ಬುಧವಾರ, ಸೆಪ್ಟೆಂಬರ್ 28, 2022
26 °C

ಶಿವಾನಂದ ವೃತ್ತ ಮೇಲ್ಸೇತುವೆ: ಇಂದಿನಿಂದ ಪ್ರಾಯೋಗಿಕ ಸಂಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬಹುನಿರೀಕ್ಷಿತ ಶಿವಾನಂದ ಮೇಲ್ಸೇತುವೆ ಆ.15ರ ಸೋಮವಾರದಿಂದ ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಮೇಲ್ಸೇತುವೆಯ ಒಂದು ಭಾಗದ ರಸ್ತೆಯಲ್ಲಿ ಅಂದರೆ ಶೇಷಾದ್ರಿಪುರದಿಂದ ರೇಸ್‌ಕೋರ್ಸ್‌ ಕಡೆಗೆ ಸೋಮವಾರದಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಇನ್ನೊಂದು ಭಾಗದಲ್ಲಿ ಕಲ್ವರ್ಟ್‌ ಕೆಲಸ ಬಹುತೇಕ ಮುಗಿದಿದೆ. ಒಂದು ವಾರದಲ್ಲಿ ಪೂರ್ಣ ಸಿದ್ಧವಾಗಲಿದೆ. ನಂತರ ಮೇಲ್ಸೇತುವೆ ಉದ್ಘಾಟಿಸಿ, ಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಬಿಬಿಎಂಪಿಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಲೋಕೇಶ್‌ ತಿಳಿಸಿದರು.

‘ನಿರಂತರ ಮಳೆಯಿಂ‌ದ ಮೇಲ್ಸೇತುವೆ ಕಾಮಗಾರಿ ವಿಳಂಬವಾಯಿತು. ಕೆಲವು ಡ್ರೈನ್‌ಗಳ ಕೆಲಸ ‌ಬಾಕಿ ಇದ್ದು, ಅದನ್ನೂ ಇನ್ನೊಂದು ವಾರದಲ್ಲಿ ಮುಗಿಸಲಾಗುತ್ತದೆ’ ಎಂದರು.

10 ತಿಂಗಳು ಸ್ಥಗಿತ: ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ 10 ತಿಂಗಳು ಸ್ಥಗಿತಗೊಂಡಿತ್ತು. ಮೇಲುರಸ್ತೆ ಉದ್ದವನ್ನು ಕಡಿತಗೊಳಿಸಿದ್ದ ಬಿಬಿಎಂಪಿಯ ಮಾರ್ಪಡಿಸಿದ ವಿನ್ಯಾಸಕ್ಕೆ ಭಾರತೀಯ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) ತಜ್ಞರು ಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ಕಾಮಗಾರಿ ಮುಂದುವರಿಸಲು ಜುಲೈ ಮೊದಲ ವಾರ ಬಿಬಿಎಂಪಿಗೆ ಸೂಚನೆ ನೀಡಿತ್ತು.

ಮೇಲ್ಸೇತುವೆ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆಗೆ ಒಪ್ಪದ ಆಸ್ತಿ ಮಾಲೀಕರು, ಬಿಬಿಎಂಪಿಯ ಪರಿಹಾರಕ್ಕೆ ಸಮ್ಮತಿಸಿರಲಿಲ್ಲ. ಹೀಗಾಗಿ, ಅವುಗಳನ್ನು ಹೊರತುಪಡಿಸಿ ಮೇಲ್ಸೇತುವೆ ಉದ್ದ ಕಡಿತಗೊಳಿಸಿ ಕಾಮಗಾರಿ ಮುಗಿಸಲು ಬಿಬಿಎಂಪಿ ಎಂಜಿನಿಯರ್‌ಗಳು ವಿನ್ಯಾಸ ಬದಲಿಸಿದ್ದರು. ಅದು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯು 2017ರ ಅಕ್ಟೋಬರ್‌ನಲ್ಲಿ ಆರಂಭವಾಗಿತ್ತು. ಮೊದಲಿನ ಯೋಜನೆಯಂತೆ ಮೂರು ವರ್ಷಗಳ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು