ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಹರ್ಷ ಆತ್ಮಹತ್ಯೆ: ತನಿಖೆಗೆ ಸಹಕಾರ: ಅಮೃತಾ ವಿದ್ಯಾಪೀಠದ ಆಡಳಿತ ಮಂಡಳಿ ವಿವರಣೆ

Last Updated 24 ಅಕ್ಟೋಬರ್ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ‘ಅಂತಿಮ ವರ್ಷದ ಬಿ.ಟೆಕ್‌ ಓದುತ್ತಿದ್ದ ಶ್ರೀಹರ್ಷ ಎಂಬ ವಿದ್ಯಾರ್ಥಿ ಕಾಲೇಜಿನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿ ಆಧಾರಹಿತ ವಿಷಯಗಳು ಹರಡುತ್ತಿವೆ. ಇಂತಹ ಅಪಪ್ರಚಾರಗಳ ಹಿಂದೆ ಬಾಹ್ಯಶಕ್ತಿಗಳ ಕೈವಾಡವಿದೆ’ ಎಂದು ಕಸನವನಹಳ್ಳಿಯಲ್ಲಿರುವ ಅಮೃತಾ ವಿಶ್ವ ವಿದ್ಯಾಪೀಠದ ಆಡಳಿತ ಮಂಡಳಿ ಆರೋಪಿಸಿದೆ.

‘ಕಾಲೇಜಿನ ಹಾಸ್ಟೆಲ್‌ನ ಒಂದು ಭಾಗದಲ್ಲಿ ವಿದ್ಯುತ್ ವ್ಯತ್ಯಯದಿಂದಾಗಿ ಸೆ. 23ರಂದು ನೀರು ಪೂರೈಕೆ ಸ್ಥಗಿತಗೊಂಡಿತ್ತು. ಒಂದೇ ದಿನದಲ್ಲಿ ಈ ಸಮಸ್ಯೆ ಪರಿಹಾರವಾಗಿತ್ತು. ಆದರೂ ಕಿಡಿಗೇಡಿಗಳು ಹಾಸ್ಟೆಲ್‌ನಲ್ಲಿ ನೆಲೆಸಿದ್ದ ವಿದ್ಯಾರ್ಥಿಗಳ ಜೊತೆ ಸೇರಿ ಕಾಲೇಜಿನ ಬಸ್‌, ಎಲೆಕ್ಟ್ರಿಕಲ್ ವ್ಯವಸ್ಥೆಗೆ ಹಾನಿ ಉಂಟು ಮಾಡಿದ್ದರು. ಈ ಬಗ್ಗೆ ವಿಚಾರಣೆಗೆ ಏಳು ಜನರ ಸಮಿತಿ ರಚಿಸಲಾಗಿತ್ತು. ಸಾಕ್ಷ್ಯಗಳ ಆಧಾರದಲ್ಲಿ 19 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಈ ಪೈಕಿ ಶ್ರೀಹರ್ಷನ ಹೆಸರು ಇರಲಿಲ್ಲ. ಆದರೆ, ಇತರ ವಿದ್ಯಾರ್ಥಿಗಳ ಜೊತೆ ಶ್ರೀಹರ್ಷನನ್ನೂ ವಿಚಾರಣೆಗೆ ಕರೆಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಘಟನೆಯಲ್ಲಿ ಶ್ರೀಹರ್ಷ ಕೂಡಾ ಭಾಗಿಯಾಗಿದ್ದ ಎಂದಿದ್ದರು. ಈ ಕಾರಣಕ್ಕೆ ತಂದೆಯ ಜೊತೆ ವಿಚಾರಣೆಗೆ ಹಾಜರಾಗುವಂತೆ ಶ್ರೀಹರ್ಷನಿಗೂ ತಿಳಿಸಲಾಗಿತ್ತು’

‘ತಂದೆಯ ಜೊತೆಗೆ ಶ್ರೀಹರ್ಷ ವಿಚಾರಣೆಗೋಸ್ಕರ ಬಂದಿದ್ದರೂ, ವಿಚಾರಣೆಗೆ ಒಬ್ಬನೇ ಹಾಜರಾಗಿದ್ದ. ಅದೇ ವೇಳೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ಕೊಂಡೊಯ್ದರೂ ಪ್ರಾಣ ಉಳಿಸಲು ಸಾಧ್ಯವಾಗಿಲ್ಲ. ನಡೆದ ಘಟನೆ ಇಷ್ಟೇ. ಆದರೆ, ಆತ್ಮಹತ್ಯೆಗೆ ಆಡಳಿತ ಮಂಡಳಿಯೇ ಕಾರಣ ಎಂದು ಸುದ್ದಿ ಹಬ್ಬಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ’ ಎಂದೂ ಆಡಳಿತ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT