ಭಾನುವಾರ, ಆಗಸ್ಟ್ 25, 2019
28 °C
ಶಾಲಾ ವ್ಯಾಪ್ತಿ ಧೂಮಪಾನಮುಕ್ತ ಗುರಿ l ಆರೋಗ್ಯ ಇಲಾಖೆ ಕ್ರಮ

ಶಾಲಾ ಮಕ್ಕಳಿಂದ ಗುಲಾಬಿ ಚಳವಳಿ!

Published:
Updated:
Prajavani

ಬೆಂಗಳೂರು: ಶಾಲಾ–ಕಾಲೇಜು ಆವರಣದ ಸುತ್ತ ಮುತ್ತ ತಂಬಾಕು ಉತ್ಪನ್ನ ಮಾರಾಟ ಮಾಡುವುದನ್ನು ಪ್ರತಿಭಟಿಸಲು ಚಿಣ್ಣರು ಗಾಂಧಿವಾದದ ಮೊರೆ ಹೋಗಲಿದ್ದಾರೆ. ಇಂತಹ ಉತ್ಪನ್ನ ಮಾರುವ ಅಂಗಡಿ ಮಾಲೀಕರಿಗೆ ಮಕ್ಕಳು ಗುಲಾಬಿ ಹೂವು ನೀಡಲಿದ್ದಾರೆ. ಅಷ್ಟೇ ಅಲ್ಲ, ತಂಬಾಕಿನ ಕೆಡುಕು ಹಾಗೂ ಕಾನೂನಿನ ಪಾಠವನ್ನೂ ಮಾಡಲಿದ್ದಾರೆ.

ಶಿಕ್ಷಣ ಸಂಸ್ಥೆಗಳ 100 ಗಜಗಳ (300 ಅಡಿ) ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಈ ಕುರಿತ ನಾಮಫಲಕಗಳನ್ನು ವಿದ್ಯಾಸಂಸ್ಥೆಗಳ ಆವರಣದ ಹೊರಗಡೆ ಅಳವಡಿಸುವುದು ಕಡ್ಡಾಯ. ಆದರೂ ಕೆಲವೊಂದು ಶಿಕ್ಷಣ ಸಂಸ್ಥೆಗಳ ಆವರಣದ ಅಂಗಡಿಗಳಲ್ಲಿ ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಮಾರಾಟ ಕದ್ದುಮುಚ್ಚಿ ನಡೆಯುತ್ತಿದೆ. ಇದನ್ನು ತಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶಾಲೆ–ಕಾಲೇಜಿನ ವಿದ್ಯಾರ್ಥಿಗಳ ಮೊರೆ ಹೋಗಲು ಮುಂದಾಗಿದೆ.

ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಂದ ಯಾವೆಲ್ಲ ಅಂಗಡಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಲಿದ್ದಾರೆ. ಬಳಿಕ ಒಂದೇ ದಿನ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿಗದಿತ ಅಂಗಡಿಗೆ ತೆರಳಿ, ಮಾಲೀಕರಿಗೆ ಗುಲಾಬಿ ಹೂವನ್ನು ನೀಡಲಿದ್ದಾರೆ. ಅಷ್ಟೇ ಅಲ್ಲ, ಧೂಮಪಾನದಿಂದ ಏನೆಲ್ಲ ಸಮಸ್ಯೆ ಆಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಿದ್ದಾರೆ. ಇಲಾಖೆಯು ಇದಕ್ಕೆ ‘ಗುಲಾಬಿ ಚಳವಳಿ’ ಎಂದು ನಾಮಕರಣ ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಪ್ರತಿ ಶಾಲೆಗೂ ₹4 ಸಾವಿರ ಅನುದಾನ ನೀಡಲಾಗುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಕೈಜೋಡಿಸಲಿದ್ದಾರೆ. 

ಉಡುಪಿ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಹಾಗೂ ಹಾಸನದಲ್ಲಿ ಪ್ರಾಯೋಗಿಕವಾಗಿ ‘ಗುಲಾಬಿ ಚಳವಳಿ’ ನಡೆಸಲಾಗಿದೆ. ಅದು ಯಶಸ್ವಿಯಾದ ಹಿನ್ನೆಲೆಯಲ್ಲಿ ಉಳಿದ ಜಿಲ್ಲೆಗಳಲ್ಲೂ ನಡೆಸಲು ಇಲಾಖೆ ನಿರ್ಧರಿಸಿದೆ. 

ಭಾವನಾತ್ಮಕ ಅಸ್ತ್ರ: ‘ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆ ಪ್ರಕಾರ, ಮಕ್ಕಳು ಅಧಿಕ ಪ್ರಮಾಣದಲ್ಲಿ ತಂಬಾಕು ಸೇವನೆ
ಆರಂಭಿಸುವುದು 13 ವರ್ಷದಿಂದ 15ವರ್ಷದೊಳಗೆ. ಹೀಗಾಗಿ, ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯಲು ಕಾರ್ಯಪ್ರವೃತ್ತರಾಗಿದ್ದೇವೆ. ಎಲ್ಲೆಲ್ಲಿ ಇದರ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿದೆ ಎಂಬ ಕುರಿತು ಸ್ಥಳೀಯರು ಅಥವಾ ವಿದ್ಯಾರ್ಥಿಗಳಲ್ಲಿ ಮಾಹಿತಿ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಳವಳಿ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಸೆಲ್ವರಾಜನ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಅಧಿಕಾರಿಗಳು ದಾಳಿ ನಡೆಸಿದಾಗ ತಂಬಾಕು ಉತ್ಪನ್ನ ಸಿಗದಿದ್ದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ,
ಮಕ್ಕಳಿಗೆ ಅಂಗಡಿಯವರು ಚಿರಪರಿಚಿತರಾಗಿರುತ್ತಾರೆ. ಮಕ್ಕಳ ಮನವಿ ಭಾವನಾತ್ಮಕವಾಗಿರಲಿದೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡುತ್ತದೆ’ ಎಂದರು.

‘ಮಕ್ಕಳಿಗೆ ಮಾರುವಂತಿಲ್ಲ ತಂಬಾಕು’

‘ಕೋಟ್ಪಾ ಕಾಯ್ದೆಯ ಸೆಕ್ಷನ್ 6ಎ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವುದು ಅಪರಾಧ. ಶಾಲಾ ಆವರಣದ ವಿವಿಧ ಕಚೇರಿಗಳ ಬಳಿ ತಂಬಾಕು ನಿಷೇಧ ಹಾಗೂ ಜಾಗೃತಿ ಫಲಕ ಹಾಕಬೇಕು. ಕಾನೂನು ನಿಯಮ ಮೀರಿ ಮಾರಾಟ ಮಾಡಿದ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರ ನೆರವು ಪಡೆಯಬೇಕು. ಹೊಗೆರಹಿತ ತಂಬಾಕಿನಲ್ಲಿ 3,095 ರಾಸಾಯನಿಕಗಳು ಇರುತ್ತವೆ. ಸಿಗರೇಟ್‌ನಲ್ಲಿ 7,000 ರಾಸಾಯನಿಕಗಳು ಇರುತ್ತವೆ’ ಎಂದು
ಡಾ.ಸೆಲ್ವರಾಜನ್ ತಿಳಿಸಿದರು.

100 ಗಜ

ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಮಾರಾಟ ನಿಷೇಧ

₹200

ಸೂಚನಾ ಫಲಕ ಹಾಕದಿದ್ದರೆ ವಿಧಿಸುವ ದಂಡ

₹1,000

ಪ್ರಥಮ ಬಾರಿ ತಪ್ಪೆಸಗುವ ಚಿಲ್ಲರೆ ವ್ಯಾಪಾರಿಗಳಿಗೆ ವಿಧಿಸುವ ದಂಡ

Post Comments (+)