ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಏಳು ವರ್ಷದ ಬಾಲಕಿ ಅಪಹರಿಸಿ ಹತ್ಯೆ

ಅಕ್ಕನ ಮಗಳ ಕೊಲೆ: ಹೊದಿಕೆಯಲ್ಲಿ ಸುತ್ತಿಟ್ಟಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅಕ್ಕನ ಮಗಳನ್ನೇ ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿ ಸಯ್ಯದ್ ಸಲ್ಮಾನ್ ಷಾ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ ಸಿಸಿಎಚ್–51ನೇ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ನಡೆದಿದ್ದ ಕೃತ್ಯದ ಬಗ್ಗೆ ನ್ಯಾಯಾಧೀಶರಾದ ಬಿ.ಕೆ. ಕೋಮಲಾ ವಿಚಾರಣೆ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್. ವೀಣಾ ವಾದಿಸಿದ್ದರು.

ಪ್ರಕರಣದ ವಿವರ: ಏಳು ವರ್ಷದ ಬಾಲಕಿ ರತೀಭಾ ನಿಸ್ಸಾರ್ ಅಶೋಕನಗರ ಬಳಿಯ ಶಾಲೆಯೊಂದರಲ್ಲಿ ಓದುತ್ತಿದ್ದಳು. ಅಕ್ಕನ ಮಗಳಾದ ಆಕೆಯನ್ನು ಅಪಹರಿಸಿ ₹ 10 ಲಕ್ಷ ವಸೂಲಿ ಮಾಡಲು ಆರೋಪಿ ಸಲ್ಮಾನ್ ಸಂಚು ರೂಪಿಸಿದ್ದ. 2014ರ ಜುಲೈ 9ರಂದು ಪತ್ನಿಯನ್ನು ಶಾಲೆಗೆ ಕಳುಹಿಸಿದ್ದ ಆತ, ಅಜ್ಜಿಗೆ ಹುಷಾರಿಲ್ಲವೆಂದು ಹೇಳಿ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಬರುವಂತೆ ಮಾಡಿದ್ದ.

ಭಾರತಿನಗರದ ತಿಮ್ಮಯ್ಯ ರಸ್ತೆಯಲ್ಲಿರುವ ಅಂಗಾಳ್ ಈಶ್ವರಿ ಅಮ್ಮನ್ ದೇವಸ್ಥಾನ ಬಳಿಯ ಮನೆಯಲ್ಲಿ ಬಾಲಕಿಯನ್ನು ಅಕ್ರಮ ಬಂಧನದಲ್ಲಿಡಲಾಗಿತ್ತು. ಅಕ್ಕನಿಗೆ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತನ ಹೆಸರಿನಲ್ಲಿ ಸಂದೇಶ ಕಳುಹಿಸಿದ್ದ ಆರೋಪಿ, ‘ರತೀಭಾಳನ್ನು ಅಪಹರಣ ಮಾಡಿದ್ದು, ಈಗ ನನ್ನ ಬಳಿ ಇದ್ದಾಳೆ. ಆಕೆಯನ್ನು ಬಿಡುಗಡೆ ಮಾಡಬೇಕಾದರೆ ₹ 10 ಲಕ್ಷ ಕೊಡಬೇಕು’ ಎಂದು ಬೇಡಿಕೆಯಿಟ್ಟಿದ್ದ. ಆದರೆ, ಪೋಷಕರಿಗೆ ಹಣ ನೀಡಲು ಸಾಧ್ಯವಾಗಿರಲಿಲ್ಲ.

ಅಷ್ಟಕ್ಕೆ ಕೋಪಗೊಂಡ ಅಪರಾಧಿ ಸಲ್ಮಾನ್, ರತೀಭಾಳ ಕುತ್ತಿಗೆಗೆ ಬಟ್ಟೆಯಿಂದ ಬಿಗಿದು ಕೊಂದಿದ್ದ. ನಂತರ ಮೃತದೇಹವನ್ನು ಹೊದಿಕೆಯಲ್ಲಿ ಸುತ್ತಿ ಮನೆಯ ಮಂಚದ ಕೆಳಗೆ ಮುಚ್ಚಿಟ್ಟಿದ್ದ. ಬಾಲಕಿಯ ಶಾಲಾ ಬಟ್ಟೆ, ಬ್ಯಾಗ್, ಪುಸ್ತಕ ಹಾಗೂ ಇತರೆ ವಸ್ತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಬಿಸಾಡಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ.

ಮಗಳು ಅಪಹರಣವಾದ ಬಗ್ಗೆ ಪೋಷಕರು ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದ ಅಂದಿನ ಇನ್‌ಸ್ಪೆಕ್ಟರ್ ರಂಗಪ್ಪ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪತ್ನಿಗೂ ಜೀವಾವಧಿ ಶಿಕ್ಷೆ: ಅಪಹರಣ ಹಾಗೂ ಕೊಲೆಯಲ್ಲಿ ಪತಿ ಸಲ್ಮಾನ್ ಜೊತೆ ಪತ್ನಿ ಶಬರಿನ್ ತಾಜ್ ಸಹ ಭಾಗಿಯಾಗಿದ್ದಳು. ವಿಚಾರಣೆ ಆರಂಭದಲ್ಲಿ ಆಕೆ ನ್ಯಾಯಾಲಯದ ಎದುರು ತಪ್ಪೊಪ್ಪಿಕೊಂಡಿದ್ದಳು. ಆಕೆಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ದೊಡ್ಡಪ್ಪನನ್ನೂ ಕೊಂದಿದ್ದ!

‘ಆರೋಪಿ ಸೈಯದ್ ಸಲ್ಮಾನ್ ಷಾ ಹಾಗೂ ಆತನ ಪತ್ನಿ ಶಬರಿನ್ ತಾಜ್, ಸಂಬಂಧಿಕರ ಬಳಿಯ ಹಣ ಹಾಗೂ ಚಿನ್ನಾಭರಣ ದೋಚಲು ಅಪರಾಧ ಕೃತ್ಯ ಎಸಗುತ್ತಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಲ್ಮಾನ್‌ನ 65 ವರ್ಷದ ದೊಡ್ಡಪ್ಪ ಡಿ.ಜೆ.ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದರು. ಅವರನ್ನೇ ಕೊಲೆ ಮಾಡಿದ್ದ ಆರೋಪಿಗಳು, ಚಿನ್ನಾಭರಣ ದೋಚಿದ್ದರು. ಈ ಪ್ರಕರಣದಲ್ಲೂ ಆರೋಪಿಗಳ ಬಂಧನವಾಗಿತ್ತು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು