ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡರಲ್ಲಿ ತೆನೆ ಹೊತ್ತ ಮಹಿಳೆ ಮತ್ತೆರಡರಲ್ಲಿ ‘ಕೈ’ ಚಳಕ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಯಥಾಸ್ಥಿತಿ
Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಸೆರಗಿನಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ‘ಕೈ’ ಅರಳಿದೆ. ಮತ್ತೆರಡು ಕ್ಷೇತ್ರಗಳಲ್ಲಿ ‘ತೆನೆ ಹೊತ್ತ ಮಹಿಳೆ’ಗೆ ಮತದಾರರು ಮನ್ನಣೆ ನೀಡಿದ್ದಾರೆ.

ಹೊಸಕೋಟೆ, ದೊಡ್ಡಬಳ್ಳಾಪುರ ಸಾಮಾನ್ಯ ಕ್ಷೇತ್ರಗಳಾದರೆ, ದೇವನಹಳ್ಳಿ ಮತ್ತು ನೆಲಮಂಗಲ ಮೀಸಲು ಕ್ಷೇತ್ರಗಳು. 2013ರಲ್ಲಿ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿದ್ದರೆ, ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ಜಯಭೇರಿ ಭಾರಿಸಿತ್ತು.

ಹೊಸಕೋಟೆಯಲ್ಲಿ ಕಮಲ ಪಕ್ಷದ ಯುವ ಕಟ್ಟಾಳು ಶರತ್‌ ಬಚ್ಚೇಗೌಡ ಅವರನ್ನು ಕಾಂಗ್ರೆಸ್‌ನ ಎನ್‌.ನಾಗರಾಜು (ಎಂಟಿಬಿ) ಮಣಿಸಿದ್ದಾರೆ. ಈ ಮೂಲಕ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ಬಿಜೆಪಿಯ ಬಚ್ಚೇಗೌಡ ಅವರನ್ನು ಸೋಲಿಸಿದ್ದರು. ಕ್ಷೇತ್ರದಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಖ್ಯಾತಿಗೂ ಪಾತ್ರ
ರಾಗಿದ್ದಾರೆ.

ದೇವನಹಳ್ಳಿ ಕ್ಷೇತ್ರವನ್ನು ಉಳಿಸುಕೊಳ್ಳುವಲ್ಲಿ ಜೆಡಿಎಸ್‌ ಯಶಸ್ವಿಯಾಗಿದೆ. ಜೆಡಿಎಸ್‌ ವರಿಷ್ಠರು ಹಾಲಿ ಶಾಸಕ ಪಿಳ್ಳ ಮುನಿಶಾಮಪ್ಪ ಅವರಿಗೆ ನೀಡಿದ್ದ ಬಿ–ಫಾರಂ ಅನ್ನು ಕೊನೆಯ ಕ್ಷಣದಲ್ಲಿ ರದ್ದುಪಡಿಸಿ ಉದ್ಯಮಿ ನಿಸರ್ಗ ನಾರಾಯಣಸ್ವಾಮಿಗೆ ನೀಡಿದ್ದರು. ನಿಸರ್ಗ ಅವರು ವರಿಷ್ಠರ ವಿಶ್ವಾಸ ಉಳಿಸಿ
ಕೊಂಡಿದ್ದಾರೆ. ಈ ಸಲ ಪಕ್ಷದ ಗೆಲುವಿನ ಅಂತರ ಹೆಚ್ಚಾಗಿದೆ. ಸಂಸದ ವೀರಪ್ಪ ಮೊಯಿಲಿ ಶಿಷ್ಯ ವೆಂಕಟಸ್ವಾಮಿ ‘ಗೆಲುವಿನ ದಡ’ದಿಂದ ದೂರವೇ ಉಳಿದಿದ್ದಾರೆ.

ಒಂದು ಕಾಲದಲ್ಲಿ ‘ಕುಟುಂಬ ರಾಜಕಾರಣ’ಕ್ಕೆ ಪ್ರಖ್ಯಾತವಾಗಿದ್ದ ದೊಡ್ಡಬಳ್ಳಾಪುರ ಕ್ಷೇತ್ರದಲ್ಲಿ ಮತದಾರರು ಮತ್ತೆ ವೆಂಕಟರಮಣಯ್ಯ ಅವರ ‘ಕೈ’ ಹಿಡಿದಿದ್ದಾರೆ. ಕಳೆದ ಸಲ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುನೇಗೌಡ ಅವರು ಈ ಸಲ ’ತೆನೆ ಹೊತ್ತ ಮಹಿಳೆ’ಯ ಮೊರೆ ಹೋದರೂ ಮ್ಯಾಜಿಕ್ ಮಾಡಲು ಸಾಧ್ಯವಾಗಿಲ್ಲ. ಕ್ಷೇತ್ರದಲ್ಲಿ ‘ಹ್ಯಾಟ್ರಿಕ್’ ಜಯ ಸಾಧಿಸಿದ್ದ ಜೆ.ನರಸಿಂಹಸ್ವಾಮಿ (ಆರ್‌.ಎಲ್‌.ಜಾಲಪ್ಪ ಪುತ್ರ) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಆಪರೇಷನ್‌ ಕಮಲಕ್ಕೆ ಒಳಗಾಗಿ ಅವರು 2008ರಲ್ಲಿ ಬಿಜೆಪಿಗೆ ಸೇರಿದ್ದರು.

ನೆಲಮಂಗಲದಲ್ಲಿ ಜೆಡಿಎಸ್‌ ಗೆದ್ದಿದೆ. ಪಕ್ಷದ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಸತತ ಎರಡನೇ ಬಾರಿ ವಿಜಯಮಾಲೆ ಧರಿಸಿದ್ದಾರೆ. ಕಳೆದ ಸಾಲಿನಲ್ಲಿ ಸೋಲಿನ ರುಚಿ ಕಂಡಿದ್ದ ಮಾಜಿ ಶಾಸಕ ಎಂ.ವಿ.ನಾಗರಾಜ್‌ (ಬಿಜೆಪಿ) ಈ ಸಲ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT