ಶನಿವಾರ, ಡಿಸೆಂಬರ್ 5, 2020
19 °C
ಕೆರೆಯ ವಿನ್ಯಾಸವೇ ಅವೈಜ್ಞಾನಿಕ– ಕೆ.ಆರ್. ಪುರ ನಿವಾಸಿಗಳ ಆರೋಪ

ಕೊಳಚೆ ನೀರು: ಸೀಗೇಹಳ್ಳಿ ಕೆರೆ ಕಲುಷಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆ.ಆರ್. ಪುರದಲ್ಲಿನ ಭಟ್ರಹಳ್ಳಿ ಸಮೀಪದ ಸೀಗೇಹಳ್ಳಿ ಕೆರೆ ದಿನದಿಂದ ದಿನಕ್ಕೆ ಹೆಚ್ಚು ಮಲಿನಗೊಳ್ಳುತ್ತಿದೆ. ಶುದ್ಧವಾಗಿದ್ದ ಕೆರೆ ನೀರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಲುಷಿತಗೊಳ್ಳುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಸುಮಾರು 30 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಕೆರೆ ಮೊದಲು ಚೆನ್ನಾಗಿಯೇ ಇತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಿಬಿಎಂಪಿಯು ಇದನ್ನು ಅಭಿವೃದ್ಧಿ ಪಡಿಸಿದೆ. ಆದರೆ, ಮಳೆ ನೀರು ಮತ್ತು ಕೊಳಚೆ ನೀರು ಹರಿಯಲು ಪ್ರತ್ಯೇಕ ಮಾರ್ಗವಿಲ್ಲದೆ ಎರಡೂ ನೀರು ಕೆರೆಗೆ ಸೇರಿ ಮಲಿನವಾಗುತ್ತಿದೆ. ಕೊಳಚೆ ನೀರಿನ ದುರ್ವಾಸನೆ ಸಹಿಸಲು ಆಗುವುದಿಲ್ಲ’ ಎಂದು ಕೆ.ಆರ್. ಪುರ ನಿವಾಸಿ, ನೀರಿನ ಹಕ್ಕಿಗಾಗಿನ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎಂ. ಈಶ್ವರಪ್ಪ ದೂರಿದರು. 

‘ಕೆರೆಗೆ ತ್ಯಾಜ್ಯ ಸೇರದಿರಲು ಕಲ್ಲಿನ ತಡೆಗೋಡೆ ರೀತಿ ನಿರ್ಮಿಸಲಾಗಿದೆ. ಬೇಲಿಯನ್ನೂ ಹಾಕಲಾಗಿದೆ. ಆದರೆ, ಮಳೆ ನೀರು ಮತ್ತು ಕೊಳಚೆ ನೀರು ಒಂದೇ ಕಡೆಗೆ ಸೇರುವಂತೆ ಮಾಡಲಾಗಿದೆ. ಮಳೆ ಬಂದಾಗ ಅಥವಾ ಕೊಳಚೆ ನೀರಿನ ಹರಿವು ಜಾಸ್ತಿಯಾದಾಗ, ತಡೆಗೋಡೆ ದಾಟಿ ಕೆರೆ ಸೇರುತ್ತಿದೆ. ಕೆರೆಯ ವಿನ್ಯಾಸವನ್ನೇ ಬದಲಾಯಿಸುವ ಅಗತ್ಯವಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಳೆ ಮತ್ತು ಕೊಳಚೆ ನೀರು ಬಂದು ಸೇರುವ ಕೊಳವೆಗಳನ್ನು ಒಂದೇ ಕಡೆ ಜೋಡಿಸಿದ್ದಾರೆ. ಆ ಕೊಳವೆಗಳಲ್ಲಿ ಕಸ, ಹೂಳು ತುಂಬಿಕೊಳ್ಳುವುದರಿಂದ ನೀರು ಮೇಲೆಯೇ ಹರಿಯುತ್ತದೆ. ಪೈಪ್‌ಗಳನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸುವ ಕೆಲಸವೂ ಆಗುತ್ತಿಲ್ಲ’ ಎಂದು ಅವರು ತಿಳಿಸಿದರು.

‘ಕೆರೆಯ ಸ್ಥಿತಿ ಏಕೆ ಹೀಗಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರೆ, ಇದಕ್ಕೆ ಜನರೇ ಕಾರಣ ಎನ್ನುತ್ತಾರೆ. ಪ್ಲಾಸ್ಟಿಕ್, ಕಸವನ್ನು ಕೆರೆಗೆ ಹಾಕುವುದರಿಂದ ಈ ಸಮಸ್ಯೆಯಾಗುತ್ತಿದೆ ಎಂದು ಹೇಳುತ್ತಾರೆ. ಆದರೆ, ಅಧಿಕಾರಿಗಳೇ ಕೆರೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

‘ಕೇವಲ ನಾಲ್ಕೈದು ದಿನಗಳಲ್ಲಿ ಕೆರೆ ಇಂತಹ ದುಸ್ಥಿತಿಗೆ ತಲುಪಿದೆ. ಅಧಿಕಾರಿಗಳು ಚಿಕ್ಕಪುಟ್ಟ ದುರಸ್ತಿ ಕಾರ್ಯ ಮಾಡಿ ಕೈತೊಳೆದುಕೊಳ್ಳುವುದು ಬಿಟ್ಟು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು’ ಎಂದು ಸ್ಥಳೀಯರು ಒತ್ತಾಯಿಸಿದರು.

ವಿನ್ಯಾಸ ಬದಲಿಸಲು ಕ್ರಮ

‘ಕೊಳಚೆ ನೀರು ಬೇರೆ ಕಡೆಗೆ ಹರಿಯುವಂತೆ ವಿನ್ಯಾಸ ಬದಲಿಸಲಾಗುವುದು. ಮುಂದಿನ ವಾರದಿಂದಲೇ ಈ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌ ರವಿ ಹೇಳಿದರು.

‘ಹೂಳು, ಕಸ ಕೆರೆ ಸೇರದಂತೆ ತಡೆಗೋಡೆ ಮತ್ತು ಬೇಲಿ ಹಾಕಲಾಗಿತ್ತು. ಬೇಲಿಯನ್ನು ಸ್ಥಳೀಯರೇ ಕಿತ್ತು ಹಾಕಿದ್ದಾರೆ. ಮುಂದೆ ವಿನ್ಯಾಸವನ್ನೇ ಬದಲಿಸುವುದರ ಜೊತೆಗೆ, ಕೆರೆಯ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು