ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಕ್ಕಾಗಿ ಭಾಷೆ ದುರುಪಯೋಗ: ಎಸ್.ಜಿ‌.ಸಿದ್ಧರಾಮಯ್ಯ ವಿಷಾದ

ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ‌.ಸಿದ್ಧರಾಮಯ್ಯ ವಿಷಾದ
Last Updated 31 ಅಕ್ಟೋಬರ್ 2019, 4:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕಾರಣಿಗಳುಶಿಕ್ಷಣತಜ್ಞರ ಅಭಿಪ್ರಾಯ ಪಡೆಯದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಮತ ಪಡೆಯುವ ಉದ್ದೇಶದಿಂದ ಇಂಗ್ಲಿಷ್‌ ಶಾಲೆ ತೆರೆಯುವುದಾಗಿ ಹೇಳಿ, ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಮತಕ್ಕಾಗಿ ಅವರು ಭಾಷೆಯನ್ನೂ ಬಳಸಿಕೊಳ್ಳುತ್ತಿದ್ದಾರೆ’ ಎಂದು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಎಸ್.ಜಿ‌.ಸಿದ್ಧರಾಮಯ್ಯ ವಿಷಾದಿಸಿದರು.

ಕನ್ನಡ ಸಂಘರ್ಷ ಸಮಿತಿ ಹಾಗೂ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ‘ಶಾಸ್ತ್ರೀಯ ಕನ್ನಡದ ಅಸ್ಮಿತೆ ಮತ್ತು ವರ್ತಮಾನದ ತಲ್ಲಣಗಳು’ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘2014ರಿಂದ ದೇಶದಲ್ಲಿ ಹಿಂದಿ ಹೇರಿಕೆ ಹೆಚ್ಚಾಯಿತು. ಇದರ ಪರಿಣಾಮ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ.ಜನರೆಲ್ಲ ಇಂಗ್ಲಿಷ್ ಭಾಷೆಯ ಗುಲಾಮಗಿರಿಯಲ್ಲಿ ಬದುಕುತ್ತಿದ್ದಾರೆ. ಕನ್ನಡ ಕುಂದುವ ಭಾಷೆಯಲ್ಲ. ಆದರೆ, ಕನ್ನಡಿಗರ ಕೀಳರಿಮೆಯಿಂದ ಭಾಷೆ ಹಿಂಜರಿಯುತ್ತಿದೆ’ ಎಂದರು.

‘ಕನ್ನಡ ಸೇರಿ ಇತರೆ ಪ್ರಾದೇಶಿಕ ಭಾಷೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ. ಶಾಸ್ತ್ರೀಯ ಸ್ಥಾನಮಾನ ಗಳಿಸಿಕೊಂಡಿರುವ ಕನ್ನಡದ ಅಭಿವೃದ್ಧಿಗೆ ಹಣ ನೀಡಲು ಹಿಂದೇಟು‌‌ ಹಾಕಿದೆ.ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ಕೋಟಿಗಟ್ಟಲೆ ಅನುದಾನ ನೀಡುವ ಸರ್ಕಾರ ಕನ್ನಡ ಭಾಷೆಯನ್ನೇಕೆ ಕಡೆಗಣಿಸುತ್ತಿದೆ?’ ಎಂದು ಪ್ರಶ್ನಿಸಿದರು.

ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ,‘ಕನ್ನಡಕ್ಕೆ 3 ಸಾವಿರ ವರ್ಷಗಳ ಇತಿಹಾಸವಿದೆ. ಸಾಹಿತ್ಯಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಸ್ತುತ ಕನ್ನಡ ಕನ್ನಡಿಗರಿಂದ ದೂರ ಸರಿದಿದೆಯೇ ಅಥವಾ ಕನ್ನಡಿಗರು ಕನ್ನಡದಿಂದ ದೂರವಾಗುತ್ತಿದ್ದಾರಾ ಎಂಬ ಗೊಂದಲ ಎದುರಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT