ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಮೈದಾನಕ್ಕೆ ವಾಹನ ಬಿಡಲು ಒಪ್ಪಿಗೆ: ಪೊಲೀಸರ ಪ್ರಯತ್ನ ಯಶಸ್ಸು

ರೆಸಿಡೆನ್ಸಿ ರಸ್ತೆಯಲ್ಲಿ ಸುಗಮ ವಾಹನ ಸಂಚಾರ l ಪೊಲೀಸರ ಪ್ರಯತ್ನ ಯಶಸ್ಸು
Last Updated 1 ಡಿಸೆಂಬರ್ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ರೆಸಿಡೆನ್ಸಿ ರಸ್ತೆಯಲ್ಲಿ ವಾಹನ ದಟ್ಟಣೆಯ ಸಮಸ್ಯೆಗೆ ಕೊನೆಗೂ ಪರಿಹಾರ ಸಿಕ್ಕಿದೆ.

ಈ ರಸ್ತೆಯಲ್ಲಿ ಕಳೆದ ಎರಡು ದಿನಗಳಿಂದ ದಟ್ಟಣೆ ಅವಧಿಯಲ್ಲೂ ವಾಹನಗಳು ಸುಗಮವಾಗಿ ಸಂಚರಿಸುತ್ತಿವೆ. ಪೊಲೀಸರ ಪ್ರಯತ್ನಕ್ಕೆ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲೆ ಆರಂಭಗೊಳ್ಳುವ ಹಾಗೂ ಶಾಲೆ ಬಿಡುವ ಸಮಯದಲ್ಲಿ ವಾಹನಗಳು ಸುಗಮವಾಗಿ ಸಾಗುತ್ತಿವೆ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.

ರೆಸಿಡೆನ್ಸಿ ರಸ್ತೆಯಲ್ಲಿ ಆಗುತ್ತಿದ್ದ ಸಮಸ್ಯೆ ಕುರಿತು ‘ಶಾಲಾ ವಲಯ... ದಟ್ಟಣೆ ತಾಪತ್ರಯ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿ ಪ್ರಕಟವಾದ ನಂತರ ಅಶೋಕನಗರದ ಸಂಚಾರ ಪೊಲೀಸರು ಶಾಲಾ ಆಡಳಿತ ಮಂಡಳಿಯ ಜೊತೆಗೆ ಚರ್ಚಿಸಿದ್ದರು. ಆದರೆ, ಪೋಷಕರ ವಾಹನಗಳನ್ನು ಬಿಷಪ್‌ ಕಾಟನ್‌ ಶಾಲಾ ಸಿಬ್ಬಂದಿ ಗೇಟ್‌ ಒಳಗೆ ಬಿಡದೆ ಪೊಲೀಸರ ಜೊತೆಗೇ ವಾಗ್ವಾದ ನಡೆಸಿದ್ದರು.

‘ಈಗ ಈ ರಸ್ತೆಯಲ್ಲಿನ ಸಮಸ್ಯೆ ಶಾಲಾ ಆಡಳಿತ ಮಂಡಳಿಗೆ ಮನವರಿಕೆಯಾಗಿದೆ. ನಮ್ಮೊಂದಿಗೆ ಚರ್ಚಿಸಿ ಪೋಷಕರ ವಾಹನಗಳನ್ನು ಶಾಲಾ ಆವರಣಕ್ಕೆ ಬಿಡಲು ಒಪ್ಪಿದ್ದಾರೆ. ಎರಡು ದಿನಗಳಿಂದ ಬಿಷಪ್‌ ಕಾಟನ್‌ ಬಾಲಕರ ಶಾಲೆಯ ಮೈದಾನಕ್ಕೆ ಪೋಷಕರ ವಾಹನಗಳು ಪ್ರವೇಶಿಸುತ್ತಿವೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಶಾಂತಿನಗರ ಜೋಡಿರಸ್ತೆಯ ಮಿಷನ್ ರಸ್ತೆ ಹಾಗೂ ರಿಚ್ಮಂಡ್ ವೃತ್ತಕ್ಕೆ ಹೊಂದಿಕೊಂಡಿರುವ ರೆಸಿಡೆನ್ಸಿ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ಶಾಲೆಗಳಿವೆ. ಆಸುಪಾಸಿನಲ್ಲಿಯೇ ಸೇಕ್ರೆಡ್‌ ಹಾರ್ಟ್‌ ಶಾಲೆಯಿದೆ. ಶಾಲೆಗೆ ಮಕ್ಕಳನ್ನು ಬಿಡಲು ಬರುವ ಪೋಷಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಿದ್ದರು. ಶಾಲೆಯಲ್ಲಿ ದೊಡ್ಡ ಮೈದಾನವಿದ್ದರೂ ಪೋಷಕರ ವಾಹನಕ್ಕೆ ನಿರ್ಬಂಧವಿತ್ತು. ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗಳು ಮುಂದಕ್ಕೆ ಸಾಗಲು ಸಾಧ್ಯವಾಗುತ್ತಿರಲಿಲ್ಲ. ಶಾಲಾ ಆಡಳಿತ ಮಂಡಳಿ ನಿರ್ಧಾರದಿಂದ ನಿತ್ಯ ಸಾವಿರಾರರು ಪ್ರಯಾಣಿಕರು ತೊಂದರೆಗೆ ಸಿಲುಕುತ್ತಿದ್ದರು.

‘ಪೋಷಕರ ವಾಹನಗಳಿಗೆ ಬಿಷಪ್‌ ಕಾಟನ್‌ ಬಾಲಕರ ಶಾಲೆಯಲ್ಲಿ ಪ್ರವೇಶ ನೀಡಲಾಗುತ್ತಿದೆ. ಶಾಲೆಗೆ ಬರುವ ಮಕ್ಕಳನ್ನು ಶಾಲಾ ಆವರಣದಲ್ಲಿಯೇ ಇಳಿಸಲಾಗುತ್ತಿದೆ. ಹೊರಹೋಗಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯಲ್ಲೂ ಪ್ರವೇಶ ಮಾರ್ಗ ಗುರುತಿಸಲಾಗಿದೆ. ಹೊರಹೋಗುವ ಮಾರ್ಗ ಗುರುತಿಸಲಾಗಿದ್ದು, ಆವರಣ ಗೋಡೆ ತೆರವು ಮಾಡುವ ಭರವಸೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿ ಸಭೆಯಲ್ಲೂ ಚರ್ಚಿಸಿ ಅನುಮತಿ ಪಡೆದುಕೊಂಡಿದ್ದಾರೆ. ಇದರಿಂದ ಹತ್ತಾರು ವರ್ಷಗಳಿಂದ ಇದ್ದ ಬಹುದೊಡ್ಡ ಸಮಸ್ಯೆ ನೀಗಿದೆ’ ಎಂದು ಅಶೋಕನಗರ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ರಾವ್‌ ಗಣೇಶ್‌ ಜನಾರ್ದನ್‌ ಮಾಹಿತಿ ನೀಡಿದರು.

‘ಈ ರಸ್ತೆಯಲ್ಲಿ 30 ಮಂದಿ ಪೊಲೀಸರು ಕರ್ತವ್ಯ ಮಾಡಬೇಕಾದ ಸ್ಥಿತಿಯಿತ್ತು. ಈಗ ಶಾಲಾ ಮಕ್ಕಳು ಹಾಗೂ ಶಿಕ್ಷಕರೂ ಬೇಗ ಮನೆಗೆ ತೆರಳುತ್ತಿದ್ದಾರೆ. ಪೊಲೀಸರ ಸೂಚಿಸಿದ ಪರಿಹಾರ ಮಾರ್ಗಕ್ಕೆ ಶಾಲೆ ಸಿಬ್ಬಂದಿ ಅನುಷ್ಠಾನಕ್ಕೆ ತಂದಿದ್ದಾರೆ’ ಎಂದು ಇನ್‌ಸ್ಪೆಕ್ಟರ್‌ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT