ಶನಿವಾರ, ಏಪ್ರಿಲ್ 1, 2023
29 °C
ದಂಪತಿ ಅಡ್ಡಗಟ್ಟಿದ್ದ ಹೆಡ್‌ ಕಾನ್‌ಸ್ಟೆಬಲ್, ಕಾನ್‌ಸ್ಟೆಬಲ್

₹ 1 ಸಾವಿರ ಸುಲಿಗೆ: ಹೊಯ್ಸಳ ಸಿಬ್ಬಂದಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೊರಟಿದ್ದ ದಂಪತಿಯನ್ನು ಅಡ್ಡಗಟ್ಟಿ ₹ 1 ಸಾವಿರ ಸುಲಿಗೆ ಮಾಡಿದ್ದ ಆರೋಪದಡಿ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಹೆಡ್‌ ಕಾನ್‌ಸ್ಟೆಬಲ್ ರಾಜೇಶ್ ಮತ್ತು ಕಾನ್‌ಸ್ಟೆಬಲ್ ನಾಗೇಶ್ ಲೋಗಾವಿ ವಜಾಗೊಂಡವರು. ಇವರಿಬ್ಬರೂ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಂಪತಿ ನೀಡಿದ್ದ ದೂರಿನಡಿ ಇಬ್ಬರನ್ನೂ ಅಮಾನತು ಮಾಡಲಾಗಿತ್ತು. ಇದೀಗ ಇಲಾಖೆ ವಿಚಾರಣೆ ಮುಕ್ತಾಯಗೊಂಡಿದ್ದು, ಅದರ ವರದಿ ಆಧರಿಸಿ ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

‘ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ನಿವಾಸಿಯಾದ ದೂರುದಾರ ಕಾರ್ತಿಕ್ ಪಾತ್ರಿ ಹಾಗೂ ಪತ್ನಿ, ಡಿ. 8ರಂದು ಸ್ನೇಹಿತರ ಮನೆಯಲ್ಲಿದ್ದ ಕಾರ್ಯಕ್ರಮಕ್ಕೆ ಹೋಗಿದ್ದರು. ಅಲ್ಲಿಂದ, ರಾತ್ರಿ 12.30ರ ಸುಮಾರಿಗೆ ವಾಪಸು ಮನೆಯತ್ತ ನಡೆದುಕೊಂಡು ಹೋಗುತ್ತಿದ್ದರು. ಅವರನ್ನು ಅಡ್ಡಗಟ್ಟಿದ್ದ ರಾಜೇಶ್ ಹಾಗೂ ನಾಗೇಶ್, ತಪಾಸಣೆ ನೆಪದಲ್ಲಿ ಕಿರುಕುಳ ನೀಡಿದ್ದರು. ಮೊಬೈಲ್ ಸಹ ಕಿತ್ತುಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.

‘ದಂಪತಿ ಬಳಿ ಇದ್ದ ಕೇಕ್‌ ಬಾಕ್ಸ್‌ ಕಸಿದುಕೊಂಡು ಪರೀಕ್ಷಿಸಿದ್ದರು. ಹೆದರಿದ್ದ ದಂಪತಿ, ಆಧಾರ್ ತೋರಿಸಿದ್ದರು. ಸಮೀಪದಲ್ಲೇ ಮನೆ ಇರುವುದಾಗಿ ಹೇಳಿದ್ದರು. ಅಷ್ಟಾದರೂ ಸುಮ್ಮನಾಗದ ರಾಜೇಶ್ ಹಾಗೂ ನಾಗೇಶ್, ‘ನಿಮ್ಮ ಮೇಲೆ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸುತ್ತೇವೆ. ಈ ರೀತಿ ಮಾಡಬಾರದೆಂದರೆ, ₹ 3 ಸಾವಿರ ನೀಡಿ’ ಎಂಬುದಾಗಿ ಬೇಡಿಕೆಯಿಟ್ಟಿದ್ದರು.’

‘ಆರೋಪಿತ ಪೊಲೀಸರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಬೇಸತ್ತ ಕಾರ್ತಿಕ್, ಪೇಟಿಎಂ ಮೂಲಕ ₹ 1 ಸಾವಿರ ವರ್ಗಾಯಿಸಿದ್ದರು. ಇದಾದ ಮರುದಿನವೇ ಟ್ವೀಟ್‌ ಮೂಲಕ ಕಮಿಷನರ್ ಅವರಿಗೆ ದೂರು ನೀಡಿದ್ದರು. ಬಳಿಕ, ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ವಜಾಗೊಂಡಿರುವ ಪೊಲೀಸರು, ಮುಂದಿನ ದಿನಗಳಲ್ಲಿ ಯಾವುದೇ ಸರ್ಕಾರಿ ಕೆಲಸಕ್ಕೂ ಅರ್ಹರಾಗಿರುವುದಿಲ್ಲ’ ಎಂದೂ ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು