಕ್ರಮ ಆರಂಭವಾಯಿತು. ‘ಕಣ್ಣ ನೀರ ಹನಿ, ಇಂದ್ರ ನೀಲ ಮಣಿ, ತಾವರೆಯ ಕಂಗಳಲಿ’ ಎಂಬ ಸಾಲುಗಳು ಭೂಷಣರ ಮಾಧುರ್ಯಕಂಠದಿಂದ ಹೊಮ್ಮತ್ತಲೇ ಪುಸಕ್ತ ಬಿಡುಗಡೆ ಕಾರ್ಯಕ್ರಮ ಮುಗಿಯಿತು.

***

ಪುಸ್ತಕ: ನೆನಪೇ ಸಂಗೀತ
ಪುಟಗಳು: 152
ಬೆಲೆ: ₹180

ಬರಹ ಇಷ್ಟವಾಯಿತೆ?

 • 37

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !