ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡ್ಡಾಯ ಸೇವೆಯಲ್ಲೂ ‘ಸೀಟ್‌ ಬ್ಲಾಕಿಂಗ್‌’- ನೇಮಕಾತಿಗೆ ಅರ್ಜಿ ಸಲ್ಲಿಸಿದವರ ಆರೋಪ

Last Updated 27 ಅಕ್ಟೋಬರ್ 2021, 16:17 IST
ಅಕ್ಷರ ಗಾತ್ರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸೂಪರ್‌ ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ ಪದವಿ ಪಡೆದಿರುವ ತಜ್ಞ ವೈದ್ಯರನ್ನು ಒಂದು ವರ್ಷದ ಕಡ್ಡಾಯ ಸರ್ಕಾರಿ ಸೇವೆಗೆ ನಿಯುಕ್ತಿಗೊಳಿಸುವ ಪ್ರಕ್ರಿಯೆಯಲ್ಲಿ ‘ಸೀಟ್‌ ಬ್ಲಾಕಿಂಗ್‌’ ಪ್ರಯತ್ನ ನಡೆದಿದೆ ಎಂದು ನೇಮಕಾತಿಗೆ ಅರ್ಜಿ ಸಲ್ಲಿಸಿರುವ ವೈದ್ಯರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 2,500ಕ್ಕೂ ಹೆಚ್ಚು ಮಂದಿ ಪ್ರಸಕ್ತ ವರ್ಷ ಕೋರ್ಸ್‌ ಪೂರ್ಣಗೊಳಿಸಿದ್ದಾರೆ. ಅವರಲ್ಲಿ 1,600 ಜನರು ಕಡ್ಡಾಯ ಸೇವೆಗೆ ನೋಂದಣಿ ಮಾಡಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ತಮ್ಮ ಸ್ಥಳ ಆಯ್ಕೆಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಮುಖ ನಗರಗಳು ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಮುಚ್ಚಿಡಲಾಗಿತ್ತು ಎಂದು ದೂರಿದ್ದಾರೆ.

‘ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಜನರಲ್‌ ಮೆಡಿಸಿನ್‌ ವಿಭಾಗದಲ್ಲಿ 19 ಖಾಲಿ ಹುದ್ದೆಗಳಿವೆ ಎಂದು ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಆದರೆ, ಸ್ಥಳ ಆಯ್ಕೆಗೆ ಲಾಗಿನ್‌ ಆದಾಗ ಒಂದೇ ಹುದ್ದೆ ತೋರಿಸಲಾಗುತ್ತಿತ್ತು. ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಖಾಲಿ ಹುದ್ದೆಗಳಿದ್ದರೂ, ಒಂದನ್ನೇ ತೋರಿಸಲಾಗುತ್ತಿತ್ತು’ ಎಂದು ವೈದ್ಯರೊಬ್ಬರು ದಾಖಲೆ ಸಮೇತ ಆರೋಪಿಸಿದರು.

ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಬಚ್ಚಿಡಲಾಗಿತ್ತು. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಬಳಿಕ ಮಂಗಳವಾರ ಸಂಜೆ ಪುನಃ ಖಾಲಿ ಇರುವ ಎಲ್ಲ ಹುದ್ದೆಗಳ ಮಾಹಿತಿಯನ್ನು ಆಯ್ಕೆಗೆ ನೀಡಲಾಯಿತು. ಆಯ್ದ ಹುದ್ದೆಗಳನ್ನು ತಮಗೆ ಬೇಕಾದವರಿಗೆ ನೀಡಲು ‘ಬ್ಲಾಕಿಂಗ್‌’ ಮಾಡಲಾಗಿತ್ತು ಎಂದು ದೂರಿದರು.

ಸೌಲಭ್ಯ ಇಲ್ಲದಿದ್ದರೂ ಹುದ್ದೆ: ಆರಂಭದಲ್ಲಿ 1,300 ಹುದ್ದೆಗಳು ಮಾತ್ರ ಖಾಲಿ ಇವೆ ಎಂದು ಪ್ರಕಟಿಸಲಾಗಿತ್ತು. ಪ್ರಸಕ್ತ ವರ್ಷ ಕೋರ್ಸ್‌ ಪೂರ್ಣಗೊಳಿಸಿದವರ ಸಂಖ್ಯೆ ಜಾಸ್ತಿ ಇತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಬಳಿಕ ಖಾಲಿ ಹುದ್ದೆಗಳ ಪಟ್ಟಿ ಪರಿಷ್ಕರಿಸಿರುವ ಆರೋಗ್ಯ ಇಲಾಖೆ, 1,915 ಹುದ್ದೆಗಳಿವೆ ಎಂದು ತಿಳಿಸಿದೆ.

‘ತಾಲ್ಲೂಕು ಆಸ್ಪತ್ರೆಯೇ ಇಲ್ಲದ ಹೊಸ ತಾಲ್ಲೂಕು ಕೇಂದ್ರಗಳಲ್ಲಿ ಹೊಸ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಶಸ್ತ್ರಚಿಕಿತ್ಸಾ ಘಟಕವೇ ಇಲ್ಲದ ಆಸ್ಪತ್ರೆಗಳಲ್ಲಿ ಅರಿವಳಿಕೆ ತಜ್ಞರ ಹುದ್ದೆ ತೋರಿಸಲಾಗಿದೆ. ಸ್ತ್ರೀರೋಗ ಚಿಕಿತ್ಸಾ ಸೌಲಭ್ಯ ಇಲ್ಲದ ಸಣ್ಣ ಆಸ್ಪತ್ರೆಗಳಲ್ಲೂ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಹುದ್ದೆ ತೋರಿಸಲಾಗಿದೆ’ ಎಂದು ಮತ್ತೊಬ್ಬ ವೈದ್ಯ ಆಕ್ಷೇಪಿಸಿದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 1,855 ಮಂದಿ ಸ್ನಾತಕೋತ್ತರ ವೈದ್ಯಕೀಯ ಪದವಿ ಕೋರ್ಸ್‌ ಮುಗಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಒದಗಿಸಿದೆ. ಆದರೆ, 1775 ಮಂದಿ ಕೋರ್ಸ್‌ ಮುಗಿಸಿದ್ದಾರೆ ಎಂಬುದಾಗಿ ಹೈಕೋರ್ಟ್‌ಗೆ ಇತ್ತೀಚೆಗೆ ತಿಳಿಸಿದೆ. ಇದು ಈ ಪ್ರಕ್ರಿಯೆಯಲ್ಲಿನ ಗೊಂದಲಕ್ಕೆ ಸಾಕ್ಷಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT