ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡುಹಾರಿಸಿ ಚಿನ್ನದ ಮಳಿಗೆ ದರೋಡೆ ಯತ್ನ

‘ಸಾಮ್ರಾಟ್ ಜುವೆಲ್ಸ್’ನಲ್ಲಿ ಘಟನೆ: ಮಾಲೀಕನ ಪತ್ನಿಯ ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪ್ಯಾಲೇಸ್ ಗುಟ್ಟಹಳ್ಳಿಯ ಎರಡನೇ ಮುಖ್ಯರಸ್ತೆಯಲ್ಲಿರುವ ‘ಸಾಮ್ರಾಟ್ ಜುವೆಲ್ಸ್’ ಎಂಬ ಚಿನ್ನದ ಮಳಿಗೆಗೆ ಗ್ರಾಹಕರ ಸೋಗಿನಲ್ಲಿ ಬಂದ ಮೂವರು ದರೋಡೆಕೋರರು ಗುಂಡು ಹಾರಿಸಿ ಪರಾರಿಯಾದ ಘಟನೆ ಬುಧವಾರ ಮಧ್ಯಾಹ್ನ 2.40ರ ಸುಮಾರಿಗೆ ನಡೆದಿದೆ.

ಗಾಯತ್ರಿನಗರದ ನಿವಾಸಿ ಆಶಿಷ್‌ ಕುಮಾರ್ ಜೈನ್ (42) ಎಂಬುವವರ ಮಾಲೀಕತ್ವದ ಚಿನ್ನದ ಮಳಿಗೆಯಲ್ಲಿ ಈ ಘಟನೆ ನಡೆದಿದೆ. ಆಶಿಷ್‌ ಅವರ ಪತ್ನಿ ರಾಖಿ (40) ಅವರ ಸಮಯಪ್ರಜ್ಞೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ ಎಂದು ಪೊಲೀಸರು ತಿಳಿಸಿದರು.

ಚಿನ್ನ ಖರೀದಿಸುವ ನೆಪದಲ್ಲಿ ಮಳಿಗೆಯ ಬಳಿಗೆ ಬಂದ ಮೂವರ ಪೈಕಿ ಒಬ್ಬ ಹೆಲ್ಮೆಟ್ ಧರಿಸಿ ಹೊರಗಡೆ ನಿಂತಿದ್ದರೆ, ಇತರ ಇಬ್ಬರು ಮಳಿಗೆಯ ಒಳಗೆ ಹೋಗಿದ್ದರು. ಒಳಗೆ ಹೋದವರು, ಅಂಗಡಿ ಮಾಲೀಕ ಆಶಿಷ್ ಅವರಲ್ಲಿ ಸಚಿನ್‌ ತೆಂಡೂಲ್ಕರ್ ಸರ ತೋರಿಸುವಂತೆ ಹೇಳಿದ್ದರು. ಬಂದವರನ್ನು ಅನುಮಾನದಿಂದಲೇ ನೋಡಿದ ಆಶಿಷ್‌ ಅವರು ಸರ ತೋರಿಸಬೇಕು ಎನ್ನುವಷ್ಟರಲ್ಲಿ ಮೂವರ ಪೈಕಿ ಒಬ್ಬ ನಾಡ ಪಿಸ್ತೂಲ್‍ ತೋರಿಸಿ ಮಳಿಗೆ ಒಳಗೆ ಒಂದು ಸುತ್ತು ಗುಂಡು ಹಾರಿಸಿದ್ದ.

ಈ ವೇಳೆ, ದಿಕ್ಕು ತೋಚದಂತಾದ ಆಶಿಷ್‌ ಅವರ ಪತ್ನಿ ರಾಖಿ, ತಾನು ಕುಳಿತಿದ್ದ ಕುರ್ಚಿಯನ್ನು ಗುಂಡು ಹಾರಿಸಿದ ದರೋಡೆಕೋರನ ಮೇಲೆ ಎಸೆದು ಜೋರಾಗಿ ಕಿರುಚಿದ್ದಾರೆ. ಅದಕ್ಕೆ ಗಾಬರಿಗೊಂಡ ದರೋಡೆಕೋರರು, ಸ್ಥಳೀಯರ ಕೈಗೆ ಸಿಕ್ಕಿ ಬೀಳಬಹುದು ಎಂಬ ಆತಂಕದಿಂದ ಮಳಿಗೆಯಿಂದ ಹೊರಬಂದು ಮುಖ್ಯರಸ್ತೆಯಲ್ಲೇ ಓಡಿ ತಲೆಮರೆಸಿಕೊಂಡಿದ್ದಾರೆ.

ಮಳಿಗೆ ಒಳಗಿನಿಂದ ಮಹಿಳೆಯ ಚೀರಾಟ ಮತ್ತು ಗುಂಡಿನ ಸದ್ದು ಕೇಳಿಸಿಕೊಂಡ ಸ್ಥಳೀಯರು ಕೆಲವೇ ಕ್ಷಣಗಳಲ್ಲಿ ಮಳಿಗೆ ಮುಂಭಾಗದಲ್ಲಿ ಜಮಾಯಿಸಿದರು. ಆಶಿಷ್‌ ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಮಳಿಗೆಗೆ ಒಳಗೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದರೋಡೆಕೋರರ ಕೃತ್ಯ ಸೆರೆಯಾಗಿದೆ. ಇಬ್ಬರು ಆರೋಪಿಗಳ ಮುಖ ಚಹರೆ ಕೂಡಾ ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್, ‘ನಾಲ್ಕು ವರ್ಷಗಳಿಂದ ಸಾಮ್ರಾಟ್ ಜುವೆಲ್ಸ್ ಮಳಿಗೆಯಿದೆ. ದರೋಡೆಕೋರರು ಚಿನ್ನದ ಸರ ಕೇಳಿದ್ದಾರೆ. ಆದರೆ, ಅವರು ಬಳಸಿದ ಭಾಷೆ ಕನ್ನಡವೇ ಅಥವಾ ಹಿಂದಿಯೇ ಎಂಬುವುದು ಗೊತ್ತಾಗಿಲ್ಲ. ಗುಂಡು ಹಾರಿಸಿದ ತಕ್ಷಣ ಆಶಿಷ್‌ ಅವರ ಪತ್ನಿ ರಾಖಿ ಅವರು ಕುರ್ಚಿಯನ್ನು ಎಸೆದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅವರ ಸಮಯಪ್ರಜ್ಞೆ ಮೆಚ್ಚಲೇಬೇಕು. ರಾಖಿ ಕುರ್ಚಿ ಎಸೆದ ತಕ್ಷಣ ಆಶಿಷ್‌ ಅವರು ಕ್ಯಾಷ್‌ ಕೌಂಟರ್‍ನಿಂದ ಹಾರಿಬಂದು ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ’ ಎಂದರು.

‘ದರೋಡೆ ನಡೆಸಲು ಯತ್ನಿಸಿದವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಸಿಸಿಬಿ ಡಿಸಿಪಿ ಸಂದೀಪ್ ಪಾಟೀಲ ಹೇಳಿದರು.

‘ಆ ಒಂದು ಕ್ಷಣ ದಿಕ್ಕೇ ತೋಚಲಿಲ್ಲ’

‘ಗ್ರಾಹಕರ ಸೋಗಿನಲ್ಲಿ ಮೂವರೂ ಅಂಗಡಿಯ ಒಳಗೆ ಬಂದಿದ್ದರು. ಪತಿ ಸರ ತೋರಿಸಲು ಮುಂದಾಗುತ್ತಿದ್ದಂತೆ ಪಿಸ್ತೂಲ್ ತೋರಿಸಿ, ನಮ್ಮನ್ನು ಬೆದರಿಸಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು. ಗುಂಡು ಮಳಿಗೆಯ ಒಳಗಿನ ಗೋಡೆಗೆ ತಾಗಿತ್ತು. ಆ ಕ್ಷಣ ನನಗೆ ದಿಕ್ಕೇ ತೋಚಲಿಲ್ಲ’ ಎಂದು ಪೊಲೀಸರಿಗೆ ರಾಖಿ ಹೇಳಿಕೆ ನೀಡಿದ್ದಾರೆ. ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಬೇಕು ಎಂದುಕೊಂಡು ತಕ್ಷಣವೇ ಕುಳಿತಿದ್ದ ಕುರ್ಚಿಯನ್ನು ಎತ್ತಿ ಗುಂಡು ಹಾರಿಸಿದವನ ಮೇಲೆ ಎಸೆದು ಕಿರುಚಿದೆ. ಅಷ್ಟರಲ್ಲಿ ಅವರೆಲ್ಲ ಓಡಿ ಪರಾರಿಯಾದರು’ ಎಂದರು.

ಬೈಕ್‌ನಲ್ಲಿ ಬಂದಿದ್ದರೇ?

ಮಳಿಗೆ ಮುಂಭಾಗದಲ್ಲಿ ಕಪ್ಪು ಪಲ್ಸರ್ ಬೈಕ್ ನಿಂತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದರೋಡೆಕೋರರು ಇದೇ ಬೈಕ್‌ನಲ್ಲಿ ಬಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗುಂಡು ಹಾರಿಸುವ ವೇಳೆ ಪಿಸ್ತೂಲ್‍ನ ಕಾಟ್ರೋಜ್ ಕೆಳಗೆ ಬಿದ್ದಿದೆ. ಅದನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

‘ಮಾಹಿತಿ ಗೊತ್ತಿದ್ದವರಿಂದಲೇ ಕೃತ್ಯ’

‘ಆಶಿಷ್‌ ಅವರ ಪತ್ನಿ ರಾಖಿ ಮತ್ತು ಅವರ ಪೋಷಕರು ಕೆಲವು ವರ್ಷಗಳಿಂದ ಚಿನ್ನದ ಮಳಿಗೆ ನಡೆಸುತ್ತಿದ್ದಾರೆ. ಕೆಲಸಕ್ಕೆ ಯಾರನ್ನೂ ನೇಮಿಸಿಕೊಂಡಿಲ್ಲ. ಕೆಲವು ದಿನಗಳಿಂದ ಆಶಿಷ್ ಮತ್ತು ಅವರ ಪತ್ನಿ ಮಾತ್ರ ಅಂಗಡಿಯಲ್ಲಿ ಇರುತ್ತಿದ್ದರು. ಈ ಮಾಹಿತಿ ಗೊತ್ತಿದ್ದವರೇ ದರೋಡೆ ನಡೆಸಲು ಯತ್ನಿಸಿರಬೇಕು’ ಎಂದು ಆಶಿಷ್‌ ಅವರ ಸ್ನೇಹಿತ, ಸಮೀಪದಲ್ಲೇ ಚಿನ್ನದಂಗಡಿ ಹೊಂದಿರುವ ಜುಗಲ್ ಹೇಳಿದರು.

*ಸ್ಥಳದಲ್ಲಿ ಪಿಸ್ತೂಲ್‍ನ ಒಂದು ಮ್ಯಾಗ್ಸಿಸ್ ಪತ್ತೆಯಾಗಿದೆ. ಆರೋಪಿಗಳ ಸುಳಿವು ಕೂಡಾ ಸಿಕ್ಕಿದೆ. ಆದಷ್ಟು ಬೇಗ ಬಂಧಿಸುತ್ತೇವೆ

-ಭಾಸ್ಕರ್‌ ರಾವ್‌, ಪೊಲೀಸ್‌ ಕಮಿಷನರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT