ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸಂಜನಾ ಯೋಗ ಪವರ್‌

Last Updated 20 ಜೂನ್ 2019, 19:45 IST
ಅಕ್ಷರ ಗಾತ್ರ

ನಮ್ಮ ಮನಸು ಮತ್ತು ನಮ್ಮ ದೇಹ ಎರಡೂ ನಮ್ಮ ನಿಯಂತ್ರಣದಲ್ಲೇ ಇರಬೇಕು. ಈ ಲೋಕದ ಜಂಜಾಟದ ಒಳಗಿದ್ದೇ ಇಲ್ಲದಂತೆ ಬದುಕಬೇಕು. ಎಂತಹ ಸಂದಿಗ್ಧ ಸ್ಥಿತಿಯಲ್ಲೂ ಚಿತ್ತ ಮತ್ತು ದೇಹಸ್ವಾಸ್ಥ್ಯ ಕಾಪಾಡಿಕೊಳ್ಳಲು ಇರುವ ಸುಲಭ ಮತ್ತುಏಕೈಕ ಮಾರ್ಗವೇ ಯೋಗ. ಯೋಗದಿಂದ ರೋಗ ರಹಿತ ಬದುಕು ನಡೆಸಬಹುದು, ಸಾಧಿಸಲೂಬಹುದು. ನನಗೂ ಕೂಡ ಇಂತಹ ಜ್ಞಾನೋದಯ ಆಗಿದ್ದುಐದಾರು ವರ್ಷಗಳ ಹಿಂದೆ. ನನ್ನಯೋಗ ಗುರುಗಳಾದ ಅಕ್ಷರ್‌ ಅವರಿಂದ ಯೋಗ ವಿದ್ಯೆ ಸಿದ್ಧಿಸಿತು. ನಾನು ಯೋಗಕ್ಕೆ ಅಂಟಿಕೊಂಡೆ. ನನ್ನ ಸಹವಾಸದಿಂದ ನೂರಾರು ಮಂದಿಯೂ ಯೋಗಕ್ಕೆ ಅಂಟಿಕೊಂಡಿದ್ದಾರೆಎಂದು ನಟಿ ಸಂಜನಾ ಗರ್ಲಾನಿ ಅವರು ಯೋಗಾಭ್ಯಾಸ ರೂಢಿಸಿಕೊಂಡ ಬಗೆಯನ್ನು ‘ಮೆಟ್ರೊ’ ಜತೆಗೆ ಹಂಚಿಕೊಂಡಿದ್ದಾರೆ.

ಸಂಜನಾ ಪಟ್‌ಪಟಾಂತ ಹೇಳಿದ್ದು ಇಷ್ಟು

ಪ್ರತಿ ವರ್ಷ ‘ವಿಶ್ವ ಯೋಗ ದಿನ’ದಂದು ಬೆಂಗಳೂರಿನ ನಮ್ಮ ಕೇಂದ್ರಗಳಲ್ಲಿ ಯೋಗಪಟುಗಳೊಂದಿಗೆ ಸೇರಿ ಯೋಗ ಪ್ರದರ್ಶನ ನೀಡುತ್ತಿದ್ದೆ. ಸಿನಿಮಾ ರಂಗದ ಸೆಲೆಬ್ರಿಟಿಗಳೂ ಜತೆಗೂಡುತ್ತಿದ್ದರು.ಆದರೆ, ಈ ಬಾರಿ ಸಿನಿಮಾ ಕಾರಣಕ್ಕಾಗಿ ನೆರೆಯ ರಾಜ್ಯದಲ್ಲೇ ಇರಬೇಕಾಗಿ ಬಂದಿದೆ.‘‌ಬಾಕ್ಸರ್‌‘ ಎನ್ನುವ ತಮಿಳು ಸಿನಿಮಾಕ್ಕೆ ಸಹಿ ಹಾಕಿದ್ದೇನೆ. ಚೆನ್ನೈನಲ್ಲಿ ಇದೇ ಶುಕ್ರವಾರ ಸಿನಿಮಾದ ಮುಹೂರ್ತ ನಡೆಯುತ್ತಿದೆ. ಹಾಗಾಗಿ ಈ ಬಾರಿ ಬೆಂಗಳೂರಿನಲ್ಲಿ ನಮ್ಮ ಅಕ್ಷರ್‌ ಯೋಗ ಕೇಂದ್ರಗಳಲ್ಲಿ ಆಚರಿಸುವ ವಿಶ್ವ ಯೋಗ ದಿನಾಚರಣೆಯಲ್ಲಿ ನನಗೆ ಭಾಗವಹಿಸಲು ಆಗುತ್ತಿಲ್ಲವೆಂಬ ಬೇಸರವಿದೆ.

ನನ್ನ ಯೋಗ ಗುರುಗಳಾದ ಅಕ್ಷರ್‌ ಅವರು ‘ನೀವು ಯೋಗಾಭ್ಯಾಸ ಮಾಡಿ. ಹಾಗೆಯೇ ಅದನ್ನು ಪ್ರಚಾರ ಮಾಡಿ. ನಿಮ್ಮಂಥವರು ಯೋಗಾಭ್ಯಾಸ ರೂಢಿಸಿಕೊಂಡರೆ ನಿಮ್ಮನ್ನು ನೋಡಿ ಸಾವಿರಾರು ಜನರು ಯೋಗ ಅಭ್ಯಾಸ ಮಾಡುತ್ತಾರೆ. ಯೋಗ ನಿಮಗೆ ಬದುಕಿನಲ್ಲಿ ದೊಡ್ಡ ಯೋಗವನ್ನೇ ತಂದುಕೊಡುತ್ತದೆ’ ಎನ್ನುವ ಮಾತು ಹೇಳಿದ್ದರು. ಅವರಿಂದ ಕಲಿತ ಯೋಗ, ನನ್ನ ಬದುಕಿನಲ್ಲೂ ನೆಮ್ಮದಿ ತಂದುಕೊಟ್ಟಿದೆ. ಇಂದು ಬೆಂಗಳೂರು ಮಹಾನಗರದಲ್ಲಿ ಯೋಗಾ ಅಕಾಡೆಮಿಯಿಂದ 23 ಯೋಗ ಕೇಂದ್ರಗಳನ್ನು ತೆರೆದಿದ್ದೇವೆ. ಈ ಕೇಂದ್ರಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲೂ ಅದಕ್ಕೂ ಸೂಕ್ತ ವ್ಯಕ್ತಿಗಳಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಸಾವಿರಾರು ಮಂದಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ನೆಮ್ಮದಿ ನೀಡಿದ ಕೆಲಸ ಅಂದುಕೊಂಡಿದ್ದೇನೆ.

ನಗರದ ಪ್ರಮುಖ ಬಡಾವಣೆಗಳಲ್ಲಿರುವ ಅಕ್ಷರ್‌ ಯೋಗ ಕೇಂದ್ರಗಳಲ್ಲಿ ಬೆಳಿಗ್ಗೆ 6ರಿಂದ 10 ಗಂಟೆ ಮತ್ತು ಸಂಜೆ 5ರಿಂದ 8 ಗಂಟೆಯವರೆಗೆ ಯೋಗಾಭ್ಯಾಸ ನಡೆಯುತ್ತದೆ. ಯೋಗವನ್ನು ಹಣ ಗಳಿಸುವ ವ್ಯವಹಾರವಾಗಿಯೂ ನಾವು ಮಾಡಿಕೊಂಡಿಲ್ಲ. ಯೋಗದಿಂದ ಕೋಟಿ ಕೋಟಿ ಹಣ ಸಂಪಾದಿಸುತ್ತಾರೆ ಎನ್ನುವ ಮಾತುಗಳು ಯಾರದಾದರೂ ಬಾಯಲ್ಲಿ ಬಂದರೆ ಅದು ಹಸಿಸುಳ್ಳು. ಏಕೆಂದರೆ ನಮ್ಮ ಯೋಗ ಕೇಂದ್ರಗಳಲ್ಲಿ ಒಬ್ಬರಿಗೆ ಇಡೀ ಒಂದು ವರ್ಷಕ್ಕೆ ತೆಗೆದುಕೊಳ್ಳುವುದು ₹10 ಸಾವಿರ ಶುಲ್ಕ ಮಾತ್ರ. ಯೋಗ ಕಲಿಸುವ ಶಿಕ್ಷಕರ ಸಂಬಳ, ಯೋಗ ಕೇಂದ್ರದ ಬಾಡಿಗೆ, ವಿದ್ಯುತ್‌, ನೀರಿನ ಶುಲ್ಕಕ್ಕೆ ಸರಿಹೋಗುತ್ತದೆ.

ಏನೇನೆಲ್ಲಾ ಯೋಗ ಹೇಳಿಕೊಡ್ತಾರೆ ಸಂಜನಾ?

ಪವರ್‌ ಯೋಗ ಕಲಿಸಲಾಗುತ್ತದೆ. ದಡೂತಿ ಇರುವವರ ತೂಕ ಇಳಿಸಿ, ಸಣ್ಣಗೆ, ತೆಳ್ಳಗೆ ಕಾಣಿಸುವಂತೆ ಮಾಡುವ ಯೋಗ ಭಂಗಿ ಹೇಳಿಕೊಡಲಾಗುತ್ತದೆ. ಅಷ್ಟೇ ಏಕೆ, ತಲೆ ಕೆಟ್ಟು ಬರುವವರ ತಲೆ ಸರಿ ಮಾಡಿ, ಏಕಾಗ್ರತೆ, ಚಿತ್ತಶಾಂತಿ ಕಾಪಾಡಿಕೊಳ್ಳುವಂತಹ ಧ್ಯಾನ ಯೋಗವನ್ನೂಹೇಳಿಕೊಡಲಾಗುತ್ತದೆ.

‘ಗಂಡ ಹೆಂಡತಿ’ ಸಿನಿಮಾ ಖ್ಯಾತಿಯ ಸಂಜನಾ ಗರ್ಲಾನಿ ಜೊತೆಗಿನ ಈ ಪುಟ್ಟ ಮಾತುಕತೆ ಯೋಗದಷ್ಟೇ ಸಹಜ ಮತ್ತು ಆರೋಗ್ಯಪೂರ್ಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT