ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆ ಬಳಿಕವೂ ಕಾಮಗಾರಿ ನಿಂತಿಲ್ಲ

ಹೆಣ್ಣೂರು ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧ
Last Updated 5 ಮಾರ್ಚ್ 2018, 20:04 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರ ಸಮೀಪದ ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್‌ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದ್ದಾರೆ. ಆದರೆ, ಇದರ ಕಾಮಗಾರಿ ಇನ್ನೂ ಮುಗಿದಿಲ್ಲ.

ರಸ್ತೆ ವಿಭಜಕ ನಿರ್ಮಾಣ, ತಡೆಗೋಡೆಗಳಿಗೆ ಗ್ರಿಲ್‌ ಅಳವಡಿಕೆ ಹಾಗೂ ಬಣ್ಣ ಬಳಿಯುವ ಕೆಲಸಗಳು ಬಾಕಿ ಇವೆ. ಸೇತುವೆಯ ಇಳಿಜಾರಿನಲ್ಲಿ ಇನ್ನೂ ಡಾಂಬರು ಹಾಕಿಲ್ಲ.

ಸೇತುವೆ ಉದ್ಘಾಟನೆ ಸಂದರ್ಭದಲ್ಲಿ ಈ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮುಖ್ಯಮಂತ್ರಿ ನಿರ್ಗಮಿಸಿದ ಅರ್ಧ ಗಂಟೆ ಬಳಿಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸೋಮವಾರ ಮಧ್ಯಾಹ್ನ 12ರವರೆಗೂ ನಿರ್ಬಂಧ ಮುಂದುವರಿದಿತ್ತು. ಈ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಬಿಡಿಎ ಅಧಿಕಾರಿಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

‘ಸೇತುವೆ ಕಾಮಗಾರಿ ಸುಮಾರು 7 ವರ್ಷಗಳಿಂದ ಕುಂಟುತ್ತಾ ಸಾಗಿತ್ತು. ಈಗ ತರಾತುರಿಯಲ್ಲಿ ಕಳಪೆ ಕಾಮಗಾರಿ ನಡೆಸಲಾಗಿದೆ. ಡಾಂಬರು ಕಿತ್ತು ಬರುತ್ತಿದೆ’ ಎಂದು ನಮ್ಮ ಚಾಲಕರ ಸಂಘದ ನಗರ ಘಟಕದ ಅಧ್ಯಕ್ಷ ರವಿ ದೂರಿದರು.

ಮೇಲ್ಸೇತುವೆ ಕಾಮಗಾರಿ ಇನ್ನೂ ಶೇ 20ರಷ್ಟು ಬಾಕಿ ಇದೆ. ಅದನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಬಿಡಿಎ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ಓಕಳಿಪುರ ಮೇಲ್ಸೇತುವೆಯೂ ಅಪೂರ್ಣ: ಓಕಳಿಪುರದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸುತ್ತಿರುವ ಅಷ್ಟಪಥಗಳ ಮೇಲ್ಸೇತುವೆ ಕಾಮಗಾರಿಯೂ ಅಪೂರ್ಣವಾಗಿದೆ. ಇದನ್ನೂ ಇತ್ತೀಚೆಗೆ ಉದ್ಘಾಟಿಸಲಾಗಿತ್ತು.

‘ಈ ಕಾಮಗಾರಿ ಆರಂಭವಾಗಿ ವರ್ಷಗಳೇ ಉರುಳಿವೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ನಗರದ ಎಲ್ಲ ಕಾಮಗಾರಿಗಳೂ ಇದೇ ವೇಗದಲ್ಲಿ ನಡೆದರೆ ಒಳ್ಳೆಯದು. ಪ್ರತಿ ಆರು ತಿಂಗಳಿಗೊಮ್ಮೆ ಚುನಾವಣೆಗಳು ಬರಲಿ ಎಂದು ನಾನು ಹಾರೈಸುತ್ತೇನೆ’ ಎಂದು ಕಾಮಾಕ್ಷಿಪಾಳ್ಯದ ರಾಘವೇಂದ್ರ ವ್ಯಂಗ್ಯವಾಡಿದರು.

‘ನಾನು ಈ ಮಾರ್ಗದ ಮೂಲಕ ನಿತ್ಯ ಬೈಕಿನಲ್ಲಿ ಸಾಗುತ್ತೇನೆ. ಓಕಳಿಪುರದ ಬಳಿ ನಿತ್ಯ ಸಂಚಾರದಟ್ಟಣೆ ಸಮಸ್ಯೆ ಎದುರಿಸಿ ಹೈರಾಣಾಗಿದ್ದೇವೆ. ಆದಷ್ಟು ಬೇಗ ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT