ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ವಲಯ: ಬಿಡಿಎ ಕ್ರಮದಿಂದ ನಿವೇಶನ ಮಾಲೀಕರು ಕಂಗಾಲು

Last Updated 19 ಏಪ್ರಿಲ್ 2023, 9:27 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿಯ 6ನೇ ಹಂತದಲ್ಲಿ 1ರಿಂದ 14ರವರೆಗೆ ಹೊಸ ಬ್ಲಾಕ್‌ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕ್ರಮದಿಂದ ನಿವೇಶನದಾರರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎರಡು ದಶಕಗಳ ಹಿಂದೆ ಬಿಡಿಎ ಈ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಿತ್ತು. ಆದರೆ, ಇವುಗಳಲ್ಲಿನ 2 ಹಾಗೂ 3ನೇ ಬ್ಲಾಕ್‌ನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನ ನಿರ್ಮಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ನಿವೇಶನಗಳ ಮಾಲೀಕರು ಕಂಗಾಲಾಗಿದ್ದಾರೆ.

‘ಬಿಡಿಎ ನಿವೇಶನ ಹಂಚಿಕೆ ಮಾಡಿ ಕ್ರಯ ಪತ್ರವನ್ನೂ ನೀಡಿತ್ತು. ನಿವೇಶನದಾರರು ಅಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ‘ಬಿಡಿಎ ಈ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಕಾಡಂಚಿನ ಪ್ರದೇಶವು ತುರಹಳ್ಳಿ ಅರಣ್ಯ ವ್ಯಾಪ್ತಿಯ ಸೂಕ್ಷ್ಮ ವಲಯವಾಗಿದ್ದು ಕಟ್ಟಡ ನಿರ್ಮಾಣಕ್ಕೆ ಅವಕಾಶ ಇಲ್ಲ’ ಎಂದು ಮನೆ ನಿರ್ಮಾಣಕ್ಕೆ ತಡೆಯೊಡ್ಡುತ್ತಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿವೇಶನ ಖರೀದಿಸಿದ್ದೇವೆ. ಎಲ್ಲ ದಾಖಲೆಗಳೂ ಇವೆ. ಆದರೆ, ಬಿಡಿಎ ಮಾತ್ರ ನಮ್ಮ ನೆರವಿಗೆ ಬರುತ್ತಿಲ್ಲ’ ಎಂದು ನಿವೇಶನ ಖರೀದಿದಾರರು ಅಳಲು ತೋಡಿಕೊಳ್ಳುತ್ತಾರೆ.

‘ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾರ ಬಿಡಿಎ ಅತಿಕ್ರಮಣ ಮಾಡಿಕೊಂಡು ನಿವೇಶನ ನಿರ್ಮಿಸಿದೆ. ಹೀಗಾಗಿ, ಕಾಡಿನ ಪಕ್ಕದಲ್ಲಿ ಹಂಚಿಕೆಯಾಗಿರುವ ನಿವೇಶನಗಳಲ್ಲಿ ಮನೆ ನಿರ್ಮಿಸಲು ಬಿಡುವುದಿಲ್ಲ. ಬಿಡಿಎ, ಅರಣ್ಯ ಇಲಾಖೆಯ ತಿಕ್ಕಾಟದಿಂದ ನಿವೇಶನದ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸಮಸ್ಯೆ ಮತ್ತಷ್ಟು ಕಗ್ಗಂಟಾಗಿದೆ’ ಎಂದು ನಿವೇಶನದಾರ ನಂಜುಂಡಯ್ಯ ಹೇಳುತ್ತಾರೆ.

ಬಿಡಿಎನಿಂದ ನಿವೇಶನ ಪಡೆದಿದ್ದ ನೂರಾರು ನಿವೇಶನದಾರರು ತೊಂದರೆಗೆ ಸಿಲುಕಿದ್ದಾರೆ. ನಿವೇಶನ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.

‘ಹೆಮ್ಮಿಗೆಪುರ, ಉತ್ತರಹಳ್ಳಿಯ ಮನವರ್ತೆ ಕಾವಲ್‌ ಮತ್ತು ತುರಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ ಗಳಲ್ಲಿ ಬಿಡಿಎ ಲೇಔಟ್‌ ಮಾಡಿ ನಿವೇಶನ ನಿರ್ಮಿಸಿತ್ತು. ಇದಕ್ಕೆ ಹೊಂದಿಕೊಂಡಂತೆಯೇ ಅರಣ್ಯವಿದೆ. ಅರಣ್ಯ ಪಕ್ಕದ 100 ಮೀಟರ್‌ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರುತ್ತದೆ. ಈ ವಲಯದಲ್ಲಿ 1,157 ನಿವೇಶನ ಮಾಡಲಾಗಿದೆ. ಇಲ್ಲಿ ಯಾವುದೇ ಚಟುವಟಿಕೆ ನಡೆಸಲು ಅವಕಾಶವಿಲ್ಲ. ಈ ಭೂಮಿಯನ್ನು ವಾಪಸ್‌ ನೀಡಬೇಕು ಎಂಬುದು ಅರಣ್ಯ ಇಲಾಖೆ ವಾದವಾಗಿದೆ.

‘ಸೂಕ್ಷ್ಮ ವಲಯದ ವ್ಯಾಪ್ತಿ ಕಡಿತಗೊಳಿಸುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆಗೆ ಚರ್ಚಿಸಲಾಗುವುದು ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಯಾರೂ ಇತ್ತ ಬಂದಿಲ್ಲ. ಚುನಾವಣೆ ಮುಗಿದ ಮೇಲೆ ಸರ್ಕಾರದ ಹಂತದಲ್ಲೇ ಮಾತುಕತೆ ನಡೆಸುತ್ತೇವೆ’ ಎಂದು ನಿವೇಶನದಾರರು ಹೇಳಿದ್ದಾರೆ.

‌‘ಎರಡು ದಶಕದ ಬಳಿಕ ತಕರಾರು’

ಬನಶಂಕರಿಯ 2 ಮತ್ತು 3ನೇ ಬ್ಲಾಕ್‌ ನಿರ್ಮಾಣವಾಗಿ ಎರಡು ದಶಕಗಳೇ ಕಳೆದಿದೆ. ಇದುವರೆಗೂ ಸುಮ್ಮನಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಈಗ ಇಲಾಖೆಗೆ ಸೇರಿದ್ದು ಎನ್ನುತ್ತಿದ್ದಾರೆ. ಈ ಜಾಗ ವಾಪಸ್‌ ಮಾಡುವಂತೆ ಬಿಡಿಎಗೆ ನೋಟಿಸ್‌ ನೀಡಿದೆ ಎಂಬ ಮಾಹಿತಿಯಿದೆ. ಬಿಡಿಎ ಮಧ್ಯಪ್ರವೇಶಿಸಿ ನಿವೇಶನ ಖರೀದಿಸಿದವರಿಗೆ ನ್ಯಾಯ ಒದಗಿಸಬೇಕು ಎಂದು ನಿವೇಶನದಾರ ನಂಜುಂಡಯ್ಯ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT