ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸಸೌಧದ ಬಳಿ ಸಮಾಜ ಕಲ್ಯಾಣ ಭವನ: ಗೋವಿಂದ ಕಾರಜೋಳ

ಶೀಘ್ರವೇ ಟೆಂಡರ್
Last Updated 22 ಜನವರಿ 2020, 22:53 IST
ಅಕ್ಷರ ಗಾತ್ರ

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಸಮಾಜ ಕಲ್ಯಾಣ ಭವನ ನಿರ್ಮಾಣ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

‌ಯುನಿಟಿ ಕಟ್ಟಡದಲ್ಲಿ ತೆರೆಯಲಾಗಿರುವ ಆದಿ ಜಾಂಬವ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಇಲಾಖೆಗೆ ಸಂಬಂಧಿಸಿದ ವಿವಿಧ ಕಚೇರಿಗಳು ಸ್ವಂತ ಕಟ್ಟಡ ಇಲ್ಲದೆ ಬೇರೆ ಬೇರೆ ಕಟ್ಟಡಗಳಲ್ಲಿ ಇವೆ. ಹೀಗಾಗಿ, ಬಹುಮಹಡಿ ಕಟ್ಟಡ (ಎಂ.ಎಸ್. ಬಿಲ್ಡಿಂಗ್‌) ಮತ್ತು ವಿಕಾಸಸೌಧದ ನಡುವೆ ಜಾಗ ಗುರುತಿಸಲಾಗಿದೆ’ ಎಂದು ಹೇಳಿದರು.

‘₹25 ಕೋಟಿ ಅಂದಾಜು ಮೊತ್ತದ ಯೋಜನೆ ರೂಪಿಸಲಾಗಿದೆ. ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆಯಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ’ ಎಂದರು.

₹534 ಕೋಟಿ ಅನುದಾನ: ಕಳೆದ ಸಾಲಿನಲ್ಲಿ ಆರಂಭಗೊಂಡ ಆದಿ ಜಾಂಬವ ಅಭಿವೃದ್ಧಿ ನಿಗಮಕ್ಕೆ ಸರ್ಕಾರ ಈವರೆಗೆ ₹534 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 18,909 ಫಲಾನುಭವಿಗಳಿಗೆ ವಿವಿಧ ಸಾಲ–ಸೌಲಭ್ಯಗಳನ್ನು ನಿಗಮ ಕಲ್ಪಿಸಿದೆ.

ಸಮಗ್ರ ಗಂಗಾ ಕಲ್ಯಾಣ ಯೋಜನೆಯಡಿ 4,540 ಫಲಾನುಭವಿಗಳಿಗೆ ₹187 ಕೋಟಿ ಖರ್ಚು ಮಾಡಲಾಗಿದೆ. ವಾಹನ ಚಾಲನಾ ‍ಪರವಾನಗಿ ಹೊಂದಿದವರಿಗೆ ಓಲಾ, ಉಬರ್, ಮೇರು ರೀತಿಯ ಸಂಸ್ಥೆಗಳ ಸಹಯೋಗದಲ್ಲಿ ಜಾರಿಗೆ ತಂದಿರುವ ಐರಾವತ ಯೋಜನೆಯಡಿ ₹86 ಕೋಟಿಗಳನ್ನು 1,640 ಫಲಾನುಭವಿಗಳಿಗೆ ಖರ್ಚು ಮಾಡಲಾಗಿದೆ. ಸ್ವಯಂ ಉದ್ಯೋಗ ಆರಂಭಿಸುವವರಿಗೆ ಸಮೃದ್ಧಿ ಯೋಜನೆಯಡಿ ₹10 ಲಕ್ಷ ಸಹಾಯಧನ ನೀಡಲಾಗುತ್ತಿದ್ದು, ಈ ಯೋಜನೆಯಡಿ ₹118 ಕೋಟಿಗಳನ್ನು ವೆಚ್ಚ ಮಾಡಲಾಗಿದೆ. 1,134 ಫಲಾನುಭವಿಗಳನ್ನು ಇದರ ಲಾಭ ಪಡೆದಿದ್ದಾರೆ ಎಂದು ನಿಗಮದ ಅಧಿಕಾರಿಗಳು ಅಂಕಿ–ಅಂಶ ನೀಡಿದ್ದಾರೆ.

‘ಪ್ರಾರಂಭಿಕ ಷೇರು ಬಂಡವಾಳವನ್ನು ಫಲಾನುಭವಿಗಳಿಂದ ಪಡೆಯದೇ ನಿಗಮವೇ ಭರಿಸುತ್ತಿದೆ. ಇದಕ್ಕಾಗಿ ₹10 ಕೋಟಿ ವಿನಿಯೋಗಿಸಲಾಗುತ್ತದೆ’ ಎಂದು ವಿವರ ನೀಡಿದ್ದಾರೆ.

41 ಬೃಹತ್ ಸೇತುವೆ ನಿರ್ಮಾಣ
ಬೆಂಗಳೂರು:
ರಾಜ್ಯದ ವಿವಿಧೆಡೆ ₹1,004 ಕೋಟಿ ಮೊತ್ತದಲ್ಲಿ 41 ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಸೂಚಿಸಿದರು.

ರಸ್ತೆ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, 175 ಕಿರು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಅದರಲ್ಲಿ 15 ಸೇತುವೆಗಳ ಕೆಲಸ ಪೂರ್ಣಗೊಂಡಿದೆ. ಮಾರ್ಚ್ ಅಂತ್ಯದೊಳಗೆ 98 ಸೇತುವೆಗಳು ನಿರ್ಮಾಣವಾಗಲಿವೆ. ಉಳಿದ ಸೇತುವೆಗಳ ನಿರ್ಮಾಣ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

‘ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಿಯಮದಂತೆ ಪ್ರಗತಿ ಸಾಧಿಸದಿದ್ದರೆ ಸಂಬಂಧಿಸಿದವರಿಗೆ ನೋಟಿಸ್ ಜಾರಿಮಾಡಿ ಕೆಲಸ ಚುರುಕುಗೊಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT