ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ಎಕರೆ ಸರ್ಕಾರಿ ಗೋಮಾಳಕ್ಕೆ ಅಕ್ರಮ ಖಾತೆ

ಉಪವಿಭಾಗಾಧಿಕಾರಿ ರಂಗನಾಥ್ ಅಮಾನತಿಗೆ ಶಿಫಾರಸು l ಸರ್ಕಾರಕ್ಕೆ ಪ್ರಧಾನ ಕಾರ್ಯದರ್ಶಿ ವರದಿ ಸಲ್ಲಿಕೆ
Last Updated 25 ಜುಲೈ 2020, 19:19 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಯಲಹಂಕ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಉತ್ತರ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ
ಕೋಟ್ಯಂತರ ರೂಪಾಯಿ ಬೆಲೆ ಬಾಳುವ 37 ಎಕರೆ ಸರ್ಕಾರಿ ಗೋಮಾಳವನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಡಲು ಆದೇಶಿಸಿರುವುದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ನಡೆಸಿದ ತನಿಖೆಯಿಂದ
ಬೆಳಕಿಗೆ ಬಂದಿದೆ.

ಗೋಮಾಳವನ್ನು ಖಾಸಗಿಯವರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ ದೂರುಗಳು ಬಂದ ಹಿನ್ನೆಲೆಯಲ್ಲಿ ಎನ್. ಮಂಜುನಾಥ್ ಪ್ರಸಾದ್ ಅವರು ಶನಿವಾರ ಉಪವಿಭಾಗಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅಕ್ರಮದ ಕುರಿತ ವರದಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. ಈ ಅಕ್ರಮಗಳನ್ನು ನಡೆಸಿರುವ ಆರೋಪ ಎದುರಿಸುತ್ತಿರುವ ಉಪವಿಭಾಗಾಧಿಕಾರಿ ಕೆ.ರಂಗನಾಥ್ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.

‘2020ರ ಮಾರ್ಚ್ 26ರಿಂದ ಜೂನ್ 26ರವರೆಗೆ ಬೆಂಗಳೂರು ಉತ್ತರ ವಿಭಾಗಾಧಿಕಾರಿಯಾಗಿಇವರು ಕರ್ತವ್ಯ ನಿರ್ವಹಿಸಿದ್ದಾರೆ. ಏಪ್ರಿಲ್ 3ರವರೆಗೆ ಲಾಕ್‌ಡೌನ್ಇದ್ದ ಕಾರಣ ಆ ನಂತರ 116 ಆದೇಶಗಳನ್ನು ಅವರು ಹೊರಡಿಸಿದ್ದು, ಅವುಗಳಲ್ಲಿ ಸರ್ಕಾರಿ ಗೋಮಾಳಕ್ಕೆ ಸಂಬಂಧಿಸಿದ 15 ಪ್ರಕರಣಗಳು ಒಳಗೊಂಡಿವೆ. ಉತ್ತರ ತಾಲ್ಲೂಕಿನ ಕನ್ನಲ್ಲಿ, ಲಕ್ಷ್ಮೀಪುರ, ಕೊಡಿಗೇಹಳ್ಳಿ, ಗೌಡಹಳ್ಳಿ, ಪೂರ್ವ ತಾಲ್ಲೂಕಿನ ಬಿದರಹಳ್ಳಿ, ಕ್ಯಾಲಸನಹಳ್ಳಿ, ಭೋಗನಹಳ್ಳಿ, ಯಲಹಂಕ ತಾಲ್ಲೂಕಿನ ಬೆಟ್ಟಹಲಸೂರು ಮತ್ತು ಸಾತನೂರು ಗ್ರಾಮಗಳ ವ್ಯಾಪ್ತಿಯ 37 ಎಕರೆ 10 ಗುಂಟೆ ಜಾಗವನ್ನು ಮಂಜೂರು ಮಾಡಿದ್ದಾರೆ’ ಎಂದು ಪ್ರಧಾನ ಕಾರ್ಯದರ್ಶಿಯವರು ವರದಿಯಲ್ಲಿ ವಿವರಿಸಿದ್ದಾರೆ.

‘ಅಷ್ಟೂ ಜಾಗ ಗೋಮಾಳವಾಗಿರುವ ಕಾರಣ ಮೂಲ ಮಂಜೂರಾತಿ ದಾಖಲೆಗಳ ನೈಜತೆಯನ್ನು ಉಪವಿಭಾಗಾಧಿಕಾರಿ ಪರಿಶೀಲನೆ ಮಾಡಬೇಕಿತ್ತು ಹಾಗೂ ಸಂಬಂಧಿಸಿದ ತಹಶೀಲ್ದಾರ್‌ಗಳಿಂದ ವರದಿ ಪಡೆಯಬೇಕಿತ್ತು. ಈ ಯಾವುದೇ ಕ್ರಮಗಳನ್ನು ಅನುಸರಿಸಿಲ್ಲ. ಆದೇಶ ಕಾಯ್ದಿರಿಸಿ, ನಂತರ2–3 ದಿನಗಳಲ್ಲೇ ಆದೇಶ ಹೊರಡಿಸಿದ್ದಾರೆ’ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

‘ಮೂಲ ದಾಖಲೆಗಳ ನೈಜತೆ ಪರಿಶೀಲನೆ ಮಾಡದ ಕಾರಣ ಎಲ್ಲಾ ಆದೇಶಗಳ ವಿರುದ್ಧ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಭೂಕಬಳಿಕೆ ನಿಷೇಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ. ದಾಖಲೆಗಳ ನೈಜತೆ ಪರಿಶೀಲಿಸಿ ಸೂಕ್ತ ಆದೇಶ ಹೊರಡಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿಗೂ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಭೂಮಾಫಿಯಾ ಜತೆ ಶಾಮೀಲು

‘ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಖಾಸಗಿಯವರ ಪಾಲಾಗಲು ಕೆ.ರಂಗನಾಥ್ ಅವರು ಮಾಫಿಯಾ ಜತೆ ಕೈಜೋಡಿಸಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ’ ಎಂದು ಮಂಜುನಾಥ್ ಪ್ರಸಾದ್ ವರದಿಯಲ್ಲಿ ಹೇಳಿದ್ದಾರೆ.

‘ಜಮೀನು ಮಂಜೂರಾತಿಗೆ ಸಂಬಂಧಿಸಿದ ದೃಢೀಕೃತ ದಾಖಲೆಗಳು ಕಡತದಲ್ಲಿ ಇಲ್ಲದಿದ್ದರೂ, ಸಾಗುವಳಿ ಚೀಟಿ, ‌ಮ್ಯುಟೇಷನ್, ಸರ್ವೆ ದಾಖಲೆಗಳು, ಕೈ ಬರಹದ ಪಹಣಿಗಳ ಜೆರಾಕ್ಸ್ ‍ಪ್ರತಿಗಳು ಸೇರಿ ಎಲ್ಲವೂ ಸೃಷ್ಟಿತ ದಾಖಲೆಗಳು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಕೆಲ ಪ್ರಕರಣಗಳಲ್ಲಿ ಪುಸ್ತಕದ ಕೊನೆಯ ಹಾಳೆಯಲ್ಲಿ ಮ್ಯುಟೇಷನ್ ಬರೆದಿರುವುದು ಕಂಡು ಬಂದಿದೆ’ ಎಂದು ತಿಳಿಸಿದ್ದಾರೆ. ‘ಭೂಗಳ್ಳರಿಗೆ ನೆರವಾಗುವ ಉದ್ದೇಶದಿಂದ ಈ ರೀತಿ ಮಾಡಿರುವ ಕೆ.ರಂಗನಾಥ್ ಅವರನ್ನುಕರ್ನಾಟಕ ನಾಗರಿಕ ಸೇವಾ ನಿಯಮಗಳಡಿ ಕೂಡಲೇ ಅಮಾನತುಗೊಳಿಸಲು ಶಿಫಾರಸು ಮಾಡಲಾಗಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT