ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಪೂರೈಕೆಯಲ್ಲಿ ತೀವ್ರ ವ್ಯತ್ಯಯ

ಹತ್ತು ದಿನಗಳಿಂದ ಗ್ರಾಹಕರು, ವಿತರಕರ ಪರದಾಟ: ಟ್ಯಾಂಕರ್‌ಗಳನ್ನು ಅವಲಂಬಿಸಿರುವ ಬಿಪಿಸಿಎಲ್‌
Last Updated 13 ಸೆಪ್ಟೆಂಬರ್ 2019, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ಹತ್ತು ದಿನಗಳಿಂದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಬಿಪಿಸಿಎಲ್‌) ಕಂಪನಿಯ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಗ್ರಾಹಕರು ಮತ್ತು ವಿತರಕರು ಪರದಾಡುವಂತಾಗಿದೆ.

ನಗರದಲ್ಲೇ ಸುಮಾರು 80 ವಿತರಕರಿದ್ದು, 7.5 ಲಕ್ಷ ಗ್ರಾಹಕರನ್ನು ಬಿಪಿಸಿಎಲ್ ಹೊಂದಿದೆ. ಇದಲ್ಲದೇ ಬೆಂಗಳೂರು ಸುತ್ತಮುತ್ತಲಿನ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಸೇರಿ 15 ಲಕ್ಷ ಗ್ರಾಹಕರನ್ನು ಕಂಪನಿ ಹೊಂದಿದೆ.

ಆದರೆ, ಕಳೆದ ಹತ್ತು ದಿನಗಳಿಂದ ಅಡುಗೆ ಅನಿಲ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ಬುಕ್ ಮಾಡಿ ವಾರ ಕಳೆದರೂ ಸಿಲಿಂಡರ್ ಸಿಗುತ್ತಿಲ್ಲ. ವಿತರಕರನ್ನು ಕೇಳಿದರೆ ‘ಸಿಲಿಂಡರ್ ಬಂದಿಲ್ಲ’ ಎಂಬ ಉತ್ತರ ಬರುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.

‘ಕಳೆದ ಕೆಲ ದಿನಗಳಿಂದ ಸಿಲಿಂಡರ್ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಒಬ್ಬೊಬ್ಬ ವಿತರಕರ ಬಳಿ 3 ಸಾವಿರದಿಂದ 5 ಸಾವಿರ ಆರ್ಡರ್‌ಗಳು ಬಾಕಿ ಇವೆ. ಸಗಟು ವಿತರಕರನ್ನು ಕೇಳಿದರೆ ಕೊಚ್ಚಿಯಿಂದ ಪೂರೈಕೆ ಆಗುತ್ತಿಲ್ಲ ಎಂಬ ಉತ್ತರ ಬರುತ್ತಿದೆ’ ಎಂದು ವಿತರಕರೊಬ್ಬರು ‘ಪ್ರಜಾವಾಣಿ’ ಬಳಿ ತೊಂದರೆ ಹೇಳಿಕೊಂಡರು.

‘ಬೇರೆ ಕಂಪನಿಗಳು ಮಂಗಳೂರಿನಿಂದ ಪೈಪ್‌ಲೈನ್ ಮೂಲಕ ಅನಿಲ ತರಿಸಿಕೊಳ್ಳುತ್ತಿದ್ದು, ಬಿಪಿಸಿಎಲ್ ಟ್ಯಾಂಕರ್‌ಗಳನ್ನೇ ಅವಲಂಬಿಸಿರುವ ಕಾರಣ ಈ ತೊಂದರೆಯಾಗಿದೆ. ದಿನಕ್ಕೆ ಮೂರು–ನಾಲ್ಕು ಲೋಡ್ ಸಿಲಿಂಡರ್ ಪಡೆಯುತ್ತಿದ್ದ ವಿತರಕರಿಗೆ ಒಂದು ಲೋಡ್ ಕೂಡ ಸಿಗುತ್ತಿಲ್ಲ. ಕಚೇರಿ ಬಳಿಗೆ ಬಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

‘ಬೇರೆ ಕಂಪನಿಗಳಿಗೆ ಪೈಪೋಟಿ ನೀಡಿ ಗ್ರಾಹಕರ ಸಂಖ್ಯೆ ಹೆಚ್ಚಿಸಲು ಒತ್ತಡ ಹೇರಲಾಗುತ್ತದೆ. ಆದರೆ, ಸಿಲಿಂಡರ್ ಪೂರೈಕೆಯನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿಲ್ಲ. ಹೀಗಾದರೆ ಗ್ರಾಹಕರನ್ನು ಉಳಿಸಿಕೊಳ್ಳುವುದು ಹೇಗೆ’ ಎಂದು ಪ್ರಶ್ನಿಸಿದರು.

‘ತುಮಕೂರಿನ ವಿತರಕರೊಬ್ಬರಿಗೆ ಸಿಲಿಂಡರ್ ಪೂರೈಸಿ 14 ದಿನಗಳಾಗಿವೆ. ಸಿಲಿಂಡರ್‌ಗಾಗಿ ಕಚೇರಿ ಬಳಿ ಬರುವ ಗ್ರಾಹಕರಿಗೆ ಉತ್ತರ ಹೇಳುವುದು ಹೇಗೆ? ಮಳೆಗಾಲದಲ್ಲಿ ಪ್ರತಿವರ್ಷ ಇದೇ ರೀತಿಯ ತೊಂದರೆಯಾಗುತ್ತಿದೆ. ಗುಡ್ಡ ಕುಸಿತದ ಕಾರಣವನ್ನು ಅಧಿಕಾರಿಗಳ ಹೇಳುತ್ತಾರೆ. ಟ್ಯಾಂಕರ್‌ಗಳನ್ನೇ ನಂಬಿಕೊಳ್ಳದೆ ಪೈಪ್‌ಲೈನ್ ಮೂಲಕ ಅನಿಲ ಪೂರೈಸಲು ಬಿಪಿಸಿಎಲ್ ಮುಂದಾಗಬೇಕು’ ಎಂಬುದು ವಿತರಕರ ಒತ್ತಾಯ.

ವಾರದಲ್ಲಿ ಸಮಸ್ಯೆ ಪರಿಹಾರ

‘ಉತ್ಪಾದನೆ ಕಡಿಮೆಯಾಗಿರುವ ಕಾರಣ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಒಂದು ವಾರದಲ್ಲಿ ಸಮಸ್ಯೆ ಪರಿಹಾರವಾಗಲಿದೆ’ ಎಂದು ಬಿಪಿಸಿಎಲ್ ಪ್ರಾದೇಶಿಕ ವ್ಯವಸ್ಥಾಪಕ ಭರತ್‌ಕುಮಾರ್ ರಾಯಘಾರ್ ಸ್ಪಷ್ಟಪಡಿಸಿದರು.

‘ಕೊಚ್ಚಿ ಮತ್ತು ಮಂಗಳೂರಿನಲ್ಲಿ ಸಂಸ್ಕರಣಾ ಘಟಕಗಳಿವೆ. ಮಳೆಗಾಲದ ಕಾರಣ ಗುಡ್ಡ ಕುಸಿತದಿಂದ ಬೆಂಗಳೂರಿನ ಕಡೆಗೆ ಟ್ಯಾಂಕರ್‌ಗಳು ಬರಲು ಕಷ್ಟವಾಗುತ್ತಿದೆ. ಸಮಸ್ಯೆ ಸರಿಪಡಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT