ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹದಿಂದ ಹೊಲಗಳಲ್ಲಿ ಭಾರಿ ಪ್ರಮಾಣದಲ್ಲಿ ಮರಳು ಸಂಗ್ರಹ

ಕೃಷಿ ಜಮೀನಿನಲ್ಲಿ 40 ಲಕ್ಷ ಟನ್‌ಗೂ ಅಧಿಕ ಮರಳು/ ಮಾರಾಟಕ್ಕೆ ಅವಕಾಶ
Last Updated 24 ಸೆಪ್ಟೆಂಬರ್ 2019, 19:21 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿಇತ್ತೀಚಿನ ಪ್ರವಾಹದಿಂದ ನದಿ ಪಾತ್ರದ ಕೃಷಿ ಭೂಮಿಯಲ್ಲಿ ಭಾರಿ ಪ್ರಮಾಣದಲ್ಲಿ ಮರಳು ಸೇರಿಕೊಂಡಿದ್ದು, ಅದನ್ನು ತೆಗೆದು ಮಾರಾಟ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ರಾಜ್ಯದಲ್ಲಿ ಸುಮಾರು 40 ಲಕ್ಷ ಟನ್‌ಗಳಿಗೂ ಅಧಿಕ ಪ್ರಮಾಣದ ಮರಳು ಕೃಷಿ ಜಮೀನಿನಲ್ಲಿದೆ. ರೈತರು ಸ್ವಂತ ಬಳಕೆಗೆ ಉಚಿತವಾಗಿ ಆ ಮರಳನ್ನು ಉಪಯೋಗಿಸಬಹುದು. ಆದರೆ, ತಮ್ಮ ಜಮೀನಿನಲ್ಲಿರುವ ಮರಳು ಮಾರಾಟ ಮಾಡಬೇಕಾದರೆ ಸರ್ಕಾರಕ್ಕೆ ರಾಯಧನ ಪಾವತಿಸಬೇಕಾಗುತ್ತದೆ. ಅಕ್ರಮವಾಗಿ ಮಾರಾಟ ಮಾಡಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಗಣಿ ಸಚಿವ ಸಿ.ಸಿ.ಪಾಟೀಲ ಅವರು ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ನೀಡಿದರು.

ರೈತರುಸ್ವಂತ ಬಳಕೆಗೆಂದು ಅಧಿಕ ಪ್ರಮಾಣದಲ್ಲಿ ಮರಳನ್ನು ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ. ಮನೆ ಕಟ್ಟಿಕೊಳ್ಳಲು ಎತ್ತಿನ ಬಂಡಿಯಲ್ಲಿ ಮರಳು ಸಾಗಿಸಿಕೊಳ್ಳಬಹುದು. ಅದೂ ಅಗತ್ಯವಿರುವಷ್ಟು ಮಾತ್ರ ಬಳಕೆ ಮಾಡಬೇಕು ಎಂದೂ ಅವರು ಹೇಳಿದರು.

ಈ ರೀತಿ ಮರಳು ತೆಗೆದು ಸಾಗಿಸಲು ಅವಕಾಶ ನೀಡುವ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗಿದೆ. ಎಷ್ಟು ಪ್ರಮಾಣದಲ್ಲಿ ಮರಳು ಹೊಲಗಳಲ್ಲಿ ಸಂಗ್ರಹವಾಗಿದೆ ಎಂಬ ಸಮೀಕ್ಷೆ ಮಾಡಿಲ್ಲ, 40 ಲಕ್ಷ ಟನ್‌ ಎಂಬುದು ಒಂದು ಅಂದಾಜು ಎಂದು ಪಾಟೀಲ ತಿಳಿಸಿದರು.

ಖಡಕ್‌ ಅಧಿಕಾರಿಗಳ ನೇಮಕ: ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ಖಡಕ್‌ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಅಲ್ಲದೆ, ಪೊಲೀಸ್‌ ಇಲಾಖೆಯ ನೆರವೂ ಪಡೆಯಲಾಗುವುದು. ಗಣಿ, ಅರಣ್ಯ ಮತ್ತು ಪೊಲೀಸ್‌ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುವುದು. ಅದಕ್ಷ ಮತ್ತು ಭ್ರಷ್ಟ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗುವುದು ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಸರಳ ಮತ್ತು ಜನಸ್ನೇಹಿ ಮರಳು ನೀತಿ ಜಾರಿ ತರಲು ಉದ್ದೇಶಿಸಲಾಗಿದೆ. ಆಂಧ್ರಪ್ರದೇಶದಲ್ಲಿ ಅಂತಹದ್ದೊಂದು ನೀತಿ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ನೀತಿಯ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು. ಮುಂದಿನ ಎರಡು–ಮೂರು ತಿಂಗಳಲ್ಲಿ ಜನರಿಗೆ ಸುಲಭವಾಗಿ ಮರಳು ಸಿಗುವ ವ್ಯವಸ್ಥೆ ಮಾಡುತ್ತೇವೆ’ ಎಂದೂ ಪಾಟೀಲ ತಿಳಿಸಿದರು.

* ಮಲೇಷ್ಯಾದಿಂದ ಆಮದು ಮರಳು ತರಿಸುವ ಉದ್ದೇಶವಿಲ್ಲ. ಈ ಹಿಂದೆ ಎಂಎಸ್‌ಐಎಲ್‌ ಮಲೇಷ್ಯಾದಿಂದ ಮರಳು ಆಮದು ಮಾಡಿಕೊಂಡು ಬಳಕೆಯಾಗದೆ ಉಳಿದಿರುವ ಸಂಬಂಧ ಎಂಎಸ್‌ಐಎಲ್‌ನಿಂದ ಮಾಹಿತಿ ತರಿಸಿಕೊಳ್ಳಲಾಗುವುದು.

* ಮರಳು ಮಾಫಿಯಾ ಕಡಿವಾಣಕ್ಕೆ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಲು ತೀರ್ಮಾನ.

* ಗ್ರಾನೈಟ್‌ ಗಣಿಗಾರಿಕೆ ಸಂಬಂಧ ರಾಜಸ್ತಾನ ನೀತಿಯನ್ನು ಅಧ್ಯಯನ ಮಾಡಲು ಅಧಿಕಾರಿಗಳು ಉದ್ದಿಮೆಗಳ ತಂಡವನ್ನು ಆ ರಾಜ್ಯಕ್ಕೆ ಕಳಿಸಲಾಗುವುದು.

* ಗ್ರಾನೈಟ್‌ ಪಾಲಿಷಿಂಗ್‌ ಮಾಡುವ ಮತ್ತು ಅದರಿಂದ ವಿವಿಧ ಬಗೆಯ ಉತ್ಪನ್ನಗಳನ್ನು ತಯಾರಿಸುವವರು ಸರ್ಕಾರಕ್ಕೆ ರಾಯಧನ ಪಾವತಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT