ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿಗಾಗಿ ಒಗ್ಗಟ್ಟಿನಿಂದ ಹೋರಾಡೋಣ: ಯಾದವಾನಂದ ಸ್ವಾಮೀಜಿ

‘ಶ್ರೀಕೃಷ್ಣಜನ್ಮಾಷ್ಟಮಿ’ ಕಾರ್ಯಕ್ರಮದಲ್ಲಿ ಯಾದವಾನಂದ ಸ್ವಾಮೀಜಿ
Published : 27 ಆಗಸ್ಟ್ 2024, 0:11 IST
Last Updated : 27 ಆಗಸ್ಟ್ 2024, 0:11 IST
ಫಾಲೋ ಮಾಡಿ
Comments

ಬೆಂಗಳೂರು: ‘ನಮ್ಮ ಸಮುದಾಯದ ಅಭಿವೃದ್ಧಿಗೆ ಮೀಸಲಾತಿ ಅಗತ್ಯವಿದ್ದು, ಎಲ್ಲರೂ ಒಗ್ಗಟ್ಟಿನಿಂದ ಮೀಸಲಾತಿಗಾಗಿ ಹೋರಾಟ ಮಾಡೋಣ’ ಎಂದು ಚಿತ್ರದುರ್ಗದ ಅಖಿಲ ಭಾರತ ಶ್ರೀಕೃಷ್ಣ ಯಾದವ ಮಹಾಸಂಸ್ಥಾನ ಮಠದ ಯಾದವಾನಂದ ಸ್ವಾಮೀಜಿ ಕರೆ ನೀಡಿದರು.

ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಿಟ್ಟು, ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಹೋರಾಡಲು ಒಗ್ಗೂಡಬೇಕು’ ಎಂದು ಅವರು ಹೇಳಿದರು.

ಪುರಾಣಗಳಲ್ಲಿ ಕೃಷ್ಣನ ಕುರಿತು ಉಪನ್ಯಾಸ ನೀಡಿದ ಚಿಂತಕ ಬಂಜಗೆರೆ ಜಯಪ್ರಕಾಶ್, ‘ದೇವರನ್ನು ಜನಸಾಮಾನ್ಯರ ಬಳಿಗೆ ಕರೆದೊಯ್ದು, ಪೂಜೆ– ಆಚರಣೆಗಳನ್ನು ಸರಳೀಕರಿಸಿ, ದೇವರು ಭಕ್ತವತ್ಸಲ ಎಂದು ಸಾರಿದವನು ಶ್ರೀಕೃಷ್ಣ’ ಎಂದು ಪ್ರತಿಪಾದಿಸಿದರು.

‘ಭಾಗವತ ಪುರಾಣದ ಪ್ರಕಾರ ಕೃಷ್ಣನಿಗೆ ಮೇಲು–ಕೀಳಿನ ಮೇಲೆ ನಂಬಿಕೆ ಇರಲಿಲ್ಲ. ಸಾಮಾನ್ಯರು, ಬಡವರೂ ನಿರ್ಮಲ ಭಕ್ತಿಯನ್ನು ಹೊಂದಿದ್ದರೆ ಅವರಿಗೆ ಒಲಿಯುತ್ತಿದ್ದ. ಕೃಷ್ಣ, ದೀನರ ಮತ್ತು ತುಳಿತಕ್ಕೊಳಗಾದವರ ದೇವರು. ಕುಚೇಲ, ವಿದುರನ ಕಥೆಗಳು ಇದಕ್ಕೆ ಉದಾಹರಣೆಗಳು’ ಎಂದು ವಿವರಿಸಿದರು.

‘ಹುಟ್ಟು, ಜ್ಞಾನ, ತಾನು ಮಾಡುವ ಆಚರಣೆಗಳು ಯಾವುದರಿಂದಲೂ ನನ್ನನ್ನು ತಲುಪಲು ಸಾಧ್ಯವಿಲ್ಲ. ಶ್ರೀಮಂತಿಕೆ, ಬೆಲೆ ಬಾಳುವ ಅರ್ಚನೆಗಳೂ ಬೇಕಾಗಿಲ್ಲ. ಸರಳತೆ ಮತ್ತು ನಂಬಿಕೆಯೇ ಸಾಕು – ಇವೆಲ್ಲ ಕೃಷ್ಣ ನೀಡಿದ ಸಂದೇಶಗಳು’ ಎಂದು ಹೇಳಿದರು.

‘ಶ್ರೀಕೃಷ್ಣ ವರ್ಣಾಶ್ರಮ, ಧರ್ಮ ಪ್ರತಿಪಾದಕ ಎನ್ನುವುದು ವಿವಾದಾಸ್ಪದ. ಆ ವರ್ಣಾಶ್ರಮ, ಧರ್ಮ ಪ್ರತಿಪಾದಕ ಎನ್ನುವ ಚೌಕಟ್ಟಿನಿಂದ ಅವನನ್ನು ಹೊರತರುವುದೇ ಕೃಷ್ಣನಿಗೆ ನಾವು ತೋರಿಸುವ ಗೌರವ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ನಾಗರಾಜ್ ಯಾದವ್, ಡಿ.ಟಿ.ಶ್ರೀನಿವಾಸ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣೀದೇವಿ ಮಾಲಗತ್ತಿ ಸ್ವಾಗತಿಸಿದರು. ರಂಗ ವಿಜಯ ಟ್ರಸ್ಟ್‌ನವರು  ಶ್ರೀಕೃಷ್ಣನ ಕುರಿತ ಗೀತೆಗಾಯನ ಪ್ರಸ್ತುತಪಡಿಸಿದರು. 

ಸಭಾ ಕಾರ್ಯಕ್ರಮಕ್ಕೂ ಮುನ್ನ ಎಸ್‌.ಪಿ.ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಕಲಾಕ್ಷೇತ್ರದವರೆಗೆ ಶ್ರೀಕೃಷ್ಣನ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ವಿವಿಧ ಜಾನಪದ ಕಲಾ ತಂಡಗಳು, ಗಣ್ಯರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT