ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಲ್‌ಡೌನ್; ನಿಂತಿಲ್ಲ ಜನರ ಓಡಾಟ

ಅಗತ್ಯ ವಸ್ತುಗಳಿಗಾಗಿ ಹೊರಬರುತ್ತಿರುವ ಜನ l ಅನಗತ್ಯವಾಗಿ ಸಂಚರಿಸುತ್ತಿರುವ ಯುವಕರು
Last Updated 12 ಏಪ್ರಿಲ್ 2020, 20:48 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಾಣು ಹರಡುವಿಕೆ ತಡೆಯುವ ಉದ್ದೇಶದಿಂದ ನಗರದ ಪಾದರಾಯನಪುರ ಹಾಗೂ ಬಾಪೂಜಿ ನಗರ ವಾರ್ಡ್‌ಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಲಾಗಿದೆ. ಇಷ್ಟಾದರೂ ವಾರ್ಡ್‌ಗಳಲ್ಲಿ ಜನರ ಓಡಾಟ ಮಾತ್ರ ನಿಂತಿಲ್ಲ.

ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಎರಡೂ ವಾರ್ಡ್‌ಗಳಲ್ಲಿ ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಹಾಗೂ ಬಡ ಜನರೇ ಹೆಚ್ಚಾಗಿ ವಾಸವಿದ್ದಾರೆ. ದಿನದ ದುಡಿಮೆ ನಂಬಿಯೇ ಇವರೆಲ್ಲ ಊಟ ಮಾಡುತ್ತಿದ್ದಾರೆ. ಒಂದೇ ಕೊಠಡಿ ಇರುವ ಮನೆಯಲ್ಲಿ ಇವರೆಲ್ಲ ಬದುಕು ಕಟ್ಟಿಕೊಂಡಿದ್ದಾರೆ.

ಇಂಥ ಸ್ಥಿತಿಯಲ್ಲೇ ಬಿಬಿಎಂಪಿ ಅಧಿಕಾರಿಗಳು ದಿಢೀರ್ ಸೀಲ್‌ಡೌನ್ ಆದೇಶ ಹೊರಡಿಸಿ, ವಾರ್ಡ್‌ಗಳ ಎಲ್ಲ ರಸ್ತೆಗಳನ್ನು ತಗಡು ಬಡಿದು ಬಂದ್‌ ಮಾಡಿಸಿದ್ದಾರೆ. ಸೀಲ್‌ಡೌನ್‌ ನಡುವೆಯೇ ಅಗತ್ಯ ವಸ್ತುಗಳನ್ನು ಖರೀದಿಸಲು ನಿವಾಸಿಗಳು ಮನೆಯಿಂದ ಹೊರಗೆ ಬರುತ್ತಿದ್ದಾರೆ.

ಭಾನುವಾರ ಬೆಳಿಗ್ಗೆ ಹಲವು ಕಡೆಗಳಲ್ಲಿ ರಸ್ತೆ ಬದಿಯಲ್ಲೇ ಅಂಗಡಿಗಳನ್ನು ತೆರೆಯಲಾಗಿತ್ತು. ಕಾಯಂ ಅಂಗಡಿಗಳಲ್ಲೂ ವ್ಯಾಪಾರ ವಹಿವಾಟು ಇತ್ತು. ಕೆಲ ಯುವಕರು ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣು ಮಾರಾಟ ಮಾಡಿದರು. ಮನೆಯಿಂದ ಹೊರಬಂದ ಜನ, ಅಂಗಡಿಗಳಿಗೆ ಬಂದು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಂಡು ಹೋದರು.

ರಸ್ತೆಯಲ್ಲಿ ಓಡಾಡುತ್ತಿದ್ದವರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಚೀಲಗಳು ಇದ್ದಿದ್ದು ಕಂಡುಬಂತು.ವಾರ್ಡ್‌ಗಳಲ್ಲಿ ಗಸ್ತು ತಿರುಗುವ ಪೊಲೀಸರು, ಜನರನ್ನು ತಡೆದು ಪ್ರಶ್ನಿಸಿದರು. ವಾಪಸು ಮನೆಗೆ ಹೋಗುವಂತೆ ಹೇಳಿದರು.

ಪಾದರಾಯಯನಪುರದ ಮಹಿಳೆಯೊಬ್ಬರು, ‘ಸರ್. ಹಾಲು ಇಲ್ಲ. ಬಿಬಿಎಂಪಿಯವರು ಮನೆಗೂ ತಂದುಕೊಟ್ಟಿಲ್ಲ. ಮಗು ಅಳುತ್ತಿದೆ. ಹೀಗಾಗಿ, ಹಾಲು ತರಲು ಹೊರಗೆ ಬಂದಿದ್ದೇನೆ’ ಎಂದು ಪೊಲೀಸರಿಗೆ ಉತ್ತರಿಸಿದರು. ಅದನ್ನು ಕೇಳಿ ಮೌನವಾದ ಪೊಲೀಸರು, ಮುಂದಕ್ಕೆ ಕಳುಹಿಸಿದರು.

ಬಾಪೂಜಿನಗರದ ಮಹಿಳೆಯೊಬ್ಬರನ್ನು ಕೇಳಿದಾಗ, ‘ಸೀಲ್‌ಡೌನ್‌ ಇದೆ ಎಂಬುದು ನಮಗೂ ಗೊತ್ತು. ನಿನ್ನೆಯಿಂದ ಮನೆಯಲ್ಲಿ ದಿನಸಿ ಇಲ್ಲ. ನಾವು ಉಪವಾಸವಿದ್ದರೂ ಪರವಾಗಿಲ್ಲ. ಮಕ್ಕಳು ಉಪವಾಸ ಇರಬಾರದು’ ಎಂದರು.ಇದೇ ರೀತಿಯಲ್ಲೇ ಬಹುತೇಕ ಮಹಿಳೆಯರು, ಮನೆಗೆ ಬೇಕಾದ ವಸ್ತುಗಳನ್ನು ತರಲು ಮನೆಯಿಂದ ಹೊರಗೆ ಬಂದಿದ್ದರು.

ಮಾಸ್ಕ್ ಇಲ್ಲ, ಸಾಮಾಜಿಕ ಅಂತರವೂ ಮಾಯ

ರಸ್ತೆಯಲ್ಲಿ ಓಡಾಡುತ್ತಿದ್ದ ಕೆಲವರಷ್ಟೇ ಮಾಸ್ಕ್‌ ಹಾಕಿಕೊಂಡಿದ್ದರು. ಬಹುತೇಕರು ಮಾಸ್ಕ್‌ ಇಲ್ಲದೇ ಮನೆಯಿಂದ ಹೊರಗೆ ಬಂದಿದ್ದರು.

ಅಂಗಡಿ, ರಸ್ತೆ ಬದಿಯಲ್ಲಿ ಯಾರೊಬ್ಬರು ಸಾಮಾಜಿಕ ಅಂತರ ಪಾಲನೆ ಮಾಡಲಿಲ್ಲ. ಹಲವರು ಗುಂಪಿನಲ್ಲಿ ನಿಂತು ಮಾತನಾಡುತ್ತಿದ್ದರು.

‘ಮಾಸ್ಕ್ ಏಕೆ ಹಾಕಿಕೊಂಡಿಲ್ಲ‘ ಎಂದು ಕೇಳಿದಾಗ ನಿವಾಸಿಯೊಬ್ಬರು, ‘ನಮಗೆ ಯಾರೂ ಕೊಟ್ಟಿಲ್ಲ. ಎಲ್ಲಿಯೂ ಸಿಗುತ್ತಿಲ್ಲ. ಮನೆ ಮುಂದಿನ ರಸ್ತೆಯಲ್ಲಿ ಓಡಾಡಲು ಮಾಸ್ಕ್ ಏಕೆ ಬೇಕು’ ಎಂದು ಪ್ರಶ್ನಿಸಿದರು.

ಕೆಲ ಪೋಷಕರು ಮಕ್ಕಳನ್ನು ರಸ್ತೆಗೆ ಕರೆತಂದು ಸೈಕಲ್‌ ಮೇಲೆ ಆಟವಾಡಿಸಿದರು. ಕೆಲ ಯುವಕರಂತೂ ದ್ವಿಚಕ್ರವಾಹನದಲ್ಲಿ ಅನಗತ್ಯವಾಗಿ ಓಡಾಡಿದರು.

ಬಿಬಿಎಂಪಿಯಿಂದ ಅಂಗಡಿಗಳ ವ್ಯವಸ್ಥೆ

ಎರಡೂ ವಾರ್ಡ್‌ನ ಕೆಲ ನಿಗದಿತ ಸ್ಥಳಗಳಲ್ಲಿ ಬಿಬಿಎಂಪಿಯಿಂದಲೇ ಅಂಗಡಿಗಳನ್ನು ತೆರೆಯಲಾಗಿದೆ. ಒಂದು ಮನೆಯಿಂದ ಒಬ್ಬೊಬ್ಬರೇ ಬಂದು ದಿನಸಿ, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸುವಂತೆ ನಿಯಮ ರೂಪಿಸಲಾಗಿದೆ. ಆದರೆ, ಬಹುತೇಕರು ಗುಂಪು ಕಟ್ಟಿಕೊಂಡು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ. ಸಾಮಾಜಿಕ ಅಂತರವನ್ನೇ ಪಾಲಿಸುತ್ತಿಲ್ಲ.

ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಹಾಗೂ ಸ್ವಯಂಸೇವಕರು ಕೈಯಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಿದ್ದಾರೆ. ಅವರಿಗೂ ಜನ ಬಗ್ಗುತ್ತಿಲ್ಲ. ವಾಹನ ತಡೆದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT