ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಿರುನಾಟಕೋತ್ಸವ: ಅತ್ಯುತ್ತಮ ನಾಟಕ ಪ್ರಶಸ್ತಿ ಗೆದ್ದ ‘ವಿದಗ್ಧೆ’

ಅಂತಿಮ ಸ್ಪರ್ಧೆಯಲ್ಲಿ 6 ನಾಟಕ ಪ್ರದರ್ಶನ
Last Updated 15 ಮೇ 2022, 20:08 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಭಾನುವಾರ ನಡೆದ ‘ಬೆಂಗಳೂರು ಕಿರುನಾಟಕೋತ್ಸವ’ದ (ಬಿಎಸ್‌ಪಿಎಫ್‌) ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬೆಂಗಳೂರು ಥಿಯೇಟರ್ ಎನ್ಸೆಂಬಲ್‌ ತಂಡದ ‘ವಿದಗ್ಧೆ’ ನಾಟಕ ‘ಅತ್ಯುತ್ತಮ ನಾಟಕ ಪ್ರಶಸ್ತಿ’ ಮುಡಿಗೇರಿಸಿಕೊಂಡಿತು.

‘ಪ್ರಜಾವಾಣಿ’ ಸಹಯೋಗದಲ್ಲಿ ಹಾಗೂ ಪೆಂಟಗಾನ್‌ ಸ್ಪೇಸ್‌ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಒಟ್ಟು ಆರು ನಾಟಕಗಳು ಪ್ರದರ್ಶನಗೊಂಡವು. ಸ್ಪರ್ಧೆಯ ಮೊದಲ ಹಂತದಲ್ಲಿ ಭಾಗವಹಿಸಿದ್ದ 15 ತಂಡಗಳ ಪೈಕಿ ಆರು ನಾಟಕಗಳು ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾಗಿದ್ದವು.

ಅಭಿಮನ್ಯು ಭೂಪತಿ ನಿರ್ದೇಶನ ಮತ್ತು ರೋಹಿತ್ ರಚನೆಯಲ್ಲಿ ಮೂಡಿಬಂದ ‘ವಿದಗ್ಧೆ’ ನಾಟಕದ ಮೂಲಕ, ಮಾನಸಿಕವಾಗಿ ಹೆಂಡತಿಯಿಂದ ದೂರ ಉಳಿಯಲು ಪುಸ್ತಕ ಲೋಕದಲ್ಲಿ ಮುಳುಗಿರುವ ಯುವ ಲೇಖಕನೊಬ್ಬನ ಚಿತ್ರಣವನ್ನು ಕಟ್ಟಿಕೊಟ್ಟಿತು. ತಾನು ರಚಿಸಿದ ಕಥೆಯಲ್ಲಿನ ‘ಮಹಾಪುರುಷ’ರ ಪತ್ನಿಯರ ಪಾತ್ರಗಳೇ ಜೀವ ತಾಳಿ, ತಮ್ಮ ವೇದನೆಗಳನ್ನು ತಿಳಿಸುತ್ತಾ ಲೇಖಕನನ್ನು ಪ್ರಶ್ನಿಸುತ್ತವೆ. ಪಿ.ಡಿ.ಸತೀಶ್ ಚಂದ್ರ ನಿರ್ದೇಶನದಲ್ಲಿ ‘ಪ್ರಕಸಂ’ ತಂಡ ಪ್ರದರ್ಶಿಸಿದ ‘ಸಹನ ಮೂರ್ತಿ’ ನಾಟಕದ ಹಾಸ್ಯ ಪ್ರಸಂಗಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.

ಪೌರಕಾರ್ಮಿಕರ ಸಹನೆ, ನೋವು, ಸಂಕಟಗಳನ್ನು ತೆರೆದಿಟ್ಟ ರಂಗ ಚಿರಂತನ ತಂಡದ ‘ನಗರ ಪೂಜೆ’ ನಾಟಕವು ಸಭಾಂಗಣದಲ್ಲಿ ನೆರೆದಿದ್ದವರನ್ನು ಮೂಕವಿಸ್ಮಿತರನ್ನಾಗಿಮಾಡಿತು.

ಕಲಾಕದಂಬ ಆರ್ಟ್ ಸೆಂಟರ್ ಪ್ರಸ್ತುತ ಪಡಿಸಿದ ‘ಕ್ಷಮ’ ನಾಟಕವು ತಮ್ಮ ಖುಷಿಯನ್ನು ತ್ಯಾಗ ಮಾಡಿ ತಾಳ್ಮೆಯನ್ನೇ ಮನೆ ಮಾಡಿಕೊಳ್ಳುವ ಮಹಿಳೆಯರ ಬದುಕನ್ನು ಚಿತ್ರಿಸಿತು.

ಅಂತರಂಗ ಬಹಿರಂಗ ತಂಡದ ‘ಸಾಕ್ಷಾತ್ಕಾರ’ ನಾಟಕ ಸಹಾಯ ಗುಣವನ್ನೇ ಜೀವವಾಗಿಸಿಕೊಂಡಿದ್ದ ಕುಟುಂಬವೊಂದರ ಕಥೆಯನ್ನು ತೆರೆದಿಟ್ಟಿತು. ಮಣ್ಣು ತಂಡದ ‘ಅನಾಹುತ’ ನಾಟಕವು ಸಹನೆ ಮತ್ತು ಅಧಿಕಾರದ ನಡುವಿನ ಸಂಬಂಧವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿತು.

ತೀರ್ಪುಗಾರರು ಹಾಗೂ ಪ್ರೇಕ್ಷಕರಿಂದ ಆಯ್ಕೆಯಾದ ಎರಡು ನಾಟಕಗಳಿಗೆ ₹10 ಸಾವಿರ ನಗದು ಒಳಗೊಂಡಅತ್ಯುತ್ತಮ ನಾಟಕ ಪ್ರಶಸ್ತಿ, ತಲಾ ₹3 ಸಾವಿರ ನಗದು ಒಳಗೊಂಡ ‘ಅತ್ಯುತ್ತಮ ವಿನ್ಯಾಸ’ ಪ್ರಶಸ್ತಿ ಹಾಗೂ ‘ಅತ್ಯುತ್ತಮ ಕಥೆ’ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಲೇಖಕಿ ಎಂ.ಎಸ್.ವಿದ್ಯಾ, ರಂಗ ನಿರ್ದೇಶಕ ಶ್ರೀಪಾದ ಭಟ್, ಬರಹಗಾರ ಅಭಿಷೇಕ್ ಅಯ್ಯಂಗಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ಅತಿಥಿಗಳಾಗಿ ಪೆಂಟಗಾನ್ ಸ್ಪೇಸ್‌ ಸಂಸ್ಥೆಯ ಸಂಸ್ಥಾಪಕ ರವಿಶಂಕರ್ ಆರಾಧ್ಯ, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ನಟಿ ಸುಮನ್ ನಗರ್ಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬೆಂಗಳೂರು ಕಿರುನಾಟಕೋತ್ಸವ ಪ್ರಶಸ್ತಿಗಳು

* ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ)–ಕ್ಷಮ (ಕಲಾ ಕದಂಬ ಆರ್ಟ್‌ ಸೆಂಟರ್)

* ‘ಸಂಚಾರಿ ವಿಜಯ್’ ಗೌರವಾರ್ಥ ಅತ್ಯುತ್ತಮ ನಟ–ಶ್ರೀಹರಿ ಕಶ್ಯಪ್ (ಸಹನ ಮೂರ್ತಿ)

* ಅತ್ಯುತ್ತಮ ನಟಿ–ಪ್ರತ್ಯಕ್ಷ (ನಗರ ಪೂಜೆ)

* ಅತ್ಯುತ್ತಮ ವಿನ್ಯಾಸ–ಪಿ.ಡಿ.ಸತೀಶ್‌ ಚಂದ್ರ (ಸಹನ ಮೂರ್ತಿ)

* ಅತ್ಯುತ್ತಮ ನಿರ್ದೇಶನ–ತೇಜಸ್‌ ಗೌಡ (ಕ್ಷಮ)

* ಅತ್ಯುತ್ತಮ ಕಥೆ (ಸ್ವರಚಿತ)–ಬೇಲೂರು ರಘುನಂದನ್ (ನಗರ ಪೂಜೆ)

* ಅತ್ಯುತ್ತಮ ಭಿತ್ತಿಚಿತ್ರ ವಿನ್ಯಾಸ–ನಿಹಾಲ್‌ ರಾಜ್ (ವಿದಗ್ಧೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT