ಬುಧವಾರ, ಮೇ 27, 2020
27 °C
‘ಎನ್‌ಆರ್‌ಸಿ’ ಸುಳ್ಳು ಸುದ್ದಿ ಹಬ್ಬಿಸಿದ್ದೇ ಘಟನೆಗೆ ಕಾರಣ

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಯತ್ನ: ಐವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರಾಯಿ ಪಾಳ್ಯದ ಸಾದಿಕ್ ಲೇಔಟ್‌ನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಯತ್ನ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಐವರನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮೊಹ್ಮದ್ ಮುಸ್ತಾಫ್ (35), ಸುಹೇಲ್ ಪಾಷಾ (30), ಅನ್ಸರ್ ಜಬ್ಬಾರ್ (35), ಸರ್ಫರಾಜ್ ಹಡ್‌ಪಾ ಜಬ್ಬಾರ್ (38) ಹಾಗೂ ಸಗೀರ್ ಶರೀಪ್ (40) ಬಂಧಿತರು’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದರು.

‘ಕಾರ್ಯಕರ್ತೆಯರ ಮೇಲೆ  ಹಲ್ಲೆ ಯತ್ನಕ್ಕೆ ಮುಂದಾಗಿದ್ದ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ವಿಡಿಯೊ ಆಧರಿಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಅವರೆಲ್ಲರೂ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

ಎನ್‌ಆರ್‌ಸಿ ಎಂದು ಸುಳ್ಳು ಸುದ್ದಿ: ‘ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ಆರೋಗ್ಯ ಇಲಾಖೆ ಸೂಚನೆಯಂತೆ ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡಲು ಹೋಗಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಾರ್ಯಕರ್ತೆಯರನ್ನು ಕಂಡ ಕೆಲವರು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸಂಬಂಧ ಮಾಹಿತಿ ಪಡೆಯಲು ಕಾರ್ಯಕರ್ತೆಯರು ಬಂದಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಅದೇ ಸುದ್ದಿ ನಿಜವೆಂದು ತಿಳಿದು ಮೈಕ್‌ನಲ್ಲೂ ಪ್ರಚಾರ ಮಾಡಲಾಗಿತ್ತು.’

‘ಇಂಥ ಸುಳ್ಳು ಸುದ್ದಿಯಿಂದ ಸ್ಥಳೀಯ ನಿವಾಸಿಗಳು ಒಂದೆಡೆ ಸೇರಿ ಕಾರ್ಯಕರ್ತೆಯರನ್ನು ಮುತ್ತಿಗೆ ಹಾಕಿದ್ದರು. ನಂತರ, ಮೊಬೈಲ್ ಕಸಿದುಕೊಂಡಿದ್ದರು. ಸಮೀಕ್ಷೆ ಪತ್ರವನ್ನೇ ಹರಿದು ಹಾಕಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಕಾರ್ಯಕರ್ತೆಯೊಬ್ಬರು ಘಟನೆ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಿದ್ದರು. ಆ ವೈದ್ಯರೇ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು’ ಎಂದು ಮೂಲಗಳು ಹೇಳಿವೆ.

‘ಸ್ಥಳಕ್ಕೆ ಹೋದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಕಾರ್ಯಕರ್ತೆ ಕೃಷ್ಣವೇಣಿ ಎಂಬುವರು ‌ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದರು. ಆರೋಗ್ಯ ನಿರೀಕ್ಷಕ ಮುನಿರಾಜು ಅವರು ಆರೋಪಿಗಳ ವಿರುದ್ಧ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

ಜಾಮೀನು ರಹಿತ ಪ್ರಕರಣ; ಕಮಿಷನರ್ ಎಚ್ಚರಿಕೆ
‘ಕೊರೊನಾ ವೈರಾಣು ವ್ಯಾಪಾಕವಾಗಿ ಹರಡುತ್ತಿರುವ ಬೆನ್ನಲ್ಲೇ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ನರ್ಸ್‌ಗಳು ಹಗಲಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಯಾರಾದರೂ ಹಲ್ಲೆ ಮಾಡಿದರೆ, ಹಲ್ಲೆಗೆ ಪ್ರಚೋದನೆ ನೀಡಿದರೆ ಜಾಮೀನು ರಹಿತ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಕಳುಹಿಸುತ್ತೇವೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು