ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಅಂತಿಮ ಪಟ್ಟಿ ಬಿಡುಗಡೆ

62,351 ಮತದಾರರ ಸೇರ್ಪಡೆ; ಯುವ ಮತದಾರರ ಹೆಸರೇ ಹೆಚ್ಚು
Last Updated 3 ಮಾರ್ಚ್ 2018, 9:07 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. 24.32 ಲಕ್ಷ ಮಂದಿಯ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಒಟ್ಟು 62,351 ಮತದಾರರು ಸೇರ್ಪಡೆಗೊಂಡಿದ್ದಾರೆ.

ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಿ.ರಂದೀಪ್‌, ರಾಜಕೀಯ ಪಕ್ಷಗಳ ಮುಖಂಡರಿಗೆ ಶುಕ್ರವಾರ ನೀಡಿದರು. ಸದರಿ ಮತದಾರರ ಪಟ್ಟಿಗೆ ಸೇರ್ಪಡೆ, ಕೈಬಿಡುವುದು, ತಿದ್ದುಪಡಿ, ವರ್ಗಾವಣೆ ಇದ್ದಲ್ಲಿ ಸಂಬಂಧಪಟ್ಟ ಸಹಾಯಕ ಮತದಾರ ನೋಂದಣಾಧಿಕಾರಿ ಮತ್ತು ಮತದಾರರ ನೋಂದಣಾಧಿಕಾರಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಸಲ್ಲಿಸಬಹುದು ಎಂದು ತಿಳಿಸಿದರು.

ಕರಡು ಮತದಾರರ ಪಟ್ಟಿಯಲ್ಲಿ 23,69,987 ಮತದಾರರಿದ್ದರು. ವಿಶೇಷ ಪರಿಷ್ಕರಣೆಯಲ್ಲಿ ಒಟ್ಟು 62,351 ಮತದಾರರು ಹೆಚ್ಚಾಗಿದ್ದಾರೆ. ಇವರ ಪೈಕಿ 25,598 ಮತದಾರರು ಯುವಕರೇ ಆಗಿದ್ದಾರೆ. ಒಟ್ಟು ಪುರುಷರು 12,21,925, ಮಹಿಳೆಯರು 12,10,413 ಇದ್ದಾರೆ. ಒಟ್ಟು ಮತದಾರರು 24,32,338 ಇದ್ದಾರೆ. ನಾಮಪತ್ರ ಸಲ್ಲಿಕೆಗೆ ಒಂದು ವಾರ ಇರುವವರೆಗೂ ಹೊಸ ಮತದಾರರ ಸೇರ್ಪಡೆ ಅಥವಾ ಹೆಸರು ಕೈಬಿಡಲು ಅವಕಾಶವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಮತಗಟ್ಟೆಗಳ ಸ್ಥಳಾಂತರ: ಜಿಲ್ಲೆಯಲ್ಲಿ 2017ನೇ ಸಾಲಿನಲ್ಲಿ ಒಟ್ಟು 2,687 ಮತಗಟ್ಟೆಗಳಿದ್ದವು. ಇವುಗಳಲ್ಲಿ ಕೆಲವು ಮತಗಟ್ಟೆಗಳು ಮತದಾನಕ್ಕೆ ಯೋಗ್ಯವಲ್ಲವೆಂದು ಕಂಡುಬಂದ ಕಾರಣ ಮತಗಟ್ಟೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಒಟ್ಟು 48 ಮತಗಟ್ಟೆಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ಆಕ್ಷೇಪಗಳಿದ್ದಲ್ಲಿ ಸಲ್ಲಿಸಬಹುದು. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 297 ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲು ಸ್ಥಳ ಗುರುತಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಚುನಾವಣಾ ನೋಡಲ್‌ ಅಧಿಕಾರಿ ಪ್ರಭುಸ್ವಾಮಿ ಇದ್ದರು.
***
ಮತಯಂತ್ರ, ವಿವಿ ಪ್ಯಾಟ್ ಸಾಧನ ಪರೀಕ್ಷೆ

ಮೈಸೂರು: ವಿದ್ಯುನ್ಮಾನ ಮತಯಂತ್ರ ಹಾಗೂ ಮತ ಖಾತರಿ ಯಂತ್ರ (ವಿವಿ ಪ್ಯಾಟ್) ಯಂತ್ರಗಳ ಮೊದಲ ಹಂತದ ಪರೀಕ್ಷಾ ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್‌ ತಿಳಿಸಿದರು.

ಎಲ್ಲ ರಾಜಕೀಯ ಪಕ್ಷಗಳೂ ಈ ಸಾಧನಗಳ ಕಾರ್ಯವೈಖರಿಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಕುರಿತು ಪ್ರಾತ್ಯಕ್ಷಿಕೆಯನ್ನೂ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ತಮಿಳುನಾಡಿನಿಂದ ಬಂದಿರುವ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿ ಪ್ಯಾಟ್ ಸಾಧನಗಳನ್ನು ಭದ್ರತಾ ಕೊಠಡಿಯಲ್ಲಿ ಇಡಲಾಗಿದೆ. ಪರೀಕ್ಷೆಗೆ ಒಳಗಾದ ಯಂತ್ರಗಳಿಗೆ ಬಣ್ಣದ ಚಿಹ್ನೆಗಳನ್ನು ಹಾಕಲಾಗುವುದು. ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾಧನಗಳಿಗೆ ಹಸಿರು ಬಣ್ಣ, ದೋಷವಿರುವ ಸಾಧನಗಳಿಗೆ ಕೆಂಪು ಬಣ್ಣದ ಸ್ಟಿಕರ್‌ ಹಚ್ಚಲಾಗುವುದು. ದೋಷಯುಕ್ತ ಸಾಧನಗಳನ್ನು ಚುನಾವಣಾ ಆಯೋಗಕ್ಕೆ ಕಳುಹಿಸಲಾಗುವುದು ಎಂದರು.

ಈ ಸಾಧನಗಳು ಪಾರದರ್ಶಕ ಚುನಾವಣೆಗೆ ಸಂಕೇತವಾಗಿವೆ. ವಿವಿ ಪ್ಯಾಟ್‌ ಸಾಧನದ ಮೂಲಕ ಮತದಾರರು ತಾವು ಮತ ಹಾಕಿದ ಮಾಹಿತಿಯನ್ನು ಪರದೆಯ ಮೇಲೆ ನೋಡಬಹುದು. ಅಲ್ಲದೆ, ಮತದಾನದ ಮಾಹಿತಿಯುಳ್ಳ ಸಣ್ಣ ಮುದ್ರಿತ ಚೀಟಿಯು ಅದೇ ಸಾಧನಕ್ಕೆ ಅಂಟಿಕೊಂಡಿರುವ ಡಬ್ಬಿಯಲ್ಲಿ ಗೌಪ್ಯವಾಗಿ ಸಂಗ್ರಹವಾಗುತ್ತದೆ. ಮತದಾರರ ಆಯ್ಕೆಗೆ ವಿರುದ್ಧವಾಗಿ ಪರದೆಯ ಮೇಲೆ ತಪ್ಪು ಮಾಹಿತಿ ಬಂದಲ್ಲಿ ಸ್ಥಳದಲ್ಲೇ ದೂರು ನೀಡಬಹುದು. ಮತಗಟ್ಟೆ ಅಧಿಕಾರಿಯು ಸ್ಥಳದಲ್ಲೇ ಪರಿಶೀಲನೆ ನಡೆಸುತ್ತಾರೆ. ಇದರಿಂದ ಸಂಬಂಧಪಟ್ಟ ಸಿಬ್ಬಂದಿಗೆ 6 ತಿಂಗಳವರೆಗೂ ಶಿಕ್ಷೆಯಾಗಬಹುದು ಎಂದು ಮಾಹಿತಿ ನೀಡಿದರು.

ಅಣಕು ಮತದಾನ:

ಮತದಾನದ ದಿನದಂದು ಈ ಸಾಧನಗಳ ಪರೀಕ್ಷೆ ಮಾಡಲಾಗುವುದು. ಮತದಾನ ಆರಂಭವಾಗುವುದಕ್ಕೆ ಮುನ್ನ ಬೆಳಿಗ್ಗೆ 6ರಿಂದ 7ರ ವರೆಗೆ ಅಣಕು ಮತದಾನ ಮಾಡಿ ಪರೀಕ್ಷಿಸಲಾಗುವುದು ಎಂದರು.
**
ತಾರಾ ಪ್ರಚಾರದ ಮೇಲೆ ನಿಗಾ

ಮೈಸೂರು: ರಾಜಕೀಯ ಪಕ್ಷಗಳು ನಡೆಸುವ ತಾರಾ ಪ್ರಚಾರದ ಬಗ್ಗೆ ನಿಗಾ ವಹಿಸಲಾಗುವುದು ಎಂದು ರಂದೀಪ್‌ ತಿಳಿಸಿದರು.

ರಾಜಕೀಯ ಪಕ್ಷಗಳು ತಮ್ಮ ತಾರಾ ಪ್ರಚಾರಕ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿರಬೇಕು. ಅಭ್ಯರ್ಥಿಗೆ ಗರಿಷ್ಠ ₹ 28 ಲಕ್ಷ ಖರ್ಚು ಮಾಡುವ ಮಿತಿ ಇರುತ್ತದೆ. ಪ್ರಚಾರ ಪ್ರಕ್ರಿಯೆಯನ್ನು ಖರ್ಚೆಂದು ಪರಿಗಣಿಸಲಾಗುವುದು. ತಾರಾ ಪ್ರಚಾರದ ಪಟ್ಟಿಯಲ್ಲಿ ಪ್ರಚಾರಕ ಇಲ್ಲದೆ ಇದ್ದಲ್ಲಿ ಮಾರುಕಟ್ಟೆ ದರದಂತೆ ವೆಚ್ಚ ನಿರ್ಧರಿಸಲಾಗುವುದು ಎಂದು ಹೇಳಿದರು.
**
ಚುನಾವಣೆ ಸರಳ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಇದಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯುನ್ಮಾನ ಸಾಧನಗಳ ಬಳಕೆಗೆ ಪೂರಕವಾಗಿದೆ

– ಡಿ.ರಂದೀಪ್‌, ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT