ಶನಿವಾರ, ಅಕ್ಟೋಬರ್ 1, 2022
23 °C
ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌

‘ಸಾಲ ಮರುಪಾವತಿ ಮಾಡಿದರೆ 10 ದಿನಗಳಲ್ಲಿ ಆಸ್ತಿ ಪತ್ರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದುಕೊಂಡವರು ಸಾಲ ಮರುಪಾವತಿ ಮಾಡಿದ 10 ದಿನಗಳೊಳಗೆ ಅವರ ಆಸ್ತಿ ಪತ್ರದ ದಾಖಲೆಗಳನ್ನು ಹಿಂತಿರುಗಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಶ್ರೀಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅವ್ಯವಹಾರಗಳ ಕುರಿತ ತನಿಖೆಯ ಪ್ರಗತಿ ಹಾಗೂ ಬ್ಯಾಂಕ್‌ನ ಪುನಶ್ಚೇತನದ ಕುರಿತು ಚರ್ಚಿಸಲು ಬುಧವಾರ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಈ ಸಹಕಾರ ಬ್ಯಾಂಕಿನಲ್ಲಿ ₹1,294 ಕೋಟಿ ವಂಚನೆ ಆಗಿರುವುದು ಆಡಿಟ್‌ನಿಂದ ತಿಳಿದುಬಂದಿದೆ. ಸಾಲ ಮರುಪಾವತಿ ಮಾಡಲು ಇಚ್ಛಿಸುವವರಿಗೆ ದಾಖಲೆಗಳನ್ನು ಹಿಂದಿರುಗಿಸಲು ತಡವಾಗುತ್ತಿರುವ ಸಂಬಂಧ ಆಡಳಿತಾಧಿಕಾರಿ, ಭಾರತೀಯ ರಿಸರ್ವ್‌ ಬ್ಯಾಂಕ್‌, ಸಿಐಡಿ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

ಸಾಲ ಪಡೆದವರ ಎಲ್ಲಾ ದಾಖಲೆಗಳು ಇ.ಡಿ (ಜಾರಿ ನಿರ್ದೇಶನಾಲಯ) ಬಳಿ ಇದೆ. ಸಿಐಡಿ ತನಿಖೆಯೂ ನಡೆಯುತ್ತಿರುವುದರಿಂದ ದಾಖಲೆ ನೀಡಲು ವಿಳಂಬವಾಗುತ್ತದೆ ಎಂದು ಹಣ ಪಾವತಿಗೆ ಸಾಲಗಾರರು ಹಿಂದೇಟು ಹಾಕಬಹುದು. ಇ.ಡಿಗೆ 15 ದಿನಗಳೊಳಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸಾಲ ವಸೂಲಾತಿ ಬಗ್ಗೆ ಕೂಡ ಗಂಭೀರ ಚರ್ಚೆಯಾಗಿದೆ. ಸೆ.5ಕ್ಕೆ ಮತ್ತೆ ಸಭೆ ಸೇರಿ ಏನೆಲ್ಲಾ ಪ್ರಗತಿ ಆಗಿದೆ ಎಂಬುದರ ಪರಾಮರ್ಶೆ ನಡೆಸಲಾಗುವುದು. ಸಭೆಯಲ್ಲಿ ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ರವಿಸುಬ್ರಹ್ಮಣ್ಯ ಹಲವು ಸಲಹೆಗಳನ್ನು ನೀಡಿದರು ಎಂದು ತಿಳಿಸಿದರು.

ವಸಿಷ್ಠ ಸೌಹಾರ್ದ ಸಹಕಾರಿ ಬ್ಯಾಂಕ್‌ನಲ್ಲಿ ₹282 ಕೋಟಿ ವಂಚನೆ ಆಗಿದೆ. ಸಾಲ ವಸೂಲಾತಿ ಬಗೆಗಿನ ಕೋರ್ಟ್‌ ನೀಡಿದ್ದ ತಡೆ ತೆರವಾಗಿದೆ. ಸಿಐಡಿ ತನಿಖೆ ನಡೆಯುತ್ತಿದ್ದು, ಸಾಲ ವಸೂಲಿಗೆ ತ್ವರಿತವಾಗಿ ಕ್ರಮ ವಹಿಸಲಾಗುತ್ತದೆ ಎಂದು ಸೋಮಶೇಖರ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.