ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ: ಕ್ರಮಕ್ಕೆ ಆಗ್ರಹ

Last Updated 19 ಡಿಸೆಂಬರ್ 2021, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿ ನಾಡಿನ ಕೀರ್ತಿ ಪತಾಕೆ ಹಾರಿಸಿದ ಸಂಗೊಳ್ಳಿ ರಾಯಣ್ಣ ಕನ್ನಡಿಗರ ಹೆಮ್ಮೆ. ಅವರ ಪ್ರತಿಮೆಯನ್ನು ಹಾಳುಗೆಡವಿದ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.

‘ಪ್ರತಿಮೆಯನ್ನು ಹಾನಿಗೊಳಿಸುವ ಮೂಲಕ ಭಾಷೆ ಮತ್ತು ಸಹೋದರತ್ವಕ್ಕೆ ಎಂ.ಇ.ಎಸ್‌ ಕಾರ್ಯರ್ತರು ಧಕ್ಕೆ ತಂದಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಸಂಘರ್ಷ ಉಂಟಾಗುವಂತೆ ಮಾಡಿದ್ದಾರೆ. ನಿಷೇಧಾಜ್ಞೆ ‌ಜಾರಿಯಲ್ಲಿರುವಾಗಲೂ ಸಂಘಟನೆಯ ಮಹಿಳಾ ಕಾರ್ಯಕರ್ತರು ಪೊಲೀಸರಿಗೆ ಮಾತಿಗೆ ಬೆಲೆ ನೀಡದೆ ಶಿವಾಜಿ ಗಾರ್ಡನ್ ಬಳಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ‘ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಆರೋಪಿಸಿದ್ದಾರೆ.

‘ಸತ್ತ ಹಾವಿನಂತಾಗಿರುವ ಎಂ.ಇ.ಎಸ್‌ ಜೀವ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಬೆಳಗಾವಿಯಲ್ಲಿ ರಾಜಕೀಯವಾಗಿ ಅಸ್ತಿತ್ವ ಕಳೆದು
ಕೊಂಡಿದೆ. ಅಸ್ತಿತ್ವ ಸಾಬೀತುಪಡಿಸಲು ಇಂತಹ ಹೇಯ ಕೃತ್ಯಗಳನ್ನು ನಡೆಸುತ್ತಿದೆ’ ಎಂದೂ ಅವರು ದೂರಿದ್ದಾರೆ.

‘ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಬೆಳಗಾವಿಯ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು. ಕನ್ನಡಿಗರು ಮತ್ತು ಮರಾಠಿಗರ ನಡುವಿನ ಸಾಮರಸ್ಯಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆ ನೀಡಿ’
ಬೆಂಗಳೂರು:
‘ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನುವಿಕೃತ ಗೊಳಿಸಿ ಅಪಮಾನ ಮಾಡಿರುವ ಕಿಡಿಗೇಡಿಗಳು ದೇಶದ್ರೋಹಿಗಳು. ಈ ಕೃತ್ಯವನ್ನು ಕನ್ನಡಿಗರು ಹಾಗೂ ಸಂವಿಧಾನದಲ್ಲಿ ಶ್ರದ್ಧೆ ಹಾಗೂ ದೇಶಭಕ್ತಿ ಇರುವ ಎಲ್ಲರೂ ಖಂಡಿಸಲೇ ಬೇಕು‘ ಎಂದುಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದ್ದಾರೆ.

‘ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಡಿರುವ ಅವಮಾನವೂ ಖಂಡನಾರ್ಹ. ಕನ್ನಡಿಗರ ಹಾಗೂ ಮರಾಠಿಗರ ನಡುವಿನ ಸಹಬಾಳ್ವೆಗೆ ಧಕ್ಕೆ ತರುವ ದೇಶದ್ರೋಹಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರತಿಮೆ ಧ್ವಂಸ: ಖಂಡನೆ
ಬೆಂಗಳೂರು:
ಎಂ.ಇ.ಎಸ್‌ ಸಂಘಟನೆಯ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ವಿರೂಪಗೊಳಿಸಿ ದಾಂದಲೆ ನಡೆಸಿರುವುದನ್ನು ಬಂಡಾಯ ಸಾಹಿತ್ಯ ಸಂಘಟನೆ ಖಂಡಿಸಿದೆ.

‘ಶಾಂತಿ ಮತ್ತು ಸೌಹಾರ್ದ ಕದಡುವ ಇಂತಹ ಪುಂಡಾಟಿಕೆ ಸಂವಿಧಾನದ ಮೌಲ್ಯಗಳ ವಿರೋಧಿಯಾಗಿದೆ. ಹೊರರಾಜ್ಯದಲ್ಲಿ ವಾಸಿಸುತ್ತಿರುವ ಕನ್ನಡಿಗರು ಸಾಮರಸ್ಯದಿಂದ ಬದುಕುತ್ತಿರುವುದು ಇಂತಹ ಕಿಡಿಗೇಡಿಗಳಿಗೆ ಮಾದರಿಯಾಗಬೇಕು. ಸರ್ಕಾರ ಈಗಾಗಲೇ ಕೆಲವರನ್ನು ಬಂಧಿಸಿರುವುದು ಸ್ವಾಗತಾರ್ಹ. ಸರ್ಕಾರ ಮತ್ತು ಸಮಾಜದ ನೇತಾರರು ಸೇರಿ ಶಾಂತಿ–ಸೌಹಾರ್ದ ನೆಲೆಗೊಳಿಸಲು ಮುಂದಾಗಬೇಕು’ ಎಂದು ಸಂಘಟನೆಯ ಪ್ರೊ.ಬರಗೂರು ರಾಮಚಂದ್ರಪ್ಪ ಶನಿವಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT