ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಕರ್ನಾಟಕದಲ್ಲಿ ಇಂದಿನಿಂದ ರಾಹುಲ್‌ ಪ್ರವಾಸ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ‘ಜನಾಶೀರ್ವಾದ ಯಾತ್ರೆ’ ಶನಿವಾರದಿಂದ ಮೂರು ದಿನ ಮುಂಬೈ– ಕರ್ನಾಟಕ ಭಾಗದಲ್ಲಿ ನಡೆಯಲಿದೆ.

ಹೈದರಾಬಾದ್ ಕರ್ನಾಟಕದಲ್ಲಿ ಸಂಘಟಿಸಿದ್ದ ಮೊದಲ ಹಂತದ ಯಾತ್ರೆಗೆ ವ್ಯಕ್ತವಾದ ಜನಬೆಂಬಲ ಕಾಂಗ್ರೆಸ್ ಪಾಳಯದಲ್ಲಿ ನವ ಚೈತನ್ಯ ಮೂಡಿಸಿದ್ದು, ಅದರ ಮುಂದುವರಿದ ಭಾಗವಾಗಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯಲಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಭಾಗ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಪರವಾಗಿ ವಾಲಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿ- ಕೆಜೆಪಿ ವಿಭಜನೆ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿತ್ತು. ಇಲ್ಲಿ ಆಧಿಪತ್ಯ ಉಳಿಸಿಕೊಳ್ಳಲು ಕಾಂಗ್ರೆಸ್ ‌ಕಾರ್ಯತಂತ್ರ ರೂಪಿಸಿದೆ.

ಈ ಕಾರಣಕ್ಕೆ, ಯಾತ್ರೆ ಸಂದರ್ಭದಲ್ಲಿ ಮಹದಾಯಿ ವಿಷಯವನ್ನು ರಾಹುಲ್ ಪ್ರಸ್ತಾಪಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸದೆ ಇರುವುದನ್ನೇ ಪ್ರಧಾನ ಅಸ್ತ್ರವಾಗಿ ಬಳಸುವ ಬಗ್ಗೆ ಪಕ್ಷದ ರಾಜ್ಯ ನಾಯಕರು ಚರ್ಚೆ ನಡೆಸಿದ್ದಾರೆ. ರಾಹುಲ್ ಗಾಂಧಿಗೆ ಈ ಬಗ್ಗೆ ಈಗಾಗಲೇ ನಾಯಕರು ಮಾಹಿತಿ ನೀಡಿದ್ದಾರೆ.

ಆ ಮೂಲಕ ಪ್ರಧಾನಿ ಮತ್ತು ಬಿಜೆಪಿ ವಿರುದ್ಧ ಜನಾಭಿಪ್ರಾಯ ಮೂಡಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಅಲ್ಲದೆ, ಈ ಭಾಗದಲ್ಲಿ ರಾಜ್ಯ ಸರ್ಕಾರ 5 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಿದ ನೀರಾವರಿ ಯೋಜನೆಗಳ ಬಗ್ಗೆಯೂ ಜನರ ಗಮನ ಸೆಳೆಯುವ ಸಾಧ್ಯತೆ ಇದೆ.

ಆದರೆ, ಪ್ರತ್ಯೇಕ ಲಿಂಗಾಯತ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ಯಾವುದೇ ಸ್ಪಷ್ಟ ನಿಲುವು ತಳೆದಿಲ್ಲ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ವಿಷಯದಲ್ಲಿ ಪಕ್ಷದಲ್ಲಿರುವ ಎಡಗೈ ಮತ್ತು ಬಲಗೈ ಬಣಗಳ ಮಧ್ಯೆ ಇನ್ನೂ ಒಮ್ಮತ ಮೂಡಿಲ್ಲ. ಹೀಗಾಗಿ ಈ ಎರಡೂ ವಿಷಯಗಳ ಬಗ್ಗೆ ರಾಹುಲ್ ಮಾತನಾಡುವ ಸಂಭವ ಕಡಿಮೆ ಎಂದೂ ಹೇಳಲಾಗುತ್ತಿದೆ.

ಈ ಬಾರಿಯ ರಾಹುಲ್ ಪ್ರವಾಸ ಕಾರ್ಯಕ್ರಮದಲ್ಲಿ ಧಾರ್ಮಿಕ ಕೇಂದ್ರಗಳ ಭೇಟಿಯ ಪ್ರಸ್ತಾಪ ಇಲ್ಲ. ಆದರೆ, ಅವರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ತೆರಳುವ ಸಾಧ್ಯತೆ ಇದೆ. ಸವದತ್ತಿ ಯಲ್ಲಮ್ಮ ಮತ್ತು ವಿಜಯಪುರದ ದರ್ಗಾಕ್ಕೆ ಭೇಟಿ ನೀಡುವುದನ್ನು ಪಕ್ಷದ ಮೂಲಗಳು ಖಚಿತಪಡಿಸಿವೆ. ಮೊದಲ ಹಂತದ ಯಾತ್ರೆ ಸಂದರ್ಭದಲ್ಲಿ ರೋಡ್ ಶೋಗೆ ಹೆಚ್ಚು ಆದ್ಯತೆ ನೀಡಲಾಗಿತ್ತು. ಈ ಬಾರಿ ರಸ್ತೆ ಪ್ರಯಾಣ ಕಡಿಮೆ ಮಾಡಿ ಹೆಲಿಕಾಪ್ಟರ್ ಮೂಲಕ ಒಂದು ನಗರದಿಂದ ಮತ್ತೊಂದು ನಗರಕ್ಕೆ ನೆಗೆಯಲಿದ್ದಾರೆ.

ಭೇಟಿ ಎಲ್ಲೆಲ್ಲಿ?

ಫೆ.24- ಬೆಳಿಗ್ಗೆ 11.30ಕ್ಕೆ ಬೆಳಗಾವಿಗೆ ಬರಲಿರುವ ರಾಹುಲ್, ಮಧ್ಯಾಹ್ನ ಅಥಣಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಬಳಿಕ ವಿಜಯಪುರ ಜಿಲ್ಲೆ ತಿಕೋಟದಲ್ಲಿ ಸ್ತ್ರೀಶಕ್ತಿ ಸಮಾವೇಶ, ಚಿಕ್ಕೋಡಿಯಲ್ಲಿ ಸಭೆ, ಬಿಜಾಪುರ ನಗರಕ್ಕೆ ಬಸ್‌ನಲ್ಲಿ ಸಂಚಾರ ನಡೆಸುವರು.

ಫೆ.25- ಬಾಗಲಕೋಟೆ ಜಿಲ್ಲೆ ಜಮಖಂಡಿ ಬ್ಯಾರೇಜ್ ಬಳಿ ಸಂಭ್ರಮಾಚರಣೆ, ವಿಜಯಪುರ ಜಿಲ್ಲೆ ಮುಳವಾಡ ಭೇಟಿ, ಬಾಗಲಕೋಟೆ ಜಿಲ್ಲೆ ಬೀಳಗಿಯಲ್ಲಿ ಬೀದಿ ಬದಿ ಸಭೆ, ಮುಧೋಳದಲ್ಲಿ ಸಾರ್ವಜನಿಕ ಸಭೆ.

ಫೆ.26- ಬಾಗಲಕೋಟೆ, ವಿಜಯಪುರ ಮುಖಂಡರೊಂದಿಗೆ ಸಭೆ, ರಾಮದುರ್ಗ, ಸವದತ್ತಿಯಲ್ಲಿ  ಬೀದಿ ಬದಿಯ ಸಭೆ, ಧಾರವಾಡ ಮೂಲಕ ಹುಬ್ಬಳ್ಳಿಗೆ ಪ್ರಯಾಣಿಸಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವರು.

4ರಂದು ಬೆಳಗಾವಿಗೆ ಪ್ರಧಾನಿ ಮೋದಿ?
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್‌ 4ರಂದು ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಪ್ರವಾಸ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ತಾತ್ಕಾಲಿಕ ವೇಳಾಪಟ್ಟಿ ಬಂದಿದೆ.

ಅಮಿತ್ ಶಾ ದಾಂಗುಡಿ
ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬೈ ಕರ್ನಾಟಕ ಪ್ರವಾಸದ ಬೆನ್ನಲ್ಲೇ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹೈದರಾಬಾದ್ ಕರ್ನಾಟಕಕ್ಕೆ ದಾಂಗುಡಿ ಇಡಲಿದ್ದಾರೆ. ಬೀದರ್, ಕಲಬುರ್ಗಿಗೆ ಇತ್ತೀಚೆಗೆ ಬಂದಿದ್ದ ರಾಹುಲ್‌ ದೇವಸ್ಥಾನ, ದರ್ಗಾಗಳಿಗೆ ಭೇಟಿ ನೀಡಿದ್ದರು.

ಶನಿವಾರ (ಫೆ.24) ರಾತ್ರಿ 8.30ಕ್ಕೆ ಬೀದರ್‌ಗೆ ಬರಲಿರುವ ಶಾ ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಫೆ.25ರಂದು ನರಸಿಂಹ ಹಜಾರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅದೇ ದಿನ ಮಧ್ಯಾಹ್ನ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನವಶಕ್ತಿ ಸಮಾವೇಶದಲ್ಲಿ ಭಾಗಿಯಾಲಿದ್ದಾರೆ. ಫೆ.26ರ ಬೆಳಿಗ್ಗೆ ಕ್ಷೇತ್ರ ಮಳಖೇಡಕ್ಕೆ ಭೇಟಿ ನೀಡಲಿರುವ ಶಾ, ಮಧ್ಯಾಹ್ನ 11.55ಕ್ಕೆ ಹಿಂದುಳಿದ ಸಮುದಾಯದವರ ಜತೆ ಸಮಾಲೋಚನೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT