ಶುಕ್ರವಾರ, ನವೆಂಬರ್ 22, 2019
22 °C
ಉಪನಗರ ರೈಲು ಹೋರಾಟಗಾರರಲ್ಲಿ ಹೊಸ ನಿರೀಕ್ಷೆ

ಚುಕುಬುಕು ಕೂಗಿಗೆ ಮರುಜೀವ l ಶೀಘ್ರ ಅನುಷ್ಠಾನಕ್ಕೆ ಒತ್ತಾಯ

Published:
Updated:
Prajavani

ಬೆಂಗಳೂರು: ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ ಅನುಮತಿ ನೀಡಿದ್ದು, ಐ.ಟಿ ಸಿಟಿಗೆ ‘ಚುಕುಬುಕು ಬೇಕು’ ಎಂಬ ಎರಡು ದಶಕಗಳ ಕೂಗಿಗೆ ಈಗ ಮರುಜೀವ ಬಂದಂತಾಗಿದೆ. ಯೋಜನೆಗೆ ಮತ್ತೆ ಯಾವುದೇ ವಿಘ್ನಗಳು ಬರದಿರಲಿ ಎಂದು ರೈಲ್ವೆ ಹೋರಾಟಗಾರರು ಆಶಿಸಿದ್ದಾರೆ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮತ್ತು ಕೇಂದ್ರ ಸಚಿವ ಸಂಪುಟದಿಂದ ಯೋಜನೆಗೆ ಅನುಮೋದನೆ ಇನ್ನೂ ಬಾಕಿ ಇದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆ–ರೈಡ್‌–ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ಮೆಂಟ್‌ ಕಾರ್ಪೊರೇಷನ್) ಮೂಲಕ ಭೌತಿಕವಾಗಿ ಕಾಮಗಾರಿ ಆರಂಭವಾಗಲು ಇನ್ನೂ ಕೆಲ ತಿಂಗಳು ಬೇಕಿದೆ.

‘ಬೆಂಗಳೂರು ಮತ್ತು ಸುತ್ತಮುತ್ತಲ ಲೋಕಸಭಾ ಸದಸ್ಯರು ಒತ್ತಡ ಹಾಕಿದರೆ ಇನ್ನೊಂದು ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟದ ಅನುಮತಿ ದೊರೆಯುವ ಸಾಧ್ಯತೆ ಇದೆ. ಯೋಜನೆ ಸಾಧ್ಯತೆಯ ಬಗ್ಗೆ ವಿಸ್ತೃತ ಚರ್ಚೆಗಳು ನಡೆದ ಬಳಿಕವೇ ರೈಲ್ವೆ ಮಂಡಳಿಯ ಅನುಮೋದನೆ ದೊರೆತಿದೆ. ಹೀಗಾಗಿ, ಯೋಜನೆಗೆ ಮತ್ತೆ ಯಾವ ಅಡೆ–ತಡೆಯೂ ಬರಲಾರದು ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರ ಸಂಜೀವ್ ದ್ಯಾಮಣ್ಣನವರ್.

‘ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ಕಾಲಕಾಲಕ್ಕೆ ಅನುದಾನ ನೀಡಿದರೆ ಯೋಜನೆ ಸಂಪೂರ್ಣ ಸಿದ್ಧವಾಗಲು ಕನಿಷ್ಠ 5 ವರ್ಷ ಸಮಯಾವಕಾಶ ಬೇಕಾಬಹುದು. ಆದರೆ, ಮೆಟ್ರೊ ರೈಲು ಯೋಜನೆ ಮಾದರಿಯಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವ ತನಕ ಕಾಯಬೇಕಾಗಿಲ್ಲ. ಕಾಮಗಾರಿ ಮುಗಿದಷ್ಟು ಮಾರ್ಗದಲ್ಲಿ ರೈಲು ಓಡಿಸಬಹುದು’ ಎಂದು ಹೇಳಿದರು.

‘ಒಟ್ಟಾರೆಯಾಗಿ ರೈಲ್ವೆ ಮಂಡಳಿಯ ಈ ಅನುಮತಿ ಉಪನಗರ ರೈಲು ಯೋಜನೆಗೆ ಮೈಲಿಗಲ್ಲು. ಸಚಿವ ಸಂಪುಟದ ಅನುಮೋದನೆ ಪಡೆಯಲು ಬೆಂಗಳೂರು ಹಾಗೂ ಸುತ್ತಮುತ್ತಲ ಲೋಕಸಭಾ ಸದಸ್ಯರು ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಈ ಹಿಂದೆ ಪ್ರಧಾನ ಮಂತ್ರಿ ಕಚೇರಿ ಯೋಜನೆಗೆ ತಕರಾರು ಎತ್ತಿದ ಕಾರಣಕ್ಕೆ ವಿಳಂಬವಾಯಿತು. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ–ಬೇರೆ ಪಕ್ಷಗಳು ಆಡಳಿತ ನಡೆಸುತ್ತಿದ್ದ ಕಾರಣಕ್ಕೆ ಸಮನ್ವಯದ ಕೊರತೆ ಇತ್ತು. ಒಬ್ಬರ ಮೇಲೊಬ್ಬರು ಗೂಬೆ ಕೂರಿಸುತ್ತಿದ್ದರು. ಈಗ ಎರಡೂ ಕಡೆ ಒಂದೇ ಪಕ್ಷ ಆಡಳಿತ ನಡೆಸುತ್ತಿದ್ದಾರೆ. ಕನ್ನಡಿಗರೇ ರೈಲ್ವೆ ಸಚಿವರೂ ಆಗಿದ್ದಾರೆ. ಹೀಗಾಗಿ ವಿಳಂಬ ಮಾಡದೆ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದು ಕರ್ನಾಟಕ ರೈಲ್ವೆ ವೇದಿಕೆಯ ಕೃಷ್ಣಪ್ರಸಾದ್ ಒತ್ತಾಯಿಸಿದರು.‌‌‌

ಪ್ರತಿಕ್ರಿಯಿಸಿ (+)