ಶನಿವಾರ, ಡಿಸೆಂಬರ್ 7, 2019
25 °C
ಕಬ್ಬನ್‌ ಉದ್ಯಾನ: ಹೋರಾಟ ಅಥವಾ ಪಿಐಎಲ್

‘ಒಂದನ್ನು ಆಯ್ಕೆ ಮಾಡಿಕೊಳ್ಳಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಬ್ಬನ್‌ ಪಾರ್ಕ್‌ನಲ್ಲಿ ಹೈಕೋರ್ಟ್‌ನ ಏಳು ಮಹಡಿಗಳ ಅನೆಕ್ಸ್ ಕಟ್ಟಡ ನಿರ್ಮಾಣ ಮಾಡಲು ಏಕಸದಸ್ಯ ನ್ಯಾಯಪೀಠ ಹಸಿರು ನಿಶಾನೆ ತೋರಿರುವ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ಪ್ರತಿಭಟನೆ ಅಥವಾ ಕಾನೂನು ಹೋರಾಟದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ’ ಎಂದು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರಿಗೆ ತಾಕೀತು ಮಾಡಿದೆ.

ಈ ಕುರಿತಂತೆ ‘ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘ’ದ ಅಧ್ಯಕ್ಷ ಎಸ್.ಉಮೇಶ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ಹಾಗೂ ನ್ಯಾ. ಪ್ರದೀಪ್ ಸಿಂಗ್ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರನ್ನು, ‘ಅತ್ತ ಸಾರ್ವಜನಿಕ ಪ್ರತಿಭಟನೆ, ಇತ್ತ ಕಾನೂನು ಹೋರಾಟವನ್ನೂ ನಡೆಸುತ್ತಿದ್ದೀರಿ, ಒಂದೋ ಪ್ರತಿಭಟನೆ ನಡೆಸಿ. ಇಲ್ಲವೇ ಸಾಂವಿಧಾನಿಕ ಅವಕಾಶಗಳಡಿ ನ್ಯಾಯಾಲಯದಲ್ಲಿ ಪರಿಹಾರ ಪಡೆದುಕೊಳ್ಳಿ’ ಎಂದು ನ್ಯಾಯಪೀಠ ಹೇಳಿತು. ಅಂತೆಯೇ, ‘ಈ ಅರ್ಜಿಯಲ್ಲಿ ಹೈಕೋರ್ಟ್‌ ಅನ್ನು ಯಾಕೆ ಪ್ರತಿವಾದಿ ಪಕ್ಷಗಾರನನ್ನಾಗಿ ಸೇರ್ಪಡೆ ಮಾಡಿಲ್ಲ’ ಎಂದೂ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲರು, ‘ನಮ್ಮದು ಪ್ರತಿಭಟನೆ ಅಲ್ಲ, ಶಾಂತಿಯುತವಾಗಿ ಜನಾಭಿಪ್ರಾ
ಯ ಮೂಡಿಸುವ ಪ್ರಯತ್ನ’ ಎಂದರು.

‘ಕಟ್ಟಡ ನಿರ್ಮಾಣಕ್ಕೆ ನೀಡಲಾದ ತಾತ್ಕಾಲಿಕ ಅನುಮತಿ ಪತ್ರದ ಪ್ರತಿ ನಮಗೆ ಸಿಕ್ಕಿಲ್ಲ’ ಎಂಬ ಅರ್ಜಿದಾರರ ಪರ ವಕೀಲರ ಆಕ್ಷೇಪಣೆಯನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಮುಂದಿನ ವಿಚಾರಣೆ ವೇಳೆಗೆ ಸರ್ಕಾರದ ಆದೇಶದ ಪ್ರತಿಯನ್ನು ಸಲ್ಲಿಸಿ’ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಡಿ. 5ಕ್ಕೆ ಮುಂದೂಡಿತು.

ನೋಟಿಸ್‌: ಪ್ರಕರಣದಲ್ಲಿ ಹೈಕೋರ್ಟ್ ಅನ್ನು ಪ್ರತಿವಾದಿಯನ್ನಾಗಿ ಸೇರಿಸಲು ಅರ್ಜಿದಾರರಿಗೆ ಅವಕಾಶ ನೀಡಿದ ನ್ಯಾಯಪೀಠ, ಪ್ರತಿವಾದಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬಿಬಿಎಂಪಿ) ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಮನವಿ ಏನು?: ‘ಉದ್ದೇಶಿತ ಏಳು ಅಂತಸ್ತಿನ ಅನೆಕ್ಸ್‌ ಕಟ್ಟಡ ನಿರ್ಮಾಣವಾದರೆ ಕಬ್ಬನ್‌ ಪಾರ್ಕ್‌ ಸುತ್ತಮುತ್ತಲ ಪರಿಸರ ಹಾಳಾಗುತ್ತದೆ. ವಿಧಾನಸೌಧ, ರಾಜಭವನ ಹಾಗೂ ಹೈಕೋರ್ಟ್‌ಗಳ ಭದ್ರತೆ ದೃಷ್ಟಿಯಿಂದಲೂ ಇದು ಅಪಾಯಕಾರಿ. ಆದ್ದರಿಂದ, ಕಟ್ಟಡ ನಿರ್ಮಾಣದ ಪ್ರಸ್ತಾವ ಕೈ ಬಿಡುವಂತೆ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂಬುದು ಅರ್ಜಿದಾರರ ಮನವಿ.

ರಾಜ್ಯ ಸರ್ಕಾರಿ ನೌಕರರ ವಿಮಾ ಇಲಾಖೆ (ಕೆಜಿಐಡಿ) ಕಟ್ಟಡ ಹಾಗೂ ಪ್ರೆಸ್‌ಕ್ಲಬ್‌ ನಡುವೆ ಈ ಹಿಂದೆ ಇದ್ದ ಚುನಾವಣಾ ಆಯೋಗದ ಕಚೇರಿ ಜಾಗದಲ್ಲಿ ಸದ್ಯ ರಾಜ್ಯ ವಕೀಲರ ಪರಿಷತ್ ಕಚೇರಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ 2019ರ ಸೆಪ್ಟೆಂಬರ್‌ 23ರಂದು ತಾತ್ಕಾಲಿಕ ಅನುಮತಿ ಪತ್ರ ನೀಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು