ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

76ರ ಉದ್ಯಮಿಗೆ ದ್ವಿಪತ್ನಿತ್ವದ ಸಂಕಟ: ಹೈಕೋರ್ಟ್ಟ ಮೆಟ್ಟಿಲೇರಿದ ಪ್ರಕರಣ

ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ
Last Updated 4 ಜೂನ್ 2022, 20:06 IST
ಅಕ್ಷರ ಗಾತ್ರ

ಬೆಂಗಳೂರು: ಮೂವರು ಪತ್ನಿಯರನ್ನು ಹೊಂದಿರುವ 76 ವರ್ಷದ ಉದ್ಯಮಿಯೊಬ್ಬರ ವಿರುದ್ಧ ಅವರ ಮೊದಲ ಪತ್ನಿ ದಾಖಲಿಸಿರುವ ದ್ವಿಪತ್ನಿತ್ವ ಪ್ರಶ್ನಿಸಿದ ಖಾಸಗಿ ದೂರನ್ನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಆರ್.ಪಿ.ಸಿ ಲೇಔಟ್‌ನ ಹಂಪಿನಗರದ ನಿವಾಸಿ ಸಿ.ಆನಂದ್‌ ಅಲಿಯಾಸ್‌ ಅಂಕುಗೌಡ ಮತ್ತು 49 ವರ್ಷದ ಅವರ ಮೂರನೇ ಪತ್ನಿ ವರಲಕ್ಷ್ಮಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ನನ್ನ ಮೊದಲ ಪತ್ನಿ ಚಂದ್ರಮ್ಮ (69 ವರ್ಷ) 2018ರಲ್ಲಿ ಚನ್ನಪಟ್ಟಣದ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿಸಲ್ಲಿಸಿರುವ ಖಾಸಗಿ ದೂರು ತಡವಾಗಿ ದಾಖಲಾಗಿರುವಂಥಾದ್ದು. ಅಷ್ಟಕ್ಕೂ ನನ್ನ ಎರಡನೇ ಮದುವೆಗೆ ಆಕೆ ಆವತ್ತೇ ಒಪ್ಪಿಗೆ ನೀಡಿದ್ದಳು. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸಬೇಕು ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

‘ಇದೊಂದು ವಿಶಿಷ್ಟ ಪ್ರಕರಣ. ಅಂಕುಗೌಡ ಅಪರಾಧಗಳ ಬಲೆಯಲ್ಲಿ ಸಿಲುಕಿದ್ದಾರೆ. ಹೀಗಾಗಿ, ಐಪಿಸಿ 494ರ ಅನುಸಾರ ದಾಖಲಿಸಲಾಗಿರುವ ದ್ವಿಪತ್ನಿತ್ವ ಪ್ರಶ್ನಿಸಿದ ದೂರನ್ನು ವಜಾಗೊಳಿಸಲು ಆಗದು, ಅವರು ವಿಚಾರಣೆ ಎದುರಿಸಲಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ,ಇದೇ ವೇಳೆ ವಿಚಾರಣಾ ನ್ಯಾಯಾಲಯದಲ್ಲಿ ಮೂರನೇ ಪತ್ನಿಯ ಅಪ್ತರು ಮತ್ತು ಸಂಬಂಧಿಕರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ರದ್ದುಗೊಳಿಸುವ ಮೂಲಕ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಪ್ರಕರಣವೇನು?: ಅಂಕುಗೌಡರು 1968ರಲ್ಲಿ ಚಂದ್ರಮ್ಮ ಅವರನ್ನು ಮದುವೆಯಾಗಿದ್ದರು. 1972ರಲ್ಲಿ ಚಂದ್ರಮ್ಮನ ತಂಗಿ ಸಾವಿತ್ರಮ್ಮನನ್ನು ಕೈ ಹಿಡಿದರು. 1993ರಲ್ಲಿ ವರಲಕ್ಷ್ಮಿ ಎಂಬುವರನ್ನೂ ವರಿಸಿದರು. ‘ಸಾವಿತ್ರಮ್ಮನನ್ನು ಮದುವೆಯಾಗಲು ಚಂದ್ರಮ್ಮ ಒಪ್ಪಿಗೆ ನೀಡಿದ್ದರು, ವರಲಕ್ಷ್ಮಿಯನ್ನು ವರಿಸಲು ಸಾವಿತ್ರಮ್ಮ ಮತ್ತು ಚಂದ್ರಮ್ಮ ಇಬ್ಬರೂ ಸಮ್ಮತಿಸಿದ್ದರು’ ಎಂಬುದು ಅಂಕುಗೌಡರ ಪ್ರತಿಪಾದನೆ.

‘ಆಸ್ತಿಯ ಪಾಲುದಾರಿಕೆಯಲ್ಲಿ ಉಂಟಾದ ವ್ಯಾಜ್ಯದಿಂದಾಗಿ ದ್ವಿಪತ್ನಿತ್ವವನ್ನು 25 ವರ್ಷಗಳ ನಂತರ ಪ್ರಶ್ನಿಸಲಾಗಿದ್ದು, 2018 ರಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ವರಲಕ್ಷ್ಮಿ ಮತ್ತು ಆಕೆಯ ನಾಲ್ವರು ಸಂಬಂಧಿಕರು ಹಾಗೂ ಆಪ್ತರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಅಂಕುಗೌಡರು ತಮ್ಮ ಮೂರನೇ ಪತ್ನಿಗೆ ದಾನಪತ್ರದ ಮೂಲಕ ಆಸ್ತಿ ವರ್ಗಾಯಿಸಿದ್ದು, ಇದು ಮೊದಲ ಪತ್ನಿಯ ಮಕ್ಕಳ ತಗಾದೆಗೆ ಕಾರಣವಾಗಿದೆ. ಇವರೆಲ್ಲಾ ಸತ್ಯಾಂಶಗಳನ್ನು ಮರೆ ಮಾಚಿದ್ದಾರೆ’ ಎಂದು ಅಂಕುಗೌಡರ ಪರ ವಕೀಲರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT