ವಿಶೇಷ ಜಿಲ್ಲಾಧಿಕಾರಿಗೆ ಲೋಕಾಯುಕ್ತ ನೋಟಿಸ್‌

7
ಬೆಂಗಳೂರು ಮನವರ್ತಿ ಕಾವಲ್‌ ಜಮೀನು ಕಬಳಿಕೆ ಪ್ರಕರಣ

ವಿಶೇಷ ಜಿಲ್ಲಾಧಿಕಾರಿಗೆ ಲೋಕಾಯುಕ್ತ ನೋಟಿಸ್‌

Published:
Updated:

ಬೆಂಗಳೂರು: ದಕ್ಷಿಣ ತಾಲ್ಲೂಕು ಮನವರ್ತಿ ಕಾವಲ್‌ನ 180 ಎಕರೆ ಸರ್ಕಾರಿ ಜಮೀನು ಕಬಳಿಸಿರುವ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದ್ದಾರೆ ಎನ್ನಲಾದ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗೆ ಲೋಕಾಯುಕ್ತ ನೋಟಿಸ್‌ ಜಾರಿಗೊಳಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ದೂರು ಆಧರಿಸಿ ಸ್ವಯಂಪ್ರೇರಣೆಯಿಂದ ವಿಚಾರಣೆ ಕೈಗೆತ್ತಿಕೊಂಡಿರುವ ಲೋಕಾಯುಕ್ತ, ಸರ್ವೆ ನಂಬರ್‌ 137ರ 180ಎಕರೆ ಸರ್ಕಾರಿ ಜಮೀನು ಮರಳಿ ಸ್ವಾಧೀನಪಡಿಸಿಕೊಳ್ಳಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಳಿ ಮೂರು ನೋಟಿಸ್‌ ನೀಡಿತ್ತು.

ಆದರೆ, ವಿಶೇಷ ಜಿಲ್ಲಾಧಿಕಾರಿ ಲೋಕಾಯುಕ್ತ ಮುಂದೆ ಹಾಜರಾಗಿಲ್ಲ; ವರದಿಯನ್ನೂ ನೀಡಿಲ್ಲ. ಈ ಜಮೀನು ಕಬಳಿಸಿರುವವರ ಹೆಸರಿಗೇ ದಾಖಲೆ ತಿದ್ದಲಾಗಿದೆ ಎಂದು ಆರೋಪಿಸಿ 2015ರಲ್ಲಿ ದೂರು ದಾಖಲಾಗಿದೆ.

ವಿಶೇಷ ಜಿಲ್ಲಾಧಿಕಾರಿ ಪರ ಅಧಿಕಾರಿಯೊಬ್ಬರು ಜನವರಿ 25ರಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮುಂದೆ ಹಾಜರಾಗಿದ್ದರು. ಜುಲೈ 31ರೊಳಗೆ ಜಮೀನು ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ಅವರು ಅಧಿಕಾರಿಗೆ ಆದೇಶಿಸಿದ್ದರು. ಇದಕ್ಕೂ ಮೊದಲು ಮೇ 30ರೊಳಗೆ ವರದಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿಗೂ ಸೂಚಿಸಿದ್ದರು. ಈ ಆದೇಶಗಳನ್ನು ಅವರು ನಿರ್ಲಕ್ಷಿಸಿದ್ದರಿಂದ ನೋಟಿಸ್‌ ನೀಡಲಾಗಿದೆ.

ಈ ಬಗ್ಗೆ ವಿಶೇಷ ಜಿಲ್ಲಾಧಿಕಾರಿ ವಿವರಣೆ ನೀಡಬೇಕು. ಅಲ್ಲದೆ, ಮೊದಲಿನ ಆದೇಶವನ್ನು ಪಾಲಿಸಬೇಕು ಎಂದು ಲೋಕಾಯುಕ್ತರು ನಿರ್ದೇಶಿಸಿದ್ದಾರೆ. ವಿವಿಧ ಕೋರ್ಟ್‌ಗಳ ಸ್ಥಿತಿಗತಿ ಕುರಿತು ಮಾಹಿತಿ ಕೊಡಿ. ಈ ಪ್ರಕರಣವನ್ನು ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಬಹುದೇ ಎಂದೂ ಕೇಳಿದ್ದಾರೆ.

ಈ ಸಂಬಂಧ ಈಗಾಗಲೇ ಹಲವು ಸುತ್ತಿನ ಕಾನೂನು ಹೋರಾಟ ನಡೆದಿದ್ದು, ಅರ್ಜಿದಾರರಿಂದ ಜಮೀನು ಬಿಡಿಸಿಕೊಳ್ಳದಂತೆ ಸಿವಿಲ್‌ ನ್ಯಾಯಾಲಯವು ಸರ್ಕಾರ ಮತ್ತು ಅಧಿಕಾರಿಗಳನ್ನು ನಿರ್ಬಂಧಿಸಿದೆ.

180 ಎಕರೆ ಜಮೀನನ್ನು ಒಂದೇ ಕುಟುಂಬದ ಸದಸ್ಯರು 18 ಮಂದಿ ರೈತರಿಂದ 1968 ಮತ್ತು 1969ರಲ್ಲಿ ಖರೀದಿಸಿದ್ದಾರೆ. ಸರ್ಕಾರ ಈ ಜಮೀನನ್ನು ಬೇರೆಯವರಿಗೆ ಹಸ್ತಾಂತರ ಮಾಡಬಾರದು ಎಂಬ ಷರತ್ತಿನ ಮೇಲೆ ರೈತರಿಗೆ ಮಂಜೂರು ಮಾಡಿತ್ತು.   

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !