ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜಾಪುರ– ದೊಮ್ಮಸಂದ್ರ– ಅತ್ತಿಬೆಲೆ ರಸ್ತೆ ವಿಸ್ತರಣೆಗೆ ಮರಗಳ ಮಾರಣಹೋಮ

Last Updated 30 ಅಕ್ಟೋಬರ್ 2021, 20:08 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಜಾಪುರ– ದೊಮ್ಮಸಂದ್ರ– ಅತ್ತಿಬೆಲೆ ರಸ್ತೆ ವಿಸ್ತರಣೆಗಾಗಿ ಪಾರಂಪರಿಕ ಮರಗಳನ್ನು ಬಲಿಕೊಡಬೇಡಿ ಎಂದು ಚಿಣ್ಣರು ಕಳಕಳಿಯಿಂದ ಕೇಳಿಕೊಂಡಿದ್ದಾರೆ.

‘ಮರ ಕಡಿಯಬೇಡಿ– ನಮಗೆ ಉಸಿರಾಡಲು ಬಿಡಿ’ ಎಂಬ ಬರಹಗಳಿದ್ದ ಫಲಕಗಳನ್ನು ಪ್ರದರ್ಶಿಸುವ ಮೂಲಕ ಮಕ್ಕಳು ತಮ್ಮ ಭವಿಷ್ಯವನ್ನು ಕಸಿದುಕೊಳ್ಳಬೇಡಿ ಎಂದು ಸರ್ಕಾರವನ್ನು ವಿನಂತಿಸಿದ್ದಾರೆ.

ನಗರದ ಹೊರವಲಯದಲ್ಲಿ 155 ಕಿಲೋ ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಯೋಜನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಕೈಗೆತ್ತಿಕೊಂಡಿದೆ. ಈ ಯೋಜನೆಗೆ 8,561 ಮರಗಳನ್ನು ಬಲಿ ಪಡೆಯಲಾಗುತ್ತಿದೆ.

‘ಮರಗಳನ್ನು ಉಳಿಸಿಕೊಳ್ಳುವ ಮಾರ್ಗೋಪಾಯಗಳ ಬಗ್ಗೆಅಧಿಕಾರಿಗಳು ಏಕೆ ಯೋಚಿಸುತ್ತಿಲ್ಲ. ಮರಗಳು ನಶಿಸಿದಷ್ಟೂ ವಾತಾವರಣದಲ್ಲಿ ಕಾರ್ಬನ್‌ ಡೈಆಕ್ಸೈಡ್‌ ಪ್ರಮಾಣ ಹೆಚ್ಚಲಿದೆ. ಆಮ್ಲಜನಕದ ಪ್ರಮಾಣ ಕುಗ್ಗಲಿದೆ. ರಸ್ತೆ ವಿಸ್ತರಣೆಗೆ ಮರಗಳನ್ನು ಕಡಿಯುವುದರಲ್ಲಿ ಅರ್ಥವಿಲ್ಲ’ ಎನ್ನುತ್ತಾರೆ ಗ್ರೀನ್‌ಹುಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ವಿದ್ಯಾರ್ಧಿನಿ ರೈನಾ.

‘ಮರಗಳನ್ನು ಕತ್ತರಿಸಿದರೆ ಭವಿಷ್ಯದ ಪೀಳಿಗೆ ಸಂಕಷ್ಟಕ್ಕೆ ಸಿಲುಕಲಿದೆ. ಇಂತಹ ಭಾರಿ ಗಾತ್ರದ ಮರಗಳನ್ನು ಒಮ್ಮೆ ಕಳೆದುಕೊಂಡರೆ ಮತ್ತೆ ಅವುಗಳನ್ನು ಬೆಳೆಸುವುದು ಕಷ್ಟಸಾಧ್ಯ’ ಎಂದು ಇನ್ನೊಬ್ಬ ವಿದ್ಯಾರ್ಥಿನಿ ಶ್ರುತಿ ಅಭಿಪ್ರಾಯ‍ಪಟ್ಟರು.

ರಸ್ತೆ ಅಭಿವೃದ್ಧಿಗೆ 8,561 ಮರಗಳನ್ನು ಬಲಿ ಪಡೆಯುವುದನ್ನು ಪ್ರಶ್ನಿಸಿ ವಾಯ್ಸ್ ಆಫ್ ಸರ್ಜಾಪುರ, ಜಾಟ್ಕಾ ಡಾಟ್ ಆರ್ಗ್‌ ಮತ್ತು ರಜಿನಿ ಸಂತೋಷ್‌ ಅವರಿಂದ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ‘ಪರಿಸರಕ್ಕೆ ಸಂಬಂಧಿಸಿದ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆಯದೇ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ(ಕೆಆರ್‌ಡಿಸಿಎಲ್‌) ಆರಂಭಿಸಿದೆ’ ಎಂದು ಆರೋಪಿಸಿದ್ದರು.

ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ 2021ರ ಜನವರಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ನೋಟಿಸ್ ನೀಡಿತ್ತು. ಅನುಮತಿ ಪಡೆಯದೆಯೇ ಮರಗಳನ್ನು ಕಡಿಯದಂತೆ ಸೂಚಿಸಿತ್ತು.

‘ಈ ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವಿಳಂಬವಾಗುತ್ತಿದೆ. ಕೆಆರ್‌ಡಿಸಿಎಲ್‌ನವರು ಮರಗಳನ್ನು ಕಡಿಯುವುದನ್ನು ಮುಂದುವರಿಸಿದ್ದಾರೆ. ಹೊರ ವಲಯದ ಅನೇಕ ಪಾರಂಪರಿಕ ಮರಗಳನ್ನು ಕಳೆದುಕೊಂಡಿದ್ದೇವೆ. ಇನ್ನುಳಿದ ಮರಗಳನ್ನೂ ಕಳೆದುಕೊಳ್ಳಬೇಕಾಗುತ್ತದೆಯೇನೋ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ ದೊಮ್ಮಸಂದ್ರ ನಿವಾಸಿಗಳು.

‘ಕತ್ತರಿಸಿರುವ ಮರಗಳಿಗೆ ಕೆಂಪುಬಣ್ಣದಿಂದ ಹಾಗೂ ಸ್ಥಳಾಂತರಿಸುವ ಮರಗಳಿಗೆ ಹಳದಿ ಬಣ್ಣದ ಗುರುತುಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಇವುಗಳನ್ನು ಸ್ಥಳಾಂತರಿಸುವುದು ಅಷ್ಟರಲ್ಲೇ ಇದೆ. ಹಳೆಯ ನೇರಳೆ ಮರ, ಹುಣಸೆ ಮರಗಳು ಧರೆಗುರುಳುವುದನ್ನು ನೋಡುವಾಗ ನೋವಾಗುತ್ತದೆ’ ಎಂದು ವಾಯ್ಸ್ ಆಫ್‌ ಸರ್ಜಾಪುರದ ಜ್ಯೋತ್ಸ್ನಾ ಹೇಳಿದರು.

‘ನಗರದಲ್ಲಿ ಅಳಿದುಳಿದ ಹಸಿರನ್ನು ಉಳಿಸಿಕೊಳ್ಳಲು ನಾವು ಶಕ್ತಿ ಮೀರಿ ಪ್ರಯತ್ನಿಸಬೇಕು. ಈ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ಒತ್ತಾಯಿಸಿದರು.

---

‘ಫಲ ನೀಡದ ಪ್ರತಿಭಟನೆ’

‘ಮರಗಳನ್ನು ಉಳಿಸಿಕೊಳ್ಳುವ ಸಲುವಾಗಿ ನಾವು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಅಧಿಕಾರಿಗಳಿಗೆ 200ಕ್ಕೂ ಅಧಿಕ ಇ–ಮೇಲ್‌ಗಳನ್ನೂ ಕಳುಹಿಸಿದ್ದೇವೆ. ನಮ್ಮ ಪ್ರಯತ್ನಫಲ ನೀಡಿಲ್ಲ. ಜನರ ದನಿಯನ್ನು ಅಧಿಕಾರಿಗಳು ಕಿವಿಗೇ ಹಾಕಿಕೊಂಡಿಲ್ಲ’ ಎಂದು ಜ್ಯೋತ್ಸ್ನಾ ಬೇಸರ ವ್ಯಕ್ತಪಡಿಸಿದರು.‘ಪ್ರಕರಣ ನ್ಯಾಯಾಲಯದಲ್ಲಿರುವಾಗಲೂ ಮರ ಕಡಿಯುವ ಪ್ರಕ್ರಿಯೆ ಮುಂದುವರಿದಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇತ್ಯರ್ಥವಾಗುವವರೆಗಾದರೂ ಮರ ಕಡಿಯಬಾರದು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT