ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಚಿನ್ನಾಭರಣ ಕದ್ದಿದ್ದ ಆಭರಣ ವಿನ್ಯಾಸಕ ಬಂಧನ

Published 7 ನವೆಂಬರ್ 2023, 14:49 IST
Last Updated 7 ನವೆಂಬರ್ 2023, 14:49 IST
ಅಕ್ಷರ ಗಾತ್ರ

ಬೆಂಗಳೂರು: ವ್ಯಾಪಾರಿಯೊಬ್ಬರ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದ ಆರೋಪದಡಿ ಆಭರಣ ವಿನ್ಯಾಸಕ ಮೋಹನ್ ಲಾಲ್‌ನನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ಮೋಹನ್ ಲಾಲ್, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಪರಿಚಯಸ್ಥರಾಗಿದ್ದ ವ್ಯಾಪಾರಿ ರಾಮ್‌ ಲಾಲ್ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ರಾಮ್‌ಲಾಲ್ ನೀಡಿದ್ದ ದೂರಿನ ತನಿಖೆ ಕೈಗೊಂಡು ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಗರ್ತಪೇಟೆಯಲ್ಲಿ ಚಿನ್ನಾಭರಣ ಮಾರಾಟ ಮಳಿಗೆ ಇಟ್ಟುಕೊಂಡಿರುವ ದೂರುದಾರ ರಾಮ್‌ಲಾಲ್, ಆರೋಪಿ ಮೋಹನ್‌ ಲಾಲ್‌ನನ್ನು ಆಗಾಗ ಮಳಿಗೆ ಹಾಗೂ ಮನೆಗೆ ಕರೆಸಿಕೊಳ್ಳುತ್ತಿದ್ದರು. ಚಿನ್ನದ ಗಟ್ಟಿಗಳನ್ನು ಆತನಿಗೆ ನೀಡಿ, ಬೇರೆ ಬೇರೆ ವಿನ್ಯಾಸದ ಆಭರಣ ಮಾಡಿಸುತ್ತಿದ್ದರು.’

‘ದೂರುದಾರರು ಆರೋಪಿಗೆ 2,931 ಗ್ರಾಂ ಚಿನ್ನಾಭರಣ ನೀಡಿದ್ದರು. ನಿಗದಿತ ಸಮಯಕ್ಕೆ ಆರೋಪಿ, ವಿನ್ಯಾಸಗೊಳಿಸಿದ್ದ ಆಭರಣ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ದೂರುದಾರ, ಮಾತುಕತೆಗೆಂದು ಅ.25ರಂದು ಆರೋಪಿಯನ್ನು ತಮ್ಮ ಮನೆಗೆ ಕರೆಸಿದ್ದರು.’

‘ಆರೋಪಿ ಮನೆಗೆ ಬಂದಿದ್ದ ಸಂದರ್ಭದಲ್ಲಿ ದೂರುದಾರ, ಶೌಚಾಲಯಕ್ಕೆ ತೆರಳಿದ್ದರು. ದೇವರ ಕೋಣೆಯಲ್ಲಿಟ್ಟಿದ್ದ ಚಿನ್ನಾಭರಣ ಕದ್ದುಕೊಂಡು ಆರೋಪಿ ಪರಾರಿಯಾಗಿದ್ದ. ಈ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಪೊಲೀಸರು ತಿಳಿಸಿದರು.

ಜೂಜಾಟದಲ್ಲಿ ಹಣ ಕಳೆದುಕೊಂಡಿದ್ದ: ‘ಆರೋಪಿ ಮೋಹನ್ ಲಾಲ್, ಕೆಲ ತಿಂಗಳಿನಿಂದ ಜೂಜು ಆಡಲಾರಂಭಿಸಿದ್ದ. ಮೊಬೈಲ್ ಆ್ಯಪ್ ಮೂಲಕ ಹಣ ಕಟ್ಟುತ್ತಿದ್ದ. ಕ್ಯಾಸಿನೊ ಜೂಜಾಟದಲ್ಲೂ ಭಾಗವಹಿಸುತ್ತಿದ್ದ. ಆರಂಭದಲ್ಲಿ ಹಣ ಗೆದ್ದಿದ್ದ. ನಂತರ, ಹೆಚ್ಚು ಹಣ ಕಳೆದುಕೊಂಡಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಜೂಜಾಟದಲ್ಲಿ ಕಳೆದುಕೊಂಡಿದ್ದ ಹಣವನ್ನು ಪುನಃ ಗಳಿಸಲು ಯೋಚಿಸಿದ್ದ. ಚಿನ್ನಾಭರಣ ಕದ್ದು, ಅವುಗಳನ್ನು ಮಾರಿ ಅದೇ ಹಣದಲ್ಲಿ ಪುನಃ ಜೂಜು ಆಡಲು ಮುಂದಾಗಿದ್ದ. ಅದೇ ಕಾರಣಕ್ಕೆ ಚಿನ್ನಾಭರಣ ಕದ್ದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ. ಈತನಿಂದ ₹ 84 ಲಕ್ಷ ಮೌಲ್ಯದ 1 ಕೆ.ಜಿ 399 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT