ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಲು ಆಗ್ರಹ

7

ದೌರ್ಜನ್ಯ ತಡೆ ಕಾಯ್ದೆ ಬಲಪಡಿಸಲು ಆಗ್ರಹ

Published:
Updated:
Deccan Herald

ಬೆಂಗಳೂರು: ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಬಲಪಡಿಸುವುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಕಾರ್ಯಕರ್ತರು ಸೋಮವಾರ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ‍್ಯಾಲಿ ನಡೆಸಿದರು.

‘ದಲಿತ ದೌರ್ಜನ್ಯ ನಿಯಂತ್ರಣ ಕಾಯ್ದೆಯ ತಿದ್ದುಪಡಿ ಮಸೂದೆ ಆದಷ್ಟು ಬೇಗ ಸಂಸತ್ತಿನಲ್ಲಿ ಅಂಗೀಕಾರ ಆಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ದಲಿತರ ಕೊಲೆ, ಸುಲಿಗೆ ಹಾಗೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಆದರೆ, ಅಪರಾಧ ಎಸಗಿರುವವರಿಗೆ ಶಿಕ್ಷೆ ಆಗುತ್ತಿಲ್ಲ. ಇದರಿಂದ ದಲಿತರಿಗೆ ಅಭದ್ರತೆ ಕಾಡುತ್ತಿದೆ’ ಎಂದು ಹೇಳಿದರು.

ಸಮಿತಿ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ದಲಿತ ವರ್ಗಗಳನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡದವರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಕಾಯ್ದಿರಿಸಬೇಕು’ ಎಂದು ಒತ್ತಾಯಿಸಿದರು.

‘ಸಮುದಾಯದ ಜನರಿಗೆ ನಿವೇಶನಗಳಿಲ್ಲ. ಭೂ ಸುಧಾರಣೆ ಕಾಯ್ದೆ ಪ್ರಕಾರ ಭೂಮಿ ಮಂಜೂರು ಮಾಡಬೇಕು. ಗುತ್ತಿಗೆ ಪೌರ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಬೇಕು. ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು. ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !