ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟ್ಯೂಬ್ ನೋಡಿ ಮಗನಿಗೆ ಆಪರೇಷನ್ ಮಾಡ್ತೀವಿ ಅಂದ್ರು ದಂಪತಿ, ದಂಗುಬಡಿದ ವೈದ್ಯರು

Last Updated 24 ಡಿಸೆಂಬರ್ 2018, 6:11 IST
ಅಕ್ಷರ ಗಾತ್ರ

ಬೆಂಗಳೂರು: ಮಗನೊಂದಿಗೆ ಆಸ್ಪತ್ರೆಗೆ ಬಂದಿದ್ದದಂಪತಿ ‘ನಿಮ್ಮ ಆಪರೇಷನ್ ಥಿಯೇಟರ್ ಬಳಸಲು ಅವಕಾಶ ಕೊಡಿ. ಮಗನಿಗೆ ನಾವೇ ಆಪರೇಷನ್ ಮಾಡಿಕೊಳ್ತೀವಿ. ಒಬ್ಬರು ನರ್ಸ್ ಇದ್ರೆ ಸಾಕು. ಯುಟ್ಯೂಬ್ ನೋಡಿ ಎಲ್ಲ ಕಲಿತುಕೊಂಡಿದ್ದೇವೆ’ ಎಂದು ಒತ್ತಾಯಿಸಿದಾಗ ಡ್ಯೂಟಿ ಮೇಲಿದ್ದ ವೈದ್ಯರಿಗೆ ಏನು ಹೇಳಬೇಕೋ ತೋಚಲಿಲ್ಲ.

‘ಅವನಿಗೆ ಮೊದಲೂ ಹೀಗೆಯೇ ಆಗಿತ್ತು. ನಾವು ಆಪರೇಷನ್ ಮಾಡಿದ್ದೆವು. ನಮಗೆ ಎಲ್ಲವೂ ಗೊತ್ತು’ ಎಂದೆಲ್ಲಾ ಆ ದಂಪತಿ ಬಡಬಡಿಸಲು ಶುರು ಮಾಡಿದಾಗ ಡಾಕ್ಟರ್‌ಗೆ ದಂಗು ಬಡಿದಂತೆ ಆಗಿತ್ತು. ‘ಇಲ್ಲ, ನಮ್ಮ ಆಸ್ಪತ್ರೆಯಲ್ಲಿ ಇಂಥದ್ದಕ್ಕೆಲ್ಲಾ ಅವಕಾಶ ಕೊಡುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ ಮೇಲೆ ಅವರು ಮಗನಿಗೆ ಚಿಕಿತ್ಸೆಯನ್ನೂ ಕೊಡಿಸದೆ ‘ನೀವಲ್ಲದಿದ್ರೆ ಇನ್ನೊಬ್ರು’ ಎನ್ನುತ್ತಾ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು.

ದಂಪತಿಯ ಮಾತು ಕೇಳಿ ದಂಗುಬಡಿದ ವೈದ್ಯರಅನುಭವದ ಜೊತೆಗೆ ಅವರ ಆತಂಕವನ್ನೂ ‘ದಿ ನ್ಯೂಸ್ ಮಿನಟ್’ ಜಾಲತಾಣದಲ್ಲಿ ಡಾ.ನಿಮೆಶಿಕಾ ಜಯಚಂದ್ರನ್ ದಾಖಲಿಸಿದ್ದಾರೆ. ವೈದ್ಯರ ಕೋರಿಕೆ ಮೇರೆಗೆಮಗು ಎದುರಿಸುತ್ತಿದ್ದ ಆರೋಗ್ಯಸಮಸ್ಯೆಮತ್ತು ವೈದ್ಯರ ಹೆಸರನ್ನು ನಿಮೆಶಿಕಾ ತಮ್ಮ ಬರಹದಲ್ಲಿ ಉಲ್ಲೇಖಿಸಿಲ್ಲ.

‘ಆ ಮಗುವಿಗೆ ಚಿಕಿತ್ಸೆ ಬೇಕಿತ್ತು, ಅದನ್ನು ಒದಗಿಸಲು ನಾವು ಸಿದ್ಧರೂ ಆಗಿದ್ದೆವು. ಆದರೆ ಹೆತ್ತವರು ನಾವೇ ಆಪರೇಷನ್ ಮಾಡುತ್ತೇವೆ ಎಂದುಹಟ ಹಿಡಿದ ಕಾರಣ ಏನೂ ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಸಲಹೆಗೆ ವಿರುದ್ಧವಾಗಿ ಮಗುವನ್ನು ಆಸ್ಪತ್ರೆಯಿಂದ ಹೊರಗೆ ಕರೆದೊಯ್ದರು’ ಎಂದು ಆ ವೈದ್ಯರು ಹೇಳಿಕೊಂಡಿದ್ದಾರೆ.

ಬೆಂಗಳೂರಿನ ಈ ಪ್ರಕರಣವು ದೇಶದ ವೈದ್ಯಕೀಯ ವ್ಯವಸ್ಥೆ ಎದುರಿಸುತ್ತಿರುವ ಮತ್ತೊಂದು ಆತಂಕವನ್ನು ಬಿಚ್ಚಿಟ್ಟಿದೆ. ತಮ್ಮ ರೋಗ ಲಕ್ಷಣಗಳನ್ನು ವೈದ್ಯರ ಬಳಿ ಪರೀಕ್ಷಿಸಿಕೊಳ್ಳುವ ಮೊದಲೇ ಜನರು ಗೂಗಲ್‌ ಮೊರೆ ಹೋಗುತ್ತಿದ್ದಾರೆ. ಯುಟ್ಯೂಬ್ ವಿಡಿಯೊಗಳ ಮೂಲಕ ಚಿಕಿತ್ಸಾ ವಿಧಾನ ಅರಿತುಕೊಂಡು ಸ್ವಯಂಚಿಕಿತ್ಸೆಗೆ ಮುಂದಾಗುತ್ತಿದ್ದಾರೆ. ‘ಇಂಥ ದುಸ್ಸಾಹಸ ಬೇಡ, ಇವುಪ್ರಾಣಾಂತಿಕವೂ ಆಗಬಲ್ಲವು’ ಎನ್ನುವ ವೈದ್ಯರ ಸಲಹೆ ಹೊಸ ತಲೆಮಾರಿನ ರೋಗಿಗಳಿಗೆ ಅಪಥ್ಯ.

ಗಂಡನ ದುಸ್ಸಾಹಸಕ್ಕೆ ಜೀವತೆತ್ತ ಕೃತ್ತಿಕಾ (ಚಿತ್ರಕೃಪೆ: ದಿ ನ್ಯೂಸ್ ಮಿನಟ್)
ಗಂಡನ ದುಸ್ಸಾಹಸಕ್ಕೆ ಜೀವತೆತ್ತ ಕೃತ್ತಿಕಾ (ಚಿತ್ರಕೃಪೆ: ದಿ ನ್ಯೂಸ್ ಮಿನಟ್)

ದುಸ್ಸಾಹಸಕ್ಕೆ ಜೀವತೆತ್ತ ತಾಯಿ

ತಮಿಳುನಾಡಿನ ತಿರುಪ್ಪುರ್ ಪಟ್ಟಣದಲ್ಲಿ ‘How to help pregnant woman’ಯುಟ್ಯೂಬ್ ವಿಡಿಯೊಗಳನ್ನು ನೋಡಿದ್ದ ರಾಜೇಂದ್ರನ್ ತನ್ನ ಗರ್ಭಿಣಿ ಪತ್ನಿ ಕೃತಿಕ್ಕಾಗೆ ಸ್ವತಃ ಹೆರಿಗೆ ಮಾಡಿಸುವ ಸಾಹಸಕ್ಕೆ ಮುಂದಾದರು. ಈಗಾಗಲೇ ಮೂರು ವರ್ಷದ ಹೆಣ್ಣುಮಗುವಿದ್ದ ಈ ದಂಪತಿಗೆ ‘ಎರಡನೇ ಹೆರಿಗೆಮನೆಯಲ್ಲಿಯೇ ಆಗಲಿ. ನಿಸರ್ಗ ಚಿಕಿತ್ಸೆ ಶ್ರೇಷ್ಠ ಚಿಕಿತ್ಸೆ’ ಎಂದು ಗೆಳೆಯರಾದ ಪ್ರವೀಣ್ ಮತ್ತು ಲಾವಣ್ಯಾ ಮನವೊಲಿಸಿದ್ದರು.

ಜುಲೈ 22ರ ರಾತ್ರಿ 2 ಗಂಟೆಗೆ ಕೃತ್ತಿಕಾಗೆ ಹೆರಿಗೆ ನೋವು ಶುರುವಾಯಿತು. ಆದರೆ ಮಗು ಜನಿಸಿದ ನಂತರ ಜರಾಯು (ಪ್ಲಾಸೆಂಟಾ) ಬೀಳಲಿಲ್ಲ,ರಕ್ತಸ್ರಾವವೂ ನಿಲ್ಲಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದೆ ಎನಿಸಿದಾಗ ಕೃತ್ತಿಕಾರನ್ನು ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಆದರೆ ಅಷ್ಟರಲ್ಲಿ ಅವರ ಜೀವ ಹೋಗಿತ್ತು. ‘ಕೃತ್ತಿಕಾ ಸಾವಿಗೆ ತೀವ್ರ ರಕ್ತಸ್ರಾವವೇ ಕಾರಣ’ ಎಂದು ‘ದಿ ಹಿಂದೂ’ ವರದಿ ಮಾಡಿತ್ತು.

ನಂತರದ ಬೆಳವಣಿಗೆಗಳಲ್ಲಿ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರವೂ ಆಸ್ಪತ್ರೆಗೆ ಕರೆದೊಯ್ಯದ,ಮನೆಯಲ್ಲಿಯೇ ಹೆರಿಗೆ ಮಾಡಿಸುವ ದುಸ್ಸಾಹಸದಿಂದ ಆಕೆಯ ಸಾವಿಗೆ ಕಾರಣನಾದ ಪತಿಯನ್ನು ಪೊಲೀಸರು ಬಂಧಿಸಿದರು. ಕೃತ್ತಿಕಾ ಹೆತ್ತ ಗಂಡು ಮಗು ಮಾತ್ರ ಅರೋಗ್ಯವಾಗಿದೆ. ಆದರೆ ಅಮ್ಮನಿಲ್ಲದೆ ಅನಾಥವಾಗಿದೆ ಎಂದು ‘ದಿ ನ್ಯೂಸ್ ಮಿನಟ್’ವರದಿ ಮಾಡಿತ್ತು.

ಗೂಗಲ್‌ನ ಟಾಪ್ 5 ಸರ್ಚ್‌
ಗೂಗಲ್‌ನ ಟಾಪ್ 5 ಸರ್ಚ್‌

ಗೂಗಲ್ ಎಷ್ಟುಬೇಕೋಅಷ್ಟು ಸಾಕು

ನಗರದ ಕೆಲ ಖ್ಯಾತ ಸರ್ಜನ್‌ಗಳು ತಮ್ಮ ರೋಗಿಗಳುಗೂಗಲ್ ನೋಡಿ ವಿಷಯ ತಿಳಿದುಕೊಳ್ಳುವುದನ್ನು ಉತ್ತೇಜಿಸುತ್ತಾರೆ. ನಗರದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳನ್ನು ಪರಿಶೀಲಿಸುವ ಖ್ಯಾತ ವಾಸ್ಕುಲಾರ್ ಸರ್ಜನ್ ಒಬ್ಬರು, ‘ವಿಟಮಿನ್ ಕೆ ಕಡಿಮೆ ಇರುವ ಪದಾರ್ಥಗಳನ್ನು ನೀವು ಸೇವಿಸಬೇಕು. ಅಂಥ ಪದಾರ್ಥಗಳು ಯಾವುದು ಎಂದು ಗೂಗಲ್ ನೋಡಿ ತಿಳಿದುಕೊಳ್ಳಿ’ ಎಂದು ಸಲಹೆ ಮಾಡುತ್ತಾರೆ. ದಾವಣಗೆರೆಯ ಸರ್ಜನ್ ಒಬ್ಬರು ‘ಅಸಿಟ್ರಾಂ ಡಯೆಟ್ ಅಂತ ಗೂಗಲ್‌ನಲ್ಲಿ ಹುಡುಕಿ’ ಎಂದು ಸಲಹೆ ಮಾಡುವುದು ಸಾಮಾನ್ಯ.

‘ಹೊಸ ತಲೆಮಾರಿಗೆ ಗೂಗಲ್ ನೋಡುವ ಹುಚ್ಚು. ನಾವು ಏನು ಹೇಳಿದರೂ ಅದನ್ನು ಅವರು ಕ್ರಾಸ್‌ಚೆಕ್ ಮಾಡದೆ ಬಿಡುವುದಿಲ್ಲ. ಸುಮ್ಮನೆ ಏನೇನೋ ಹುಡುಕಿ ತಲೆ ಕೆಡಿಸಿಕೊಳ್ಳುವ ಬದಲು ನಾವೇ ಸರ್ಚ್‌ ವರ್ಡ್‌ ಕೊಟ್ಟುಬಿಡುವುದುಕ್ಷೇಮ’ ಎನ್ನುವುದು ಅವರ ಸಿದ್ಧಾಂತ. ಆದರೆ ಕೆಲ ರೋಗಿಗಳು ಮಾತ್ರ, ‘ನೀವು ಕೊಟ್ಟಿರುವ ಈ ಮಾತ್ರೆಗಿಂತ ಈ ಮಾತ್ರೆಯ ದರ ಕಡಿಮೆ ಇದೆ. ಆದರೆ ಅದೇ ಕೆಲಸ ಮಾಡುತ್ತೆ ಅಂತ ಗೂಗಲ್ ಹೇಳ್ತಿದೆ’ ಎಂದು ತಲೆ ತಿಂದಾಗ ಮಾತ್ರ ಅವರಿಗೆ ರೋಸಿ ಹೋಗುತ್ತಂತೆ.

‘ರೋಗಿಯ ದೇಹಲಕ್ಷಣ ಮತ್ತು ಕಾಯಿಲೆಯ ತೀವ್ರತೆ ಆಧರಿಸಿ ಔಷಧಿಗಳನ್ನು ಬರೆಯಬೇಕಾಗುತ್ತೆ. ಒಬ್ಬರಿಗೆ ಒಗ್ಗುವ ಮಾತ್ರೆ ಮತ್ತೊಬ್ಬರಿಗೆ ಒಗ್ಗುವುದಿಲ್ಲ. ಹೀಗೆ ರೇಟ್ ಕಂಪೇರ್ ಮಾಡಿಕೊಂಡು ಬರುವ ರೋಗಿಗಳಿಗೆ ಅದಕ್ಕಿಂತಲೂ ಹೆಚ್ಚು ದರದ ಮಾತ್ರೆಗಳ ಪಟ್ಟಿಯನ್ನೇ ತೋರಿಸಿಬಿಡುತ್ತೇನೆ. ಅವೆಲ್ಲಾ ಇದ್ದರೂ, ನಿಮಗೆ ಅವನ್ನು ಕೊಳ್ಳುವ ಸಾಮರ್ಥ್ಯವಿದ್ದರೂ ನಾನು ಅವನ್ನು ಬರೆಯಲಾರೆ.ನಿಮ್ಮ ದೇಹಕ್ಕೆ ಯಾವುದು ಒಗ್ಗುತ್ತೆ ಅಂತ ನಮಗೆ ಗೊತ್ತು. ಮೊದಲು ನಿಮ್ಮ ವೈದ್ಯರನ್ನು ನಂಬಿ’ ಎಂದು ಬುದ್ಧಿ ಹೇಳಿ ಕಳಿಸುತ್ತೇನೆ ಎಂದು 70ರ ಹರೆಯದ ಆ ಸರ್ಜನ್ ಬೇಸರ ತೋಡಿಕೊಂಡರು.

‘ಮಗುವಿಗೆ ಜ್ವರ ಬಂದಿದೆ. ____ ಟಾನಿಕ್ ಕುಡಿಸಬಹುದಾ?’ ಎಂದು ಮಗುವನ್ನು ಕರೆತಂದಿರುವ ಅಮ್ಮನೇ ಹೇಳುತ್ತಾರೆ. ರೋಗಿಯನ್ನು ಕರೆ ತಂದವರು ರೋಗ ಲಕ್ಷಣ ವಿವರಿಸಿ ಔಷಧ ಕೊಡುವ ಜವಾಬ್ದಾರಿಯನ್ನು ನಮಗೆ ಕೊಡಬೇಕು. ಮಕ್ಕಳ ದೇಹಪ್ರಕೃತಿ, ಜ್ವರದ ಕಾರಣಗಳು, ಲಕ್ಷಣಗಳನ್ನು ಗಮನಿಸಿ ಔಷಧಿಯನ್ನು ನಿರ್ಧಿರಿಸಬೇಕಾಗುತ್ತದೆ. ನನಗಂಗೂ ಇಂಥವರ ಪ್ರವೃತ್ತಿಯಿಂದ ಸಿಕ್ಕಾಪಟ್ಟೆ ಇರಿಸುಮುರಿಸು’ಎಂದು ಮಕ್ಕಳ ಡಾ.ಮಂಜುನಾಥಭಟ್ಟಬೇಸರ ವ್ಯಕ್ತಪಡಿಸಿದರು.

ಶರೀರ ಪ್ರಕೃತಿ ಅರಿಯದೇ ಆಯುರ್ವೇದ ಔಷಧಿ ತೆಗೆದುಕೊಳ್ಳುವುದು ಅಪಾಯಕಾರಿ
ಶರೀರ ಪ್ರಕೃತಿ ಅರಿಯದೇ ಆಯುರ್ವೇದ ಔಷಧಿ ತೆಗೆದುಕೊಳ್ಳುವುದು ಅಪಾಯಕಾರಿ

ಆಯುರ್ವೇದದಲ್ಲಿಯೂ ಸ್ವಯಂವೈದ್ಯ ಅಪಾಯಕಾರಿ

‘ಕೆಲವರಿಗೆ ಆಯುರ್ವೇದದಲ್ಲಿ ಸೈಡ್ ಎಫೆಕ್ಟ್‌ ಇಲ್ಲ. Ayurvedic Medicine For .... Disease’ ಎಂದು ಹುಡುಕಿ, ಯಾವುದೋ ಒಂದು ಔಷಧಿ ತಗೊಂಡ್ರೆ ಆಯಿತು. ಎನ್ನುವ ಮನೋಭಾವ ಬೆಳೆದುಬಿಟ್ಟಿದೆ. ಇದು ಅಪಾಯಕಾರಿ’ ಎಂದು ಎಚ್ಚರಿಸುತ್ತಾರೆ ತುಮಕೂರಿನ ಆಯುರ್ವೇದಿಕ್ ವೈದ್ಯ ಡಾ.ಧರ್ಮಪಾಲ್.

‘ವಾತ, ಪಿತ್ಥ ಅಥವಾಕಫದ ಶರೀರಗಳಿಗೆ ಅನುಗುಣವಾಗಿ ಔಷಧಿ,ಅದರ ಪ್ರಮಾಣ ಮತ್ತು ತೆಗೆದುಕೊಳ್ಳಬೇಕಾದ ರೀತಿಯನ್ನು ನಿರ್ಧರಿಸಬೇಕು. ಒಂದೇ ಔಷಧಿಯನ್ನು ಕೆಲವರಿಗೆ ಬಿಸಿನೀರು ಬೆರೆಸಿಕೊಂಡು, ಕೆಲವರಿಗೆ ನೀರು ಬೆರೆಸದೆ, ಕೆಲವರಿಗೆ ಊಟಕ್ಕೆ ಮೊದಲು, ಕೆಲವರಿಗೆ ಊಟದ ನಂತರ ತೆಗೆದುಕೊಳ್ಳಲು ಹೇಳುತ್ತೇವೆ. ಕೆಲ ಔಷಧಿಗಳನ್ನು ಇಂತಿಷ್ಟು ದಿನಗಳ ನಂತರ ಕಡ್ಡಾಯವಾಗಿ ನಿಲ್ಲಿಸಿ ಎನ್ನುತ್ತೇವೆ. ರೋಗಿಗಳದೇಹಪ್ರಕೃತಿ ಅರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ನಮಗೆ ತರಬೇತಿ ಸಿಕ್ಕಿರುತ್ತದೆ.ಗೂಗಲ್‌ನಲ್ಲಿ ಔಷಧಿ ಹೆಸರು ಹುಡುಕಿಸ್ವಯಂವೈದ್ಯ ಮಾಡಿಕೊಳ್ಳುವ ರೋಗಿಗಳಿಗೆ ಇದು ಅರ್ಥವಾಗುತ್ತದೆಯೇ? ಡೋಸೇಜ್ ಮೀರಿದರೆ, ದೇಹಪ್ರಕೃತಿಗೆ ವಿರುದ್ಧವಾಗಿದ್ದರೆಆಯುರ್ವೇದ ಔಷಧಿಗಳು ಅಪಾಯಕಾರಿ ಆಗಬಲ್ಲವು’ ಎಂದು ಅವರು ಎಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT