ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ದಿನ ಕಳೆದರೂ ಮುಂದುವರಿದ ಪ್ರತಿಭಟನೆ

ಗ್ರಾಮೀಣ ಅಂಚೆ ನೌಕರರ ಬೇಡಿಕೆ ಈಡೇರಿಸಲು ಆಗ್ರಹ
Last Updated 1 ಜೂನ್ 2018, 12:37 IST
ಅಕ್ಷರ ಗಾತ್ರ

ಶೃಂಗೇರಿ: ಅಂಚೆ ಇಲಾಖೆಯ ದಿನಗೂಲಿ ವ್ಯವಸ್ಥೆಯ ಇಲಾಖೇತರ ನೌಕರರು ಕಮಲೇಶ್ಚಂದ್ರ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಿ ನಡೆಸುತ್ತಿರುವ ಮುಷ್ಕರವು ಹತ್ತು ದಿನಗಳು ಕಳೆದರೂ ಇನ್ನೂ ಯಾವುದೇ ಫಲಪ್ರದ ಮಾತುಕತೆ ಆಗದಿರುವುದಕ್ಕೆ ಸ್ಥಳೀಯ ಗ್ರಾಮೀಣ ಅಂಚೆ ನೌಕರರ ಸಂಘಟನೆಯ ಸಂಚಾಲಕ ಗಣೇಶ್ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯ ಅಂಚೆ ಕಚೇರಿ ಮುಂಭಾಗದಲ್ಲಿ ಗುರುವಾರ ನಡೆದ ಪ್ರತಿಭಟನಾ ಕಾರ್ಯಕ್ರಮದ ನಂತರ ಮಾಧ್ಯಮದವರ ಜತೆ ಮಾತನಾಡಿದರು.

ಇಲಾಖೆಯ ಕಾಯಂ ನೌಕಕರಿಗೆ ಸಮನಾಗಿ ನಾವು ಕೆಲಸ ಮಾಡುತ್ತಿದ್ದರೂ ನಮಗೆ ನಿಕೃಷ್ಟ ಸಂಭಾವನೆ ನೀಡಿ, ಉದ್ಯೋಗ ಭದ್ರತೆ, ವಿಮೆ, ಪಿಂಚಣಿ, ಮೂಲ ಸೌಕರ್ಯ ಮತ್ತಿತರೆ ಯಾವುದೇ ಸೌಲಭ್ಯಗಳನ್ನು ಇಲಾಖೆಯು ನೀಡುತ್ತಿಲ್ಲ. ನಮ್ಮ ಹಕ್ಕುಗಳ ಈಡೇರಿಕೆಗಾಗಿ ನಾವು ಈ ಮೊದಲು ಮುಷ್ಕರ ಮಾಡಿದ್ದಾಗ ಪರಿಶೀಲಿಸುವ ಭರವಸೆಯನ್ನು ನೀಡಲಾಗಿತ್ತು. ಆದರೆ, ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದು ಹೋಗಿವೆ ಎಂದು ಹೇಳಿದರು.

ಈಗ ಮುಷ್ಕರದಿಂದಾಗಿ ಅಂಚೆ, ಪಾರ್ಸೆಲ್ ಬಟವಾಡೆಗಳು ಸ್ಥಗಿತಗೊಂಡು ಕಚೇರಿಯಲ್ಲಿ ಇವು ದೊಡ್ಡ ರಾಶಿಯಾಗಿ ಕೊಳೆಯುತ್ತಿವೆ. ಕೇಂದ್ರ ಸರ್ಕಾರ ಹಾಗೂ ಕ್ಷೇತ್ರದ ಶಾಸಕರು ಈ ಕೂಡಲೇ ನಮ್ಮ ಸಂಘಟನೆಯ ನಾಯಕರೊಂದಿಗೆ ಮಾತುಕತೆ ನಡೆಸಿ, ಮಾನವೀಯ ನೆಲೆಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕು’ ಎಂದು ಗಣೇಶ್ ಒತ್ತಾಯಿಸಿದರು.

ಪ್ರತಿಭಟನಾ ಕಾರ್ಯಕ್ರಮದ ನೇತೃತ್ವವನ್ನು ಬಾಲಕೃಷ್ಣ, ಮಂಜುನಾಥ, ರಾಘವೇಂದ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT