ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯು ರೈತರಿಂದ ಪಡೆದಿರುವ ಹಾಗೂ ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡಿರುವ ಶ್ರೀಗಂಧವನ್ನು ದರ ಪರಿಷ್ಕರಣೆ ಮಾಡದೇ ಮಾರಾಟಕ್ಕೆ ಮುಂದಾಗಿದೆ.

ಐದು ವರ್ಷದಿಂದ ಮಾರಾಟ ದರ ಪರಿಷ್ಕರಣೆ ಮಾಡದೇ ಇರುವುದರಿಂದ ಬೆಳೆಗಾರರಿಗೆ ಮಾತ್ರವಲ್ಲದೇ ಸರ್ಕಾರಕ್ಕೂ ಕೋಟ್ಯಂತರ ಆದಾಯ ನಷ್ಟವಾಗುತ್ತಿದೆ.

ಅರಣ್ಯ ಇಲಾಖೆಯು ಶ್ರೀಗಂಧದ ದರ ಪರಿಷ್ಕರಣೆ ಮಾಡದೇ ಮಾರ್ಚ್ 25ರಂದು 138 ಟನ್ ಶ್ರೀಗಂಧವನ್ನು ಮೈಸೂರಿನ ಶ್ರೀಗಂಧ ಡಿಪೊದಲ್ಲಿ ಹರಾಜು ನಡೆಸಲು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಬೆಳೆಗಾರರಿಂದ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಶ್ರೀಗಂಧ ಉತ್ಪಾದನೆ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದು ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಅರಣ್ಯ ಇಲಾಖೆಯು ಇಂತಹ ಶ್ರೀಗಂಧವನ್ನು ವಶಪಡಿಸಿಕೊಂಡು ನಂತರ ಹರಾಜು ಹಾಕಿ ಮಾರಾಟದಿಂದ ಬಂದ ಆದಾಯವನ್ನು ರೈತರಿಗೆ ಹಸ್ತಾಂತರಿಸುತ್ತದೆ. ಇದಲ್ಲದೇ ರೈತರು ನೇರವಾಗಿಯೇ ಡಿಪೊಗಳಿಗೆ ಶ್ರೀಗಂಧ ಸಾಗಣೆ ಮಾಡಿ ಮಾರಾಟಕ್ಕೆ ಅನುವು ಮಾಡಿಕೊಡುತ್ತಾರೆ.

‘ಐದು ವರ್ಷದಲ್ಲಿ ಪ್ರತಿ ಕೆ.ಜಿ. ಶ್ರೀಗಂಧದ ದರ ₹ 3 ಸಾವಿರದಿಂದ ₹4 ಸಾವಿರದವರೆಗೆ ಏರಿಕೆಯಾಗಿದೆ. ಹೊಸ ದರ ಅನ್ವಯವಾದರೆ ಹೆಚ್ಚಿನ ಆದಾಯವೂ ರೈತರಿಗೆ ಸಿಗಲಿದೆ. ತಮಿಳುನಾಡು ರಾಜ್ಯದಲ್ಲಿ ಪ್ರತಿ ವರ್ಷ ದರ ಪರಿಷ್ಕರಣೆ ಮಾಡುತ್ತಿರುವಾಗ ಕರ್ನಾಟಕದಲ್ಲಿ ಲಾಬಿಗಳಿಗೆ ಮಣಿದು ಅರಣ್ಯ ಇಲಾಖೆ ಯಥಾಸ್ಥಿತಿ ಕಾಪಾಡಿಕೊಂಡು ಬರುತ್ತಿದೆ’ ಎಂದು ಬೆಳೆಗಾರರು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೂ ದೂರು ನೀಡಿದ್ದಾರೆ.

ದರ ಪರಿಷ್ಕರಣೆ ಹೇಗೆ: ಕರ್ನಾಟಕದಲ್ಲಿ ಮೈಸೂರು, ಶಿವಮೊಗ್ಗ ಹಾಗೂ ಧಾರವಾಡದಲ್ಲಿ ಶ್ರೀಗಂಧ ಡಿಪೊಗಳಿವೆ. ಇಲ್ಲಿ ಸುಮಾರು 20 ಬಗೆಯ ಶ್ರೀಗಂಧದ ಸಂಗ್ರಹವಿದೆ. ಕಳವು ಪ್ರಕರಣಗಳು, ಅನುಮತಿ ಪಡೆಯದೇ ಮರ ಕಡಿದಿರುವುದು ಸೇರಿ ನಾನಾ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಶ್ರೀಗಂಧದ ಸಂಗ್ರಹವಿದೆ.

ಆಯಾ ಶ್ರೀಗಂಧ ಡಿಪೊಗಳಲ್ಲಿ ಕಾಲಕಾಲಕ್ಕೆ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ. ಇದರಲ್ಲಿ ಶ್ರೀಗಂಧ ಕಳೆದುಕೊಂಡ ರೈತರಿಗೆ ಹೆಚ್ಚಿನ ಆದಾಯ ದೊರೆತರೆ, ಸರ್ಕಾರಕ್ಕೂ ಆದಾಯ ಬರಲಿದೆ.

ಕರ್ನಾಟಕ ಅರಣ್ಯ ನಿಯಮಗಳು 1969ರ ಸೆಕ್ಷನ್ 108(6)ರ ಪ್ರಕಾರ ಪ್ರತಿ ಹಣಕಾಸು ವರ್ಷದಲ್ಲಿ ಶ್ರೀಗಂಧ ಮರದ ದರವನ್ನು (ಮೌಲ್ಯ) ನಿಗದಿಪಡಿಸಬೇಕು. ಆದರೆ ಸರಾಸರಿ ದರ ಆಧರಿಸಿ ಆಗಾಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಕೆಲವೊಮ್ಮೆ ನೆರೆಯ ತಮಿಳುನಾಡು ರಾಜ್ಯದಲ್ಲಿ ನಡೆಸಲಾದ ಹರಾಜಿನ ಬೆಲೆಯನ್ನು ಪರಿಗಣಿಸಿ ಇಲ್ಲಿಯೂ ಅದನ್ನೇ ಬಳಸಬಹುದು ಎನ್ನುವ ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.

‘2021–22ರಿಂದ 2024–25ರ ವರೆಗೆ ದರ ಪರಿಷ್ಕರಣೆ ಮಾಡದ ಕುರಿತು ರೈತರ ತಂಡವು ಅಧ್ಯಯನವನ್ನೂ ನಡೆಸಿತ್ತು. ಆಗ ರೈತರ ಜತೆಗೆ ಸರ್ಕಾರದ ಆದಾಯದಲ್ಲೂ ಖೋತಾ ಆಗಿತ್ತು. ನಾಲ್ಕು ವರ್ಷ ದರ ಹೆಚ್ಚಿಸದಂತೆ ಕೆಲವು ಲಾಬಿಗಳು ಕೆಲಸ ಮಾಡಿದ್ದವು. ಈ ಅವಧಿ ಮುಗಿದು ಎರಡು ವರ್ಷಗಳಾಗಿದ್ದರೂ ದರ ಏರಿಕೆ ಮಾಡದಂತೆ ಇದೇ ಲಾಬಿಗಳು ಕೆಲಸ ಮಾಡಿವೆ. ದರ ಪರಿಷ್ಕರಣೆ ಮಾಡದೇ ಹರಾಜಿಗೆ ಅವಕಾಶ ನೀಡಬಾರದು’ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ. ಅಮರನಾರಾಯಣ ತಿಳಿಸಿದರು.

ದೂರು ನೀಡಿದರೂ ಕ್ರಮವಿಲ್ಲ: ಕರ್ನಾಟಕದಲ್ಲಿ ಶ್ರೀಗಂಧದ ಮಾರಾಟ ದರ ಪರಿಷ್ಕರಣೆ, ಮಾರಾಟದಲ್ಲಿ ನಡೆದಿರುವ ಲಾಬಿ, ಇದರಿಂದ ಆಗುತ್ತಿರುವ ನಷ್ಟ, ಶ್ರೀಗಂಧ ಉದ್ಯಮದ ಪರ್ಯಾಯ ಮಾರ್ಗಗಳ ಕುರಿತು ರಾಜ್ಯ ಸರ್ಕಾರಕ್ಕೆ ಶ್ರೀಗಂಧ ಬೆಳೆಗಾರರ ಸಂಘ ಹಿಂದೆಯೂ ದೂರು ನೀಡಿತ್ತು.

‘ಈ ಕುರಿತು ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಸಭೆ ನಡೆದು ಆರು ತಿಂಗಳು ಕಳೆದರೂ ಕ್ರಮ ಆಗಿಲ್ಲ. ಶ್ರೀಗಂಧದ ನಾಡು ಕರ್ನಾಟಕದಲ್ಲಿ ಹೀಗಾದರೆ ನಾವು ಏನು ಮಾಡಬೇಕು’ ಬೆಳೆಗಾರರು ಪ್ರಶ್ನಿಸಿದರು.

ಹೊಸ ಶ್ರೀಗಂಧ ನೀತಿಯೂ ವಿಳಂಬ

ಕರ್ನಾಟಕದಲ್ಲಿ ಶ್ರೀಗಂಧ ಬೆಳೆಗಾರರ ಹಿತ ರಕ್ಷಣೆ ಜತೆಗೆ ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿ ಹೊಸ ನೀತಿಯನ್ನು ಜಾರಿಗೊಳಿಸಲು ಅರಣ್ಯ ಇಲಾಖೆಯಿಂದ ಸಾಧ್ಯವಾಗಿಲ್ಲ.

ಈಗಾಗಲೇ ಸಮಿತಿಯನ್ನು ರಚಿಸಿ ಎಂಟು ತಿಂಗಳ ಹಿಂದೆಯೇ ಹೊಸ ನೀತಿಯ ಕರಡನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದ ನೀತಿ, ತಮಿಳುನಾಡು, ಕೇರಳ, ಆಂಧ್ರಪ್ರದೇಶದ ನೀತಿಗಳ ಅಧ್ಯಯನದ ನಂತರ ಸರಳೀಕರಣ ಮಾಡುವ ಕಾರಣದಿಂದ ಹೊಸ ನೀತಿ ಜಾರಿ ವಿಳಂಬವಾಗಿದೆ ಎಂದು ಮೂಲಗಳು ತಿಳಿಸಿವೆ.

‘2002ರಲ್ಲಿ ಕೆ.ಎಚ್. ರಂಗನಾಥ್ ಅರಣ್ಯ ಸಚಿವರಾಗಿದ್ದಾಗ ರೂಪಿಸಿದ ನೀತಿಯ ಫಲವಾಗಿ ಈಗ ಕರ್ನಾಟಕದ 40 ಸಾವಿರ ಎಕರೆ ಭೂಮಿಗೆ ಶ್ರೀಗಂಧ ಬೆಳೆ ವಿಸ್ತರಣೆಗೊಂಡಿದೆ. ಆದರೆ, ಮಾರುಕಟ್ಟೆಯ ವ್ಯವಸ್ಥೆ ನಮ್ಮಲ್ಲಿ ಬಲವಾಗಿಲ್ಲ. ಕಳವು ಪ್ರಕರಣಗಳು ಹೆಚ್ಚಿವೆ. ಶ್ರೀಗಂಧ ಬೆಳೆದ ಲಾಭ ರೈತರಿಗೆ ಸಿಗದೇ ಮಧ್ಯವರ್ತಿಗಳ ಪಾಲಾಗುತ್ತಿದೆ. ಶ್ರೀಗಂಧ ಉದ್ಯಮದಲ್ಲಿ ಬದಲಾವಣೆಯಾಗಿದೆ. ಶ್ರೀಗಂಧದ ಎಣ್ಣೆ ಕಿರು ಘಟಕ ಸ್ಥಾಪಿಸಿ ಸ್ಥಳೀಯವಾಗಿ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟರೆ ರೈತರಿಗೂ ಸಹಕಾರಿಯಾಗಲಿದೆ ಎನ್ನುವುದನ್ನು ನೀತಿಯಲ್ಲಿ ತಿಳಿಸಲಾಗಿದೆ. ಇದು ಜಾರಿಯಾಗಬೇಕಷ್ಟೇ’ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಹೊಸ ನೀತಿ ಜಾರಿ ಚಟುವಟಿಕೆ ಶುರುವಾಗಿದೆ. ಇನ್ನಷ್ಟು ಸಿದ್ದತೆ, ಸ್ಪಷ್ಟತೆ ಬೇಕಿದೆ. ಬಜೆಟ್ ಅಧಿವೇಶನದ ಬಳಿಕ ಅರಣ್ಯ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು.
ಮನೋಜ್ಕುಮಾರ್, ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.