ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ಕಾಮಗಾರಿ ಪ್ರತಿ ಹಂತಕ್ಕೂ ಪ್ರತ್ಯೇಕ ಎಸ್‌ಒಪಿ: ಬಿಎಂಆರ್‌ಸಿಎಲ್‌

Last Updated 23 ಜನವರಿ 2023, 20:09 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಣ ಹಂತದ ಮೆಟ್ರೊ ಪಿಲ್ಲರ್ ಕಬ್ಬಿಣದ ಚೌಕಟ್ಟು ಉರುಳಿಬಿದ್ದು ತಾಯಿ– ಮಗು ಮೃತಪಟ್ಟ ಪ್ರಕರಣದಿಂದ ಎಚ್ಚೆತ್ತಿರುವ ಬಿಎಂಆರ್‌ಸಿಎಲ್‌, ಕಾಮಗಾರಿಯ ಎಲ್ಲಾ ಹಂತಗಳಿಗೆ ಪ್ರತ್ಯೇಕ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್‌ಒಪಿ) ರೂಪಿಸಲು ಮುಂದಾಗಿದೆ.

ಎತ್ತರಿಸಿದ ಮಾರ್ಗ ನಿರ್ಮಾಣದಲ್ಲಿ ಕಂಬಗಳ ಎತ್ತರ ಎಷ್ಟಿರಬೇಕು, ಕಂಬಗಳನ್ನು ಎಷ್ಟು ಹಂತಗಳಲ್ಲಿ ನಿರ್ಮಿಸಬೇಕು, ಸರಳುಗಳ ಗಾತ್ರ ಎಷ್ಟಿರಬೇಕು, ಆಸರೆ ಹೇಗಿರಬೇಕು ಎಂಬುದು ಸೇರಿದಂತೆ ಎಸ್‌ಒಪಿ ರೂಪಿಸಿ ಗುತ್ತಿಗೆದಾರರು ಮತ್ತು ನಿಗಮದ ಎಂಜಿನಿಯರ್‌ಗಳಿಗೆ ನೀಡಲು ನಿರ್ಧರಿಸಿದೆ.

ಈಗಾಗಲೇ ಎಸ್‌ಒಪಿಗಳಿದ್ದರೂ ಅವಘಡ ಸಂಭವಿಸಿದೆ. ಆದ್ದರಿಂದ ಕಾರ್ಯ ವಿಧಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ತಜ್ಞರೊಂದಿಗೆ ಚರ್ಚಿಸಲಾಗುವುದು. ಅಂತಿಮವಾಗಿ ಐಐಎಸ್‌ಸಿ ತಜ್ಞರೊಂದಿಗೂ ಸಮಾಲೋಚನೆ ನಡೆಸಿ ಎಸ್‌ಒಪಿ ಅಂತಿಮಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ಚೌಕಟ್ಟಿಗೆ ಆಸರೆ ಹೇಗಿರಬೇಕು ಮತ್ತು ಅದನ್ನು ತೆರವುಗೊಳಿಸುವಾಗ ಕ್ರೇನ್‌ ಬಳಕೆ ಇರಬೇಕು ಎಂಬುದನ್ನೂ ತಿಳಿಸಲಾಗುವುದು ಎಂದು ಹೇಳಿದರು.

‘18 ಮೀಟರ್‌ ಎತ್ತರದ ಕಂಬಕ್ಕೆ ಯಾವುದೇ ಆಸರೆ ಇಲ್ಲದಿದ್ದರಿಂದ ರಸ್ತೆಗೆ ಬಿದ್ದಿತ್ತು. ಕ್ರೇನ್‌ನಿಂದ ತಾತ್ಕಾಲಿಕ ಆಸರೆ ನೀಡಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ’ ಎಂದು ಐಐಎಸ್‌ಸಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಜೆ.ಎಂ. ಚಂದ್ರಕಿಶನ್ ನೇತೃತ್ವದ ತಂಡ 27 ಪುಟಗಳ ವರದಿಯನ್ನು ಇತ್ತೀಚೆಗೆ ಸಲ್ಲಿಸಿತ್ತು.

ಈ ರೀತಿಯ ಕಂಬ ನಿರ್ಮಾಣ ಮಾಡುವಾಗ ಆಸರೆಗಾಗಿ ಕಬ್ಬಿಣದ ಹಗ್ಗಗಳಿಂದ ಬಿಗಿಯಲಾಗುತ್ತದೆ. ಅದನ್ನು ತೆರವುಗೊಳಿಸಿದ ತಕ್ಷಣ ವೃತ್ತಾಕಾರದ ಕಬ್ಬಿಣದ ಪ್ಲೇಟ್‌ಗಳನ್ನು ಜೋಡಿಸಬೇಕು. ಅಲ್ಲಿಯ ತನಕ ಸುರಕ್ಷತೆ ದೃಷ್ಟಿಯಿಂದ ಕ್ರೇನ್‌ನಿಂದ ಆಸರೆ ನೀಡಬೇಕಿತ್ತು. ಈಗ ಬಿದ್ದಿರುವ ಚೌಕಟ್ಟಿಗೆ ಈ ರೀತಿಯ ಯಾವುದೇ ಆಸರೆ ಇರಲಿಲ್ಲ ಎಂದೂ ವರದಿಯಲ್ಲಿ ಉಲ್ಲೇಖಿಸಿತ್ತು.

ಗುತ್ತಿಗೆದಾರರ ವಿರುದ್ಧ ಕ್ರಮ: ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆ ದಾರರ ಲೋಪ ಯಾವ ನಿಯಮದಡಿ ಬರುತ್ತದೆ ಎಂಬು
ದನ್ನು ಪರಿಶೀಲಿಸಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿ ಗಳು ತಿಳಿಸಿದರು. ವರದಿ ಈಗಷ್ಟೇ ತಲುಪಿದ್ದು, ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT