ಸೋಮವಾರ, ಮಾರ್ಚ್ 30, 2020
19 °C

ರೇಷ್ಮೆಗೂಡು ಬಿಕರಿ, ರೈತರ ನೆರವಿಗೆ ಬರಲು ಸಿಎಂಗೆ ಡಿಕೆಶಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೇಷ್ಮೆಗೂಡುಗಳನ್ನು ವಿಲೇವಾರಿ ಮಾಡಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿರುವ ರಾಜ್ಯದ ರೇಷ್ಮೆ ಬೆಳೆಗಾರರು ಮತ್ತು ಪರೋಕ್ಷ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ರೇಷ್ಮೆ ಬಿಚ್ಚಾಣಿಕೆದಾರರ ನೆರವಿಗೆ ಬರಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ.

ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಮಳವಳ್ಳಿ, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಕಡೆ ರೇಷ್ಮೆ ಬೆಳೆಗಾರರು ಗೂಡುಗಳನ್ನು ಉತ್ಪಾದಿಸಿಟ್ಟಿದ್ದಾರೆ. ಆದರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್‌ಡೌನ್‌ನಿಂದಾಗಿ ರೈತರು ರೇಷ್ಮೆಗೂಡುಗಳನ್ನು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಒಂದು ಕಡೆ ಮಾರುಕಟ್ಟೆ ಬಂದ್ ಆಗಿದೆ. ಇನ್ನೊಂದೆಡೆ ರೈತರು ಮನೆಯಿಂದ ಹೊರಗೆ ಕಾಲಿಡಲು ಆಗುತ್ತಿಲ್ಲ. ಇದರಿಂದ ಉತ್ಪನ್ನ ಹಾಳಾಗುತ್ತಿದೆ. ಜತೆಗೆ ರೇಷ್ಮೆ ಬಿಚ್ಚಾಣಿಕೆದಾರರೂ ಕೆಲಸವಿಲ್ಲದೆ ದಿನನಿತ್ಯದ ಬದುಕಿಗೆ ಪರಿತಪಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವೇ ರೈತರಿಂದ ರೇಷ್ಮೆಗೂಡುಗಳನ್ನು ಸಂಗ್ರಹಿಸಲು ವ್ಯವಸ್ಥೆ ಮಾಡಬೇಕು. ಇಲ್ಲವೇ ರೈತರೇ ರೇಷ್ಮೆ ಮಾರುಕಟ್ಟೆಗಳಿಗೆ ಗೂಡುಗಳನ್ನು ತಂದು ಬಿಕರಿ ಮಾಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಇಂದಿನ ಅಗತ್ಯ ಎಂಬುದು ಸರಿ. ಆದರೆ ಅದರಿಂದ ರೈತರ ಉತ್ಪನ್ನಗಳು ನಾಶವಾಗಬಾರದು. ಹಾಗೇನಾದರೂ ಆದರೆ ಯಾರಿಗೂ ಲಾಭವಾಗದೆ ರಾಷ್ಟ್ರೀಯ ನಷ್ಟ (National Waste) ಆಗುತ್ತದೆ. ರೇಷ್ಮೆಗೂಡು ವಿಲೇವಾರಿಗೆ ರಾಜ್ಯ ಸರ್ಕಾರ ಮಾರುಕಟ್ಟೆ ಒದಗಿಸಬೇಕು. ರೇಷ್ಮೆನೂಲು ಬಿಚ್ಚಾಣಿಕೆದಾರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು