ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿರ್ಭೀತ ದೇಶಭಕ್ತ ಸಾವರ್ಕರ್’

‘ಸಾವರ್ಕರ್’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಲೇಖಕ ಬಾಬು ಕೃಷ್ಣಮೂರ್ತಿ
Last Updated 28 ನವೆಂಬರ್ 2020, 20:17 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿಂದುತ್ವದ ವಿಚಾರವಾಗಿ ಸಾವರ್ಕರ್ ಅವರು ಧೈರ್ಯವಾಗಿ ಹಾಗೂ ನಿಷ್ಠುರವಾಗಿ ವಿಚಾರಗಳನ್ನು ಪ್ರಸ್ತುತಪಡಿಸುತ್ತಿದ್ದರು. ನಿರ್ಭೀತ ದೇಶಭಕ್ತರಾಗಿದ್ದ ಅವರ ಬಲಿದಾನ, ಹೋರಾಟಗಳನ್ನು ಇತಿಹಾಸದ ಪುಟಗಳಲ್ಲಿ ಮರೆಮಾಡಲಾಗಿದೆ’ ಎಂದು ಲೇಖಕ ಬಾಬು ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ವಸಂತ ‍ಪ್ರಕಾಶನವು ನಗರದಲ್ಲಿ ಶನಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಕನ್ನಡಕ್ಕೆ ಅನುವಾದಿಸಿರುವ ‘ಸಾವರ್ಕರ್: ಹಿಂದುತ್ವದ ಜನಕನ ನಿಜಕತೆ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟದ ಜತೆಗೆ ಸಮಾಜ ಸುಧಾರಣೆ, ಬರಹ ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಂಪೂರ್ಣ ಸ್ವಾತಂತ್ರ್ಯ ಪಡೆಯುವುದೇ ನಮ್ಮ ಹೋರಾಟದ ಗುರಿಯೆಂದು ಮೊದಲು ಘೋಷಿಸಿದವರು ಸಾವರ್ಕರ್‌. ಆದರೆ, ಅಸೂಯೆ, ದ್ವೇಷ, ರಾಜಕೀಯ ಲಾಭಕ್ಕಾಗಿ ಅವರ ವಿರುದ್ಧ ಸುಳ್ಳು ಪ್ರಚಾರ ನಡೆಸಿ, ಅವರ ಬಲಿದಾನ ಮತ್ತು ಹೋರಾಟವನ್ನು ಮರೆಮಾಚಲಾಯಿತು. ಇತ್ತೀಚಿನ ದಿನಗಳಲ್ಲಿ ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಜನರಲ್ಲಿ ಹೆಚ್ಚಲಾರಂಭಿಸಿದೆ. ಇದರಿಂದ ಸತ್ಯಸಂಗತಿಗಳು ಅನಾವರಣಗೊಳ್ಳುತ್ತಿವೆ’ ಎಂದು ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಿರೀಶ್ ಭಟ್ ಅಜಕ್ಕಳ, ‘ವಿದ್ವತ್ ಕ್ಷೇತ್ರವು ಸಾವರ್ಕರ್‌ ಅವರನ್ನು ಕೇವಲ ಹಿಂದುತ್ವದ ಪ್ರತಿಪಾದಕ ಎಂದು ಬಿಂಬಿಸಿದೆ. ನಿರ್ದಿಷ್ಟ ಪ್ರಕರಣಗಳಿಗೆ ಮಾತ್ರ ಸೀಮಿತಮಾಡಲಾಗಿದೆ. ಆದರೆ, ಅವರು ಅಂಬೇಡ್ಕರ್, ಗಾಂಧೀಜಿಗಿಂತಲೂ ಮೊದಲೇ ಅಸ್ಪೃಶ್ಯತೆಯ ಜತೆಗೆ ವಿವಿಧ ಮೂಢನಂಬಿಕೆಗಳು ತೊಲಗಬೇಕು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಬ್ರಿಟಿಷ್ ವಿರೋಧಿ ಅಲೆ ಇಲ್ಲಿ ಪ್ರಾರಂಭವಾಗುವ ಮೊದಲೇ ಅವರು ಇಂಗ್ಲಿಷರನ್ನು ನಮ್ಮ ದೇಶದಿಂದ ಹೊಡೆದೊಡಿಸಬೇಕೆಂದು ಕರೆ ನೀಡಿದ್ದರು. ಸ್ವಾತಂತ್ರ್ಯ ಹೋರಾಟ ಮತ್ತು ಭಾರತದ ಸಾಮಾಜಿಕ ಚರಿತ್ರೆಯಲ್ಲಿ ‌ಅವರು ಪ್ರಮುಖ ಸ್ಥಾನವನ್ನು ಪಡೆಯಬೇಕಿತ್ತು’ ಎಂದರು.

ಅನುವಾದಕ ಬಿ.ಎಸ್. ಜಯಪ್ರಕಾಶ ನಾರಾಯಣ, ‘ಸ್ವಾತಂತ್ರ್ಯ ಹೋರಾಟದ ಇತಿಹಾಸವು ಗಾಂಧೀಜಿ ಕೇಂದ್ರೀಕೃತವಾಗಿದೆ. ಈ ಹೋರಾಟದ ಹಿಂದೆ ಹಲವರ ಬಲಿದಾನವಿದೆ. ಇತಿಹಾಸದ ಪುಟಗಳಲ್ಲಿ ಸಾವರ್ಕರ್‌ ಅವರನ್ನು ಕೆಲ ಘಟನೆಗಳಿಗೆ ಸೀಮಿತಗೊಳಿಸಿ, ವಾಸ್ತವಾಂಶ ಮರೆಮಾಚಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT